ಶುಕ್ರವಾರ, ಫೆಬ್ರವರಿ 26, 2021
30 °C
ಕೊರಗ ಸಮುದಾಯ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ಸಮಾರೋಪ

ಸೌಲಭ್ಯ ಸದುಪಯೋಗ ಅಗತ್ಯ: ಎಂ. ಕನಗವಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯ ಸದುಪಯೋಗ ಅಗತ್ಯ: ಎಂ. ಕನಗವಲ್ಲಿ

ಬ್ರಹ್ಮಾವರ: ಆದಿವಾಸಿಗಳನ್ನು ಸಮಾಜದ ಮುಖ್ಯ­ವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಮೇಲೆ ಬರಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಕನಗವಲ್ಲಿ ಕೊರಗ ಸಮುದಾಯದ ಮಕ್ಕಳಿಗೆ ಸಲಹೆ ನೀಡಿದರು.ಬ್ರಹ್ಮಾವರದ ಎಸ್‌ಎಂಎಸ್‌ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಐಟಿಡಿಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಮತ್ತು ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಸಹಯೋಗದಲ್ಲಿ 10ದಿನಗಳ ಕಾಲ ಕೊರಗ ಸಮುದಾಯದ ವಿದ್ಯಾರ್ಥಿಗಳಿಗಾಗಿ ನಡೆದ ಬೇಸಿಗೆ ಶಿಬಿರ ಮತ್ತು ಕ್ರೀಡಾ ಅನ್ವೇಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ನಗರದ ಪ್ರದೇಶದ ಮಕ್ಕಳು ಇಂತಹ ಬೇಸಿಗೆ ಶಿಬಿರಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಇಂತಹ ಅನೇಕ ಶಿಬಿರಗಳು ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು.ಓ.ಎಸ್‌.ಸಿ ಎಜುಕೇಶನಲ್‌ ಸೊಸೈಟಿಯ ಅಧ್ಯಕ್ಷ ಫಾ.ಡೇವಿಡ್‌ ಲಾರೆನ್ಸ್‌ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿಬಿರಾರ್ಥಿಗಳಾದ ಸಚಿನ್‌, ಶಿಲ್ಪಾ, ಭರತ್‌ ಮತ್ತಯ ಪ್ರತಿಭಾ ತಮ್ಮ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಬ್ರಹ್ಮಾವರ ಎಸ್‌.ಎಂ.ಎಸ್‌ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್‌.ನರೋನ್ಹಾ, ಕೊರಗ ಸಂಘ­ಟನೆಯ ಕುಮಾರ್‌, ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಅಧ್ಯಕ್ಷ ಭರತ್‌ ಕುಮಾರ್‌ ಶೆಟ್ಟಿ, ಸಂಚಾಲಕ ಚಂದ್ರಶೇಖರ್‌ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಡಾ.ಉದಯ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಐಟಿಡಿಪಿಯ ಕಚೇರಿ ಸಹಾಯಕ ವಿಶ್ವನಾಥ ಶೆಟ್ಟಿ ವಂದಿಸಿದರು. ಇದಕ್ಕೂ ಮುನ್ನ ಶಿಬಿರಾರ್ಥಿಗಳು ಕೊರಗ ಸಮುದಾಯದ ಡೋಲು ಕುಣಿತದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

‘ಆದಿವಾಸಿ ಭಾಷೆ, ಕುಲಕಸುಬಿಗೆ ತರಬೇತಿ ಅಗತ್ಯ’

ಶಿಬಿರದ ಮೇಲ್ವಿಚಾರಕರಾಗಿ 10ದಿನಗಳ ಕಾಲ ಶಿಬಿರಾರ್ಥಿಗಳೊಂದಿಗೆ ಇದ್ದ ಕೊರಗ ಸಮುದಾಯದ ಬಾಬಣ್ಣ ಮಾತನಾಡಿ, ಶಿಬಿರದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಆದರೆ ನಶಿಸುತ್ತಿರುವ ಆದಿವಾಸಿಗಳಿಗೆ ಸಂಬಂಧಪಟ್ಟ ಭಾಷೆ, ಕುಲಕಸುಬಿನ ಬಗ್ಗೆ ತರಬೇತಿಯನ್ನಾಗಲೀ, ಮಾಹಿತಿಯನ್ನಾಗಲೀ ನೀಡದೇ ಇರುವುದು ಬೇಸರದ ಸಂಗತಿ. ಕೊರಗ ಸಮುದಾಯದಲ್ಲೇ ಇರುವ ಸಂಪನ್ಮೂಲ ವ್ಯಕ್ತಿಗಳಿಂದ ಸಮುದಾಯದ ಬಗ್ಗೆ ತರಬೇತಿಯನ್ನು ಮುಂದಿನ ವರ್ಷದಿಂದ ನೀಡಬೇಕು. ಶಿಬಿರದಲ್ಲಿ ರಾತ್ರಿಯ ಸಮಯದಲ್ಲಿ ಇಲಾಖೆಯ ಅಧಿಕಾರಿಗಳು ಇರಬೇಕು ಎನ್ನುವ ಶಿಬಿರದ ಅನುಭವದ ಮಾತುಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.