ಸೌಹಾರ್ದ ದಸರಾ, ಸಹ ಭೋಜನ ಕೂಟ

7

ಸೌಹಾರ್ದ ದಸರಾ, ಸಹ ಭೋಜನ ಕೂಟ

Published:
Updated:

ಮೈಸೂರು: `ದಸರಾ ಕೆ ರಂಗ ಹೈ..ಚಾಮುಂಡಿ ಅಮ್ಮ ಸಾಥ್ ಹೈ~.. `ವೈಷ್ಣವ ಜನತೋ ತೇನೆ ಕಹಿ~.. `ಈ ಭೂಮಿ ಸ್ವರ್ಗವಿದು ಕರ್ನಾಟಕ..ಹೂ ದೋಟಗಳ ರಾಜಧಾನಿ ಈ ಮೈಸೂರು~..ಎಂಬ ಹಾಡುಗಳು ನೆರೆದ ಸಭಿಕರನ್ನು ಭಾವುಕರನ್ನಾಗಿ ಮಾಡಿದವು.ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ನಗರದ ಪುಟ್ಟಮ್ಮ ರಾಮಯ್ಯ ಕಲ್ಯಾಣ ಮಂಟದಲ್ಲಿ ಭಾನುವಾರ ಏರ್ಪಡಿಸಿದ್ದ ಸೌಹಾರ್ದ ದಸರಾ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಎಲ್ಲ ಜನಾಂಗದವರೂ ಪಾಲ್ಗೊಂಡಿದ್ದರು. ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದರು.  ಫಂಕಾರ್ ವೆಲ್‌ಫೇರ್ ಸೊಸೈಟಿಯ ಉಸ್ತಾದ್ ಜಹಿಉಲ್ಲಾ ಖಾನ್ ಹಾಗೂ ತಂಡದ ಸದಸ್ಯರು ಘಜಲ್, ಕವ್ವಾಲಿಯನ್ನು ಭಾಪೂರ್ಣವಾಗಿ ಹಾಡುವ ಮೂಲಕ ಗಮನ ಸೆಳೆದರು. ಬಳಿಕ `ಹಿಂದೂ-ಮುಸ್ಲಿಂ ಒಗ್ಗಟ್ಟು ಬಹಳ..ಶಾಂತಿಯ ನೆಲ ಇದು ಕರ್ನಾಟಕ..ಮೈಸೂರು ಚಂದ ಸ್ವರ್ಗ ವಾಹಿನಿ~..ಹಾಡಿನೊಂದಿಗೆ ಭಾವೈಕ್ಯ ಸಾರಿದರು.ಇಂದ್ರಾಣಿ ಅನಂತ್‌ರಾಮ್ ಅವರು `ವೈಷ್ಣವ ಜನತೋ ತೇನ ಕಹಿ~ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಮನೋಜ್ ಮ್ಯಾನುಅಲ್, ಡಿಸೋಜಾ, ವಿಲ್‌ಫ್ರೆಡ್ ಅವರು ಕ್ರಿಶ್ಚಿಯನ್ ಸ್ತುತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

 ಬಳಿಕ ನಡೆದ ಸಹಭೋಜನ ಕೂಟದಲ್ಲಿ ಎಲ್ಲರೂ ಬೆರೆತು ತರಕಾರಿ ಬಾತ್, ಮೊಸರು ಅನ್ನ, ವಡೆ, ಮೈಸೂರು ಪಾಕ್ ಅನ್ನು ಸ್ವೀಕರಿಸಿದರು.ಸೌಹಾರ್ದ ಬದುಕಿಗೆ ದಸರಾವೇದಿಕೆ

ಸೌಹಾರ್ದ ದಸರಾ ಕಾರ್ಯಕ್ರಮವನ್ನು ಮೈಸೂರಿನ ಬಿಷಪ್ ಥಾಮಸ್ ವಾಳಪಿಳ್ಳೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, `ಸೌಹಾರ್ದ ಬದುಕಿಗೆ ಮೈಸೂರು ದಸರಾ ವೇದಿಕೆ ಆಗಿದ್ದು, ದೇಶಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಒಂದೇ ದೇಶದ ಪ್ರಜೆಗಳು, ಒಂದೇ ದೇವರ ಮಕ್ಕಳು. ಸೌಹಾರ್ದದಿಂದ ಬದುಕಿದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ. ರಕ್ತಗತವಾಗಿ ಧರ್ಮ ಬೇರೆ ಆಗಿದ್ದರೂ ನಾವು ಬದುಕಿರುವ ಸಮಾಜ ಒಂದೇ ಎಂದು ಅರಿತುಕೊಳ್ಳಬೇಕು~ ಎಂದು ಹೇಳಿದರು.ಮೌಲ್ವಿ ಉಸ್ಮಾನ್ ಷರೀಫ್ ಮಾತನಾಡಿ, `ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಿರಲಿ ಎಲ್ಲರೂ ದಸರಾದಲ್ಲಿ ಸಂತೋಷದಿಂದ ಪಾಲ್ಗೊಳ್ಳಬೇಕು. ಎಲ್ಲ ಧರ್ಮಗಳನ್ನೂ ಗೌರವಿಸಬೇಕು. ಮೈಸೂರು ಮಹಾರಾಜರು ತಮ್ಮ ಆಸ್ಥಾನದಲ್ಲಿ ಎಲ್ಲ ಧರ್ಮೀಯರಿಗೂ ಆಶ್ರಯ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಾತಿ, ಮತ, ಧರ್ಮ ಮೀರಿ ಎಲ್ಲರೂ ದಸರಾದಲ್ಲಿ ಪಾಲ್ಗೊಳ್ಳುವ ಮೂಲಕ ಮಹಾರಾಜರಿಗೆ ಗೌರವ ಸಲ್ಲಿಸಬೇಕು~ ಎಂದು ಕರೆ ನೀಡಿದರು.ಸತ್ಯೇಶಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ನಗರ ಪೊಲೀಸ್ ಆಯುಕ್ತ ಸುನಿಲ್ ಅಗರ್‌ವಾಲ್, ಡಿಸಿಪಿಗಳಾದ ಬಸವರಾಜ್ ಮಾಲಗತ್ತಿ, ರಾಜೇಂದ್ರ ಪ್ರಸಾದ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ತಾಜ್ ಮಹಮ್ಮದ್ ಖಾನ್ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry