ಶುಕ್ರವಾರ, ನವೆಂಬರ್ 15, 2019
20 °C

ಸೌಲಭ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ

Published:
Updated:

ಹೂವಿನಹಡಗಲಿ: ಸತತ ನೆರೆ ಹಾವಳಿಗೆ ತುತ್ತಾಗುತ್ತಿದ್ದ ತಾಲ್ಲೂಕಿನ ಮಾಗಳ ಗ್ರಾಮದ ಬಸ್ತಿ ಓಣಿ, ಬ್ಯಾಡರಗೇರಿಯ ಆಯ್ದ ಮನೆಗಳನ್ನು `ಆಸರೆ' ಯೋಜನೆ ಅಡಿ ಮನೆ ನಿರ್ಮಿಸಿದ್ದರೂ ಸರ್ಕಾರ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಂತ್ರಸ್ತರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮಾಗಳ ಗ್ರಾಮದ ಆಯ್ದ ಭಾಗ ಸ್ಥಳಾಂತರದಿಂದ ಊರಿನಲ್ಲಿ ಅನೇಕ ಸಮಸ್ಯೆಗಳು ಬಿಗಡಾಯಿಸಿವೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ವಿವರಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.`ಸ್ಥಳಾಂತರ ಹಿನ್ನೆಲೆಯಲ್ಲಿ ನವಗ್ರಾಮ ಯೋಜನೆ ಅಡಿ ಅತ್ತ ಆಸರೆ ಮನೆಗಳೂ ಇಲ್ಲದೇ, ಇತ್ತ ಅಳಿದುಳಿದ ಮನೆ ಕಟ್ಟಿಕೊಳ್ಳಲು ಕೂಡ ಪರವಾನಿಗೆ ನೀಡದೇ ಸಂಕಷ್ಟ ಎದುರಿಸುವಂತಾಗಿದೆ. ಸ್ಥಳಾಂತರ ನೆಪದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಯಾವುದೇ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಬಸವ ವಸತಿ ಯೋಜನೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡದಿರುವುದರಿಂದ ಕೂಲಿ ಕಾರ್ಮಿಕರು ಬಯಲಲ್ಲಿ ಬದುಕು ಸಾಗಿಸುವಂತಾಗಿದೆ' ಎಂದು ಈಟಿ ಕೋಟೆಪ್ಪ, ಆರ್.ವಸಂತ ಆಕ್ರೋಶ ವ್ಯಕ್ತಪಡಿಸಿದರು.ಕಳೆದ 3 ವರ್ಷಗಳಿಂದ ಬಸ್ತಿ ಓಣಿ, ಬ್ಯಾಡರಗೇರಿ ಸಂತ್ರಸ್ತರು ಸಂಕಷ್ಟದ ನಡುವೆ ಬದುಕು ಸಾಗಿಸುವಂತಾಗಿದೆ. ನವಗ್ರಾಮ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾದ್ದು, ನಿರ್ಮಾಣಗೊಂಡಿರುವ 100 ಮನೆಗಳು ಸಂಪೂರ್ಣ ಕಳಪೆಯಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಮುಂದುವರೆಸುವುದಾಗಿ ಸಂತ್ರಸ್ತರು ಪಟ್ಟು ಹಿಡಿದಿದ್ದರು. ತಾ.ಪಂ. ಸಹಾಯಕ ನಿರ್ದೇಶಕ ಹೊಳಲಯ್ಯ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಏ. 5 ರ ತನಕ ಕಾಲಾವಕಾಶ ನೀಡಿ ಆಗ ಅಧಿಕಾರಿಗಳು ಬಂದು ಸಮಸ್ಯೆ ಬಗೆ ಹರಿಸಲಿದ್ದಾರೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿಯಿಂದ ಹಿಂದೆ ಸರಿದರು.ಪ್ರತಿಭಟನೆಯಲ್ಲಿ ನಿಂಗಪ್ಪ, ಈಟಿ ರಾಮಣ್ಣ, ನೀಲಪ್ಪ, ಮಠದ ರಾಜಪ್ಪ, ಶರಣು, ಶಿವಪುತ್ರಪ್ಪ, ನಿರಲಿಗಿ ಸಿದ್ದಪ್ಪ, ಬಿ.ಸಂತೋಷ, ಎಂ.ನಾರಾಯಣರೆಡ್ಡಿ, ಮಾಬುಸಾಬ್, ದಸ್ತುಸಾಬ್, ದಿಡುಗಪ್ಪ ಸೇರಿದಂತೆ ನೂರಾರು ಸಂತ್ರಸ್ತರು ಧರಣಿಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)