ಸೌಲಭ್ಯ ನಿರೀಕ್ಷೆಯಲ್ಲಿ ಐತಿಹಾಸಿಕ ಧರ್ಮಪುರ

7

ಸೌಲಭ್ಯ ನಿರೀಕ್ಷೆಯಲ್ಲಿ ಐತಿಹಾಸಿಕ ಧರ್ಮಪುರ

Published:
Updated:

ಹಿರಿಯೂರು ತಾಲ್ಲೂಕಿನಿಂದ 34 ಕಿ.ಮೀ. ದೂರದಲ್ಲಿರುವ ಹೋಬಳಿ ಕೇಂದ್ರ ಧರ್ಮಪುರ ಗಡಿ ಗ್ರಾಮವಾಗಿದೆ. ಇಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕಾರ್ಯಗಳು ಈವರೆಗೂ ನಡೆದಿಲ್ಲ. ಧರ್ಮಪುರ ಕೆರೆಗೆ ಫೀಡರ್ ಚಾನಲ್ ಮಾಡಬೇಕು ಎಂಬ ಹೋರಾಟಕ್ಕೆ ಆಡಳಿತ ಯಂತ್ರದಿಂದ ಸ್ಪಂದನೆ ದೊರೆತಿಲ್ಲ. ಕುಡಿಯುವ ನೀರು, ಶೌಚಾಲಯ, ನಿವೇಶನದ ಕೊರತೆ ಮತ್ತು ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ. ಇಡೀ ಗ್ರಾಮ ಮೂಲಸೌಕರ್ಯಗಳ ವೃದ್ಧಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದೆ.ಧರ್ಮವೊಳಲು ಇತಿಹಾಸ

ಪುರಾಣ ಪ್ರಸಿದ್ಧ ಧರ್ಮಪುರ ಗ್ರಾಮಕ್ಕೆ ಹಲವು ಹೆಸರುಗಳಿವೆ. ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಕೆಲಕಾಲ ಇಲ್ಲಿ ತಂಗಿದ್ದು, ಅಡುಗೆ ಮಾಡಿಕೊಳ್ಳಲು ರಾತ್ರಿ ಸೌದೆ ಸಿಕ್ಕದೆ ಅಂದು ಉಪವಾಸವಿದ್ದರಂತೆ. ಆದ್ದರಿಂದ `ಉಪವಾಸಪುರ~ ಎಂಬ ಹೆಸರು ಬಂತೆಂದು ಇಲ್ಲಿ ಈಗಲೂ ಪ್ರತಿ ದಿನ ರಾತ್ರಿ ಐದು ಜನ ಉಪವಾಸ ವೃತ ಆಚರಿಸುತ್ತಾರೆ ಎಂಬುದನ್ನು ಗ್ರಾಮದ ಹಿರಿಯವರಾದ ಕೆ.ಆರ್. ರಂಗಸ್ವಾಮಿ ತಿಳಿಸುತ್ತಾರೆ.ಪಾಂಡವರು ವನವಾಸವಿದ್ದಾಗ ಅವರು ಸ್ಥಾಪಿಸಿದ ಐದು ಲಿಂಗಗಳಿವೆ. ಧರ್ಮರಾಯ ಲಿಂಗ ಪ್ರತಿಷ್ಠಾಪನೆ ಮಾಡಿದ್ದರಿಂದ `ಧರ್ಮಪುರ~ ಎಂಬ ಹೆಸರು ಬಂತೆಂದು, ಪ್ರಾಚೀನ ಕಾಲದಲ್ಲಿ ಇದು ಬ್ರಹ್ಮಪುರಿ (ವಿದ್ಯಾಕೇಂದ್ರ) ಆಗಿತ್ತು. `ಹೇಮಾವತಿ~ಯನ್ನು  ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ನೊಳಂಬವಾಡಿ 32 ಸಾವಿರ ಪ್ರಾಂತ್ಯಗಳಲ್ಲಿ ಧರ್ಮಪುರ ನೊಳಂಬರ ಪಶ್ಚಿಮ ಪ್ರಾಂತ್ಯವಾಗಿದ್ದು, ಇಲ್ಲಿ  ಸಿಂಹಪೋತನ ಹೆಂಡತಿ ಧರ್ಮಮಹಾದೇವಿ ಹೆಸರಿನಲ್ಲಿ `ಧರ್ಮವೊಳಲು~ (ವೊಳಲು-ಪುರ) ಎಂದಿತ್ತು. ಇದು ಇಂದು ಧರ್ಮಪುರ ಆಗಿದೆ ಎಂಬ ಐತಿಹಾಸಿಕ ಉಲ್ಲೇಖಗಳಿವೆ.ಶ್ರವಣಪ್ಪ ಏಕ ಶಿಲಾಮೂರ್ತಿ

ಕೆರೆ ಏರಿ ಮೇಲೆ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿದ ಮನಮೋಹಕ ವಿಗ್ರಹವೊಂದಿದೆ. ಅದೇ `ಶ್ರವಣಪ್ಪ~. ಈತ ಹರಿಜನ ವರ್ಗಕ್ಕೆ ಸೇರಿದ್ದು, ಊರ ತಳವಾರಿಕೆ ಮಾಡುತ್ತಿದ್ದಾಗ, ಈತನನ್ನು ಕೆರೆ ಕಾವಲಿಗೆ ನೇಮಿಸ್ದ್ದಿದರು. ಕೆರೆಯ ಗಂಗೆ ನಾನು ಹೊರಟು ಹೋಗುತ್ತೇನೆ ಎಂದು ಹೇಳಿದಾಗ, ಶ್ರವಣಪ್ಪ ಹೇಳಿದನಂತೆ `ಅಮ್ಮಾ ನೀನು ಊರು ಬಿಟ್ಟು ಹೋದರೆ ನಮ್ಮ ಊರಿನ ಗತಿ ಏನು? ಊರಿನ ಹಿರಿಯರನ್ನು ವಿಚಾರಿಸಿ ಅಪ್ಪಣೆ ಪಡೆದು ಬರುತ್ತೇನೆ. ಅಲ್ಲಿವರೆಗೂ ನೀನು ಹೋಗಬಾರದು ಎಂದು ಆಕೆಯಿಂದ ಪ್ರಮಾಣ ಮಾಡಿಸಿಕೊಂಡು ಊರ ಹಿರಿಯರ ಹತ್ತಿರ ವಿಚಾರಿಸಿದನಂತೆ.ಆಗ ಹಿರಿಯರು ಯೋಚಿಸಿದರಂತೆ, ಈತನನ್ನು ಕೆರೆಯ ಬಳಿಗೆ ಕಳುಹಿಸಿದರೆ ಗಂಗೆ ಹೋಗಿಬಿಡುತ್ತಾಳೆ. ಗಂಗೆ ಇಲ್ಲದೆ ಬದುಕುವುದಾದರೂ ಹೇಗೆಂದು ಚಿಂತಿಸಿ ಊರ ಹಿತಕ್ಕಾಗಿ ಶ್ರವಣಪ್ಪನನ್ನು ಕೆರೆಯ ಬಳಿಗೆ ಕಳುಹಿಸದೆ ಕೊಂದು ಹಾಕಿದರಂತೆ! ಅವನ ಹಾದಿ ಕಾಯುತ್ತಾ ಗಂಗೆ ಅಲ್ಲಿಯೇ ಉಳಿದಳಂತೆ ಎಂಬ ಕಥೆಯನ್ನು ಹಿರಿಯರು ಹೇಳುತ್ತಾರೆ.ಈಗ ಅದೇ ಶ್ರವಣಪ್ಪ ಮಕ್ಕಳಿಲ್ಲದ ಬಂಜೆಯರಿಗೆ ಮಕ್ಕಳ ಫಲ ಕೊಡುವ ವೀರಪುರುಷನಾಗಿದ್ದಾನೆ ಎಂಬ ನಂಬಿಕೆ ಇಲ್ಲಿದೆ. ಅದರೆ, ಹಿಂದೆ ಜೈನ ಧರ್ಮೀಯರು ಇಲ್ಲಿದ್ದರು. ಜೈನ ದಿಗಂಬರ ಸಂಕೇತವೇ ಈ ಶ್ರವಣಪ್ಪ ಎಂಬುದು ಇತಿಹಾಸ (`ಹಿರಿಯೂರು ಐಸಿರಿ~- ಪುಸ್ತಕದಿಂದ ಈ ಮಾಹಿತಿ ದೊರೆಯುತ್ತದೆ).ಗ್ರಾಮದಲ್ಲಿ, ಪ್ರಗತಿ ಗ್ರಾಮೀಣ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್, ಅನುದಾನಿತ ಪ್ರೌಢಶಾಲೆ, ಅನುದಾನ ರಹಿತ ಪ್ರೌಢಶಾಲೆ, ಅನುದಾನಿತ ಪದವಿಪೂರ್ವ ಕಾಲೇಜು, ಅನುದಾನರಹಿತ ಪ್ರಥಮದರ್ಜೆ ಕಾಲೇಜು, ಅನುದಾನ ರಹಿತ ಡಿ.ಇಡಿ. ಕಾಲೇಜು, ಎರಡು ಐಟಿಐ ಕಾಲೇಜು, ಮೂರು ಕಾನ್ವೆಂಟ್, ಪ್ರವಾಸಿ ಮಂದಿರ, ಮೂರು ಸಮುದಾಯ ಭವನ, ಎರಡು ಮಹಿಳಾ ಭವನ, ಎರಡು ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಇದೆ.ಪಂಚಲಿಂಗಗಳು ಮುಜರಾಯಿ ಇಲಾಖೆಗೆ

ಇಲ್ಲಿರುವ ಪಂಚಲಿಂಗಗಳು ಮತ್ತು ದೇವಾಲಯಗಳು ಮನಮೋಹಕವಾಗಿವೆ. ಅವಸಾನದ ಅಂಚಿನಲ್ಲಿವೆ. ಐದು ದೇವಾಲಯಗಳು ಶಿಥಿಲಗೊಂಡಿದ್ದು, ಅದೆಷ್ಟೋ ಬಾರಿ ಅಂತರರಾಜ್ಯ ಕಳ್ಳರು ಆಕರ್ಷಕ ಲಿಂಗಗಳನ್ನು ಅಪಹರಿಸುವ ದುಸ್ಸಾಹಸ ಮಾಡಿದ್ದಾರೆ. ಅದಕ್ಕಾಗಿ ಸರ್ಕಾರ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಿಕೊಂಡು ಅರ್ಚಕರ ನೇಮಕ ಮಾಡಬೇಕು ಎಂದು ನಿವೃತ್ತ ದೈಹಿಕ ಶಿಕ್ಷಕ ಪಿ.ಎಚ್. ತಿಮ್ಮಪ್ಪ ಒತ್ತಾಯಿಸುತ್ತಾರೆ.ಫೀಡರ್ ಚಾನಲ್ ಮತ್ತು ತಾಲ್ಲೂಕು ರಚನೆ ಹೋರಾಟ

ಪುರಾಣ ಪ್ರಸಿದ್ಧ ಧರ್ಮಪುರ ಕೆರೆ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ. ಸತತ ಬರಗಾಲಕ್ಕೆ ತುತ್ತಾಗಿರುವ ಇಲ್ಲಿಯ ಜನಕ್ಕೆ ಯಾವುದೇ ನೀರಾವರಿ ಮೂಲಗಳಿಲ್ಲ. ಜನ ಗುಳೇ ಹೋಗಿದ್ದಾರೆ. ಕೆರೆಗೆ ಫೀಡರ್ ಚಾನಲ್ ಕಲ್ಪಿಸಬೇಕು ಎಂಬ ಹೋರಾಟಕ್ಕೆ ಶತಮಾನದ ಸಂಭ್ರಮವೇ ಹೊರತು, ಕಾಯಕಲ್ಪ ಮರೀಚಿಕೆಯಾಗಿದೆ.ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ನೀಡಿದ ಆಶ್ವಾಸನೆಗಳು ಕಾರ್ಯಗತವಾಗಿಲ್ಲ. ಧರ್ಮಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಅನೇಕ ವರದಿಗಳು ಶಿಪಾರಸ್ಸು ಮಾಡಿವೆ. ಆದರೆ, ಇಚ್ಛಾಶಕ್ತಿ ಕೊರತೆ ಮತ್ತು ಬದ್ಧತೆ ಇಲ್ಲದಿರುವುದರಿಂದ ಇದು ಸಾಧ್ಯವಾಗಿಲ್ಲ ಎಂದು ಫೀಡರ್ ಚಾನಲ್ ಮತ್ತು ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಂ. ಶಿವಣ್ಣ ನೊಂದು ನುಡಿಯುತ್ತಾರೆ.

ಪಟ್ಟಣ ಪಂಚಾಯ್ತಿಧರ್ಮಪುರ ಗ್ರಾಮ ಪಂಚಾಯ್ತಿ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಬೇಕು. ಹಿರಿಯೂರು- ಧರ್ಮಪುರ- ಪಾವಗಡ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಿ ವಿದ್ಯುತ್ ದೀಪ ಅಳವಡಿಸಬೇಕು.

 

ಸುವರ್ಣ ಗ್ರಾಮೋದಯ ಯೋಜನೆಯ ಕೆಲಸಗಳು ಕಳಪೆಯಾಗಿದ್ದು, ಕ್ರಮ ಕೈಗೊಳ್ಳಬೇಕು. ಗ್ರಾಮದ ಒಳಗಿನ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಬೇಕು. ಚಳ್ಳಕೆರೆಯಿಂದ ಧರ್ಮಪುರ ಮಾರ್ಗವಾಗಿ  ಶಿರಾ ಹಾಗೂ ತುಮಕೂರಿಗೆ ಹೊಸ ರೈಲ್ವೆ ಮಾರ್ಗ ಅನುಷ್ಠಾನವಾಗಬೇಕು.

 

ಇಲ್ಲಿ ಯಥೇಚ್ಛವಾಗಿ ಬೆಳೆಯುವ ತೋಟಗಾರಿಕಾ ಬೆಳೆಗಳಾದ ಸಪೋಟ, ದಾಳಿಂಬೆ, ಅಂಜೂರ, ಮಾವು, ಮೋಸಂಬಿ, ಪಪ್ಪಾಯಿ ಹಗೂ ರೇಷ್ಮೆಯನ್ನು ಮಾರುಕಟ್ಟೆಗೆ ತ್ವರಿತವಾಗಿ ಸಾಗಿಸಲು ಅನುಕೂಲವಾಗಲಿದೆ. ಆಂಧ್ರಪ್ರದೇಶದ ಗಡಿಯಲ್ಲಿನ ಜನತೆಗೂ ಇದರಿಂದ ಸಹಾಯವಾಗಲಿದೆ ಎಂದು ಉಪ ಪ್ರಾಂಶುಪಾಲ ಎಚ್. ಜುಂಜಪ್ಪ ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry