ಮಂಗಳವಾರ, ಮೇ 11, 2021
24 °C

ಸೌಲಭ್ಯ ನಿರೀಕ್ಷೆಯಲ್ಲಿ ಮುತ್ತಿಗಾರಹಳ್ಳಿ

ಪ್ರಜಾವಾಣಿ ವಾರ್ತೆ / ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ತಾಲ್ಲೂಕಿನ ಚಿತ್ರಣ ಕಾಣಬೇಕಾದಲ್ಲಿ ತಾಲ್ಲೂಕಿನ ಮುತ್ತಿಗಾರಹಳ್ಳಿ ಗ್ರಾಮವನ್ನು ಒಮ್ಮೆ ನೋಡಬೇಕು.ಬಿ.ಜಿ.ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಮುತ್ತಿಗಾರಹಳ್ಳಿಯಲ್ಲಿ 550 ಮನೆಗಳಿದ್ದು, ಅಂದಾಜು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶೇ 80ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಇಲ್ಲಿ ವಾಸ ಮಾಡುತ್ತಿದ್ದು, ಕೂಲಿ ಮತ್ತು ಜಾನುವಾರು ಸಾಕುವುದ ಇಲ್ಲಿನ ಮುಖ್ಯ ಕಸುಬು.ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಮರೀಚಿಕೆಯಾಗಿದ್ದು, ತ್ಯಾಜ್ಯ ನೀರು ರಸ್ತೆ ಮೇಲೆ, ಮನೆಗಳ ಮುಂದೆ ನಿಂತುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ಉತ್ತಮ ಕಾರ್ಯಗಳು ನಡೆದಿಲ್ಲ.  ಕಾಮಗಾರಿಗಳು ಮಧ್ಯವರ್ತಿಗಳ ಪಾಲಾಗಿದೆ, ಅರ್ಹ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ.ವಸತಿ ಯೋಜನೆಯಲ್ಲಿಯೂ ಮಂಜೂರಾಗಿರುವ ಮನೆಗಳ ಹಣ ನೀಡಲು ಗ್ರಾ.ಪಂ. ಸತಾಯಿಸುತ್ತಿದೆ ಎಂದು ಗ್ರಾಮಸ್ಥರಾದ ಎಂ. ನಾಗರಾಜ್, ಪಾಲಯ್ಯ ದೂರುತ್ತಾರೆ.ಶುದ್ಧ ಕುಡಿಯುವ ನೀರು ನೀಡುವಲ್ಲಿ ಗ್ರಾ.ಪಂ. ಗಮನಹರಿಸುತ್ತಿಲ್ಲ, ಬಿ.ಜಿ. ಕೆರೆಯ ಪ್ರಗತಿಪರ ರೈತ ಎಸ್.ಸಿ. ವೀರಭದ್ರಪ್ಪ ಅವರ ತೋಟಕ್ಕೆ ಇಲ್ಲಿನ ಕೆರೆ ಸಮೀಪದಿಂದ ಪೈಪ್‌ಲೈನ್ ಮೂಲಕ ಪಡೆದುಕೊಂಡಿರುವ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಸಾಂಸ್ಕೃತಿಕ ಚಟುವಟಿಕೆಗಾಗಿ ಇಲ್ಲಿ ನಿರ್ಮಿಸಿರುವ ಸಮುದಾಯ ಭವನ ಸೇವೆಯಿಂದ ದೂರವಾಗಿದೆ. ಕೃಷಿ ಇಲಾಖೆ ಈ ಕಟ್ಟಡದಲ್ಲಿ ಮೂರು ವರ್ಷದ ಹಿಂದೆ ಜಿಪ್ಸಂ ಪುಡಿಯನ್ನು ದಾಸ್ತಾನು ಮಾಡಿದ್ದು, ಕಟ್ಟಡದ ನೆಲ, ಗೋಡೆಗಳು ಪೂರ್ಣ ಹಾನಿಗೊಳಗಾಗಿದೆ. ಕಟ್ಟಡ ಒಳಭಾಗ ಮಲ, ಮೂತ್ರ ತಾಣವಾಗಿ ಪರಿಣಿಮಿಸಿದ್ದು, ಉಪಯೋಗಕ್ಕೆ ಮಾಡಿದ ಮನವಿಗೆ ಬೆಲೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.