ಬುಧವಾರ, ಜೂನ್ 16, 2021
23 °C
ಗ್ರಾಮ ಸಂಚಾರ

ಸೌಲಭ್ಯವಿಲ್ಲದ ಹಾರಳ್ಳಿ: ಗ್ರಾಮಸ್ಥರ ಆಕ್ರೋಶ

ಶ.ಗ. ನಯನತಾರಾ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ‘ಮತ್ತೊಂದು ಲೋಕಸಭೆ ಚುನಾವಣೆ ಬರುತ್ತಿದೆ. ಚುನಾವಣೆಗೆ ನಿಂತವರು ಆಶ್ವಾಸನೆಗಳ ಮೂಟೆ ಹೊತ್ತು ಮೂಲೆ ಮೂಲೆಗಳನ್ನು ಹುಡುಕಿ ಮತ ಕೇಳಲು ಬರುತ್ತಾರೆ. ಸ್ವಾತಂತ್ರ್ಯ ಬಂದು 67 ವರ್ಷಗಳಾದರೂ ರಸ್ತೆಗೆ ಡಾಂಬರ್‌ ಹಾಕಿಲ್ಲ. ಇರುವ ಮಣ್ಣಿನ ರಸ್ತೆಯಲ್ಲಿಯೇ ಓಡಾಡುವುದು ದುಸ್ತರವಾಗಿದೆ. ಇಂಥದ್ದರಲ್ಲಿ ನಾವು ಮತ ಮಾಡಬೇಕೆ ಎಂದು ಕೇಳುತ್ತಾರೆ ಹಾರಳ್ಳಿ ಗ್ರಾಮಸ್ಥರು ಆಕ್ರೋಶದಿಂದ ಕೇಳುವ ಪ್ರಶ್ನೆ ಇದು.ಆಲೂರು– ಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾರಳ್ಳಿ ಒಂದು ಪುಟ್ಟ ಗ್ರಾಮ. ಮೂಲ ಸೌಕರ್ಯಗಳಿಲ್ಲದ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುಗ್ರಾಮ.ಪರಿಶಿಷ್ಟ ಜಾತಿ/ಪಂಗಡ, ಗೌಡ, ಲಿಂಗಾಯಿತ, ಮೊದಲಾದ ಜಾತಿಗಳಿಗೆ ಸೇರಿದ 15 ಕುಟುಂಬಗಳಿವೆ. ಎಲ್ಲರೂ ವ್ಯವಸಾಯದಿಂದಲೇ ಜೀವನ ಸಾಗಿಸುತ್ತಿದ್ದಾರೆ.ಮುಖ್ಯ ರಸ್ತೆಯಿಂದ 1.5 ಕಿ.ಮೀ. ದೂರವಿರುವ ಈ ಗ್ರಾಮಕ್ಕೆ ಹೋಗಲು ಇರುವುದೊಂದೇ ಮಣ್ಣಿನ ರಸ್ತೆ. ವಿದ್ಯುತ್ ಕಂಬಗಳಿಲ್ಲ. ವಾಹನ ಸಂಚಾರವೂ ದುಸ್ತರ.20 ವರ್ಷಗಳಿಂದ ಇರುವ ಮಣ್ಣಿನ ರಸ್ತೆಯೂ ದುರಸ್ತಿಯಾಗಲಿಲ್ಲ. ಪ್ರತಿದಿನ ಗ್ರಾಮಸ್ಥರು ಹಾಗೂ ಶಾಲೆ– ಕಾಲೇಜಿಗೆ ಹೋಗುವ ಮಕ್ಕಳು ಇದೇ ರಸ್ತೆಯಲ್ಲಿ ತಿರುಗಾಡಬೇಕು.ಗುಂಡಿ, ಕೊರಕಲು ಉಂಟಾಗಿ ರಸ್ತೆಯೆನ್ನುವ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಮಳೆಗಾಲದಲ್ಲಂತೂ ನೀರು ಹರಿದು ಬರುವ ಈ ರಸ್ತೆಯಲ್ಲಿ ತಿರುಗಾಡುವಂತೆಯೇ ಇಲ್ಲ. ಅಕ್ಕಪಕ್ಕದ ತೋಟದೊಳಗಿನಿಂದ ಓಡಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.ಮಣ್ಣಿನ ರಸ್ತೆಯ ದುರಸ್ತಿಗಾಗಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಹಲವು ಬಾರಿ ಅರ್ಜಿ ಸಲ್ಲಿಸಿದರೂ ಫಲಕಾರಿಯಾಗಲೇ ಇಲ್ಲ. ಬೆಳೆದ ಬೆಳೆಯ ಸಾಗಾಟವೂ ಕಷ್ಟಕರ. ಹದಗೆಟ್ಟ ರಸ್ತೆಯಿಂದ ಜೀವನವೂ ಹದಗೆಟ್ಟಿದ್ದು, ದಾರಿ ಕಾಣದ ಗ್ರಾಮಸ್ಥರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗದಿದ್ದರೇ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟನೆಗೆ ತಯಾರಾಗಿದ್ದೇವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಹೋಗೋದೂ ಕಷ್ಟ

ಗ್ರಾಮದಲ್ಲಿ ಸ್ವಂತ ಮನೆಯಿದೆ. ಆದರೆ ಸರಿಯಾದ ರಸ್ತೇನೇ ಇಲ್ಲವೆಂದ ಮೇಲೆ ತಿರುಗಾಡೋದು ಹೇಗೆ? ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಹೋಗೋದೂ ಕಷ್ಟ. ಅಸುಪಾಸಿನ ತೋಟದೊಳಗಿನಿಂದ ಹಾದು ಹೋಗಿ ಅವರ ಬೈಗುಳ ಕೇಳಬೇಕು.

– ಅಮಾಸೆ

ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?

ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲೂ ಈ ಮಣ್ಣಿನ ರಸ್ತೆಯಲ್ಲಿ ಓಡಾಡುವುದು ಕಷ್ಟ. ಹೆಂಗಸರು, ಮಕ್ಕಳಂತೂ ಪರದಾಡುತ್ತಾರೆ. ಅರ್ಜಿ ಸಲ್ಲಿಸಿದ್ದರೂ ಪಂಚಾಯಿತಿ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ? ಅದಕ್ಕೆ ಪ್ರತಿಭಟನೆಗೆ ಮುಂದಾಗಿದ್ದೇವೆ.

– ಎಚ್.ಎಂ. ನಟೇಶ್    ಶಾಲೆಗೆ ಹೋಗುವುದೂ ಕಷ್ಟ

ಶಾಲೆಗೆ ಹೋಗೋ ಮಕ್ಕಳು ಪ್ರತಿದಿನ ಇದೇ ಮಣ್ಣಿನ ರಸ್ತೆಲಿ ಹೋಗಬೇಕು. ಚರಂಡಿನೇ ಇಲ್ಲದ ರಸ್ತೆ ಮೇಲೆ ಮಳೆಗಾಲದಲ್ಲಿ ನೀರು ಹರಿದು ಹೋಗುವಾಗ ಚಿಕ್ಕ ಮಕ್ಕಳನ್ನ ಶಾಲೆಗೆ ಕಳಿಸೋಕೆ ಆಗಲ್ಲ.

- ನಾಗರಾಜ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.