ಸೌಲಭ್ಯ ಕಲ್ಪಿಸಲು ಗಿರಿಜನರ ಒತ್ತಾಯ

7

ಸೌಲಭ್ಯ ಕಲ್ಪಿಸಲು ಗಿರಿಜನರ ಒತ್ತಾಯ

Published:
Updated:

ಯಳಂದೂರು: `ಗಿರಿಜನರಿಗೆ ಮೂಲ ಸೌಲಭ್ಯದ ಕೊರತೆ ಇದೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ವಾಸದ ಮನೆಗಳನ್ನು ಕಲ್ಪಿಸಬೇಕು' ಎಂದು ಸೋಮವಾರ ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲೋನಿಯ ಗಿರಿಜನರ ಸಮುದಾಯ ಭವನದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸೋಲಿಗರು ಒತ್ತಾಯಿಸಿದರು.ಹೋಬಳಿ ವ್ಯಾಪ್ತಿಯಲ್ಲಿ 9 ಪೋಡು ಇವೆ. 2007-08ನೇ ಸಾಲಿನ ಅಂಬೇಡ್ಕರ್ ಯೋಜನೆಯಡಿಯಲ್ಲಿನ ಕೆಲವು ಮನೆಗಳಿಗೆ ಇನ್ನೂ ಕೂಡ ಬಿಲ್ ಪಾವತಿಸಿಲ್ಲ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿನ ಕೆಲಸ ಇನ್ನೂ ಆರಂಭಿಸಿಲ್ಲ.ಕೆಲಸವಾಗಿರುವ ಬಿಲ್ ಇನ್ನೂ ಪಾವತಿಸಿಲ್ಲ. ರಥದ ಬೀದಿಯಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಶಿಥಿಲ ರಥದ ಕಾಮ ಗಾರಿಯೂ ಆರಂಭಗೊಂಡಿಲ್ಲ. ಅಲ್ಲದೇ ಈ ಬೀದಿಯಲ್ಲಿನ ರಸ್ತೆ ತುಂಬಾ ಹದಗೆಟ್ಟಿದೆ. ಶೌಚಾಲಯದ ನಿರ್ವ ಹಣೆಯೂ ಸರಿಯಾಗಿ ಆಗಿಲ್ಲ. ಕೆಲವು ನೀರಿನ ತೊಂಬೆಗಳಿಗೆ ನೀರನ್ನು ತುಂಬಿಸುವಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷಿಸಿದೆ. ಇಲ್ಲಿನ ಗಿರಿಜನರು ಬಡವರಾಗಿದ್ದಾರೆ. ಆದರೆ, ಬಹುತೇಕ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗಿದೆ. ಇವರಿಗೆಲ್ಲಾ ಅಂತ್ಯೋದಯ ಕಾರ್ಡ್‌ಗಳನ್ನು ವಿತರಿಸಬೇಕು ಎಂಬ ಬೇಡಿಕೆ ಮುಂದಿಡಲಾಯಿತು.ಪ್ರತ್ಯೇಕ ಪಂಚಾಯಿತಿ ನೀಡಿ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಬಿಳಿಗಿರಿರಂಗನಬೆಟ್ಟವು ಯರಗಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಇದು ಬೆಟ್ಟದಿಂದ 15 ಕಿ.ಮಿ. ದೂರದಲ್ಲಿದೆ. ಇದೊಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಇಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದೇ 4,500 ಯಿಂದ 5,000 ಜನಸಂಖ್ಯೆಯನ್ನೂ ಹೊಂದಿದೆ. ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಿಂದ ದೂರವಿದೆ. ಹಾಗಾಗಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ. ಆದ್ದರಿಂದ ಪ್ರತ್ಯೇಕ ಪಂಚಾಯಿತಿಯನ್ನೂ ಬೆಟ್ಟಕ್ಕೇ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶಿವನಾಗಯ್ಯ, ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯ ನಿಗದಿತ ಸಮಯಕ್ಕೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇಲ್ಲಿ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಕೆಲ ವಿಷಯಗಳನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಕೇತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ಸದಸ್ಯರಾದ ತಂಟ್ರಿನಂಜೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಘುನಾಥ್, ಸಿಪಿಐ ಕೀರ್ತಿಕುಮಾರ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ಬಿಇಒ ಪಿ. ಮಂಜುನಾಥ್ ಎಇಇ ದೇವರಾಜು, ರಮೇಶ್, ಬೊಮ್ಮಯ್ಯ, ರವಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry