ಗುರುವಾರ , ನವೆಂಬರ್ 21, 2019
27 °C

`ಸೌಹಾರ್ದ ವಾತಾವರಣಕ್ಕೆ ಸಂಕಲ್ಪ'

Published:
Updated:

ಕೆಜಿಎಫ್: ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸಿದ್ಧಾಂತಗಳಿಗೆ ಬದ್ಧರಾಗಿ ಮತ ಚಲಾವಣೆ ಮಾಡಬೇಕು. ಸಮಾಜದಲ್ಲಿ ಸಂಘರ್ಷ ಉದ್ಭವಿಸುವಂತೆ ಮಾಡುವ ಶಕ್ತಿಗಳನ್ನು ದೂರವಿಡಬೇಕು. ಈ ದಿಸೆಯಲ್ಲಿ ಕ್ಷೇತ್ರದ ಹಿತದೃಷ್ಟಿಯಿಂದ ಈ ಬಾರಿ ಪಕ್ಷಭೇದ ಮರೆತು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ನವೀನ್‌ರಾಂ ಹೇಳಿದರು.ಸಮೀಪದ ಕ್ಯಾಸಂಬಳ್ಳಿಯಲ್ಲಿ ಸೋಮವಾರ ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕು. ಸಮಾಜದ ಎಲ್ಲಾ ವರ್ಗದಲ್ಲೂ ಸೌಹಾರ್ದ ವಾತಾವರಣವಿರಬೇಕು. ಕಳೆದ 5 ವರ್ಷಗಳಿಂದ ಜನ ಸಾಮಾನ್ಯರು ಗ್ರಾಮೀಣ ಪ್ರದೇಶದಲ್ಲಿ ಅನುಭವಿಸಿದ ಯಾತನೆ ಕೊನೆಗಾಣಿಸಲು ಜೆಡಿಎಸ್ ಬೆಂಬಲಿಸುತ್ತಿರುವುದಾಗಿ ಹೇಳಿದರು.ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುನಿರತ್ನಂನಾಯ್ಡು ಮಾತನಾಡಿ, ಎಲ್ಲಿಂದಲೋ ಬಂದ ಸಂಪಂಗಿಯವರನ್ನು ಶಾಸಕರನ್ನಾಗಿ ಈ ಕ್ಷೇತ್ರದ ಜನ ಆಯ್ಕೆ ಮಾಡಿದರು. ನಂತರ ಅವರು ಸರ್ಕಾರದ ವಿರುದ್ಧವೇ ತಿರುಗಿಬಿದ್ದರು. ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದರು. ಆದ್ದರಿಂದ ಈ ಬಾರಿ ಜೆಡಿಎಸ್‌ಗೆ ಬೆಂಬಲ ನೀಡಲಾಗುವುದು ಘೋಷಿಸಿದರು.ಮನೆಯಲ್ಲಿದ್ದ ಮಹಿಳೆಯನ್ನು ಚುನಾವಣೆ ಕಣಕ್ಕೆ ತಂದ ಬಿಜೆಪಿಯಿಂದ ಜನ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸದಾ ಜನಸೇವೆ ಮಾಡುವ ಮತ್ತು ಜನರ ಕೈಗೆ ಸಿಗುವ ಸ್ಥಳೀಯ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದರು.ಜೆಡಿಎಸ್ ಅಭ್ಯರ್ಥಿ ಎಂ.ಭಕ್ತವತ್ಸಲಂ ಮಾತನಾಡಿದರು. ಮುಖಂಡರಾದ ಕೆ.ರಾಜೇಂದ್ರನ್, ಚಿನ್ನು, ಪ್ರಸಾದ್‌ರೆಡ್ಡಿ, ಗುರುವಾರೆಡ್ಡಿ ಮೊದಲಾದವರು ಹಾಜರಿದ್ದರು. ಬಿಜೆಪಿಗೆ ಸೇರಿದ ಹಲವಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)