ಸ್ಕೂಲಲ್ಲಿ ಮೊಬೈಲ್:ದಾಳಿಯೇ ದಾರಿ!

ಮಂಗಳವಾರ, ಜೂಲೈ 23, 2019
25 °C

ಸ್ಕೂಲಲ್ಲಿ ಮೊಬೈಲ್:ದಾಳಿಯೇ ದಾರಿ!

Published:
Updated:

ಅದು ಆರನೇ ಕ್ಲಾಸ್. ಹುಡುಗರ ಸಾಲಿನ ನಾಲ್ಕನೇ ಬೆಂಚಿನಲ್ಲಿ ಕೂತವನು ಆದಿತ್ಯ. ಮೊದಲ ಪೀರಿಯೆಡ್‌ನಲ್ಲಿ ಗಣಿತ ಮೇಷ್ಟ್ರು ಬೋರ್ಡ್ ಮೇಲೆ ಲೆಕ್ಕ ಬಿಡಿಸುತ್ತಿದ್ದರು. ತಲೆತಗ್ಗಿಸಿ ಕುಳಿತ ಅವನ ಸ್ನೇಹಿತ ವಿಕಾಸ್ ಲಕ್ಷ್ಯ ಆ ಕಡೆ ಇಲ್ಲ. ಆದಿತ್ಯನ ಕೈ ನಿಧಾನವಾಗಿ ಜೇಬಿಗಿಳಿಯಿತು.

 

ಕಳೆದ ರಜೆಯಲ್ಲಷ್ಟೇ ಅಪ್ಪ ತೆಗೆಸಿಕೊಟ್ಟ ದುಬಾರಿ ಮೊಬೈಲ್ ಜೇಬಿನಲ್ಲಿ ಬೆಚ್ಚಗೆ ಕೂತಿತ್ತು. ರೀಡಯಲ್ ಒತ್ತಿದ. ಮೊಬೈಲ್ ಹೊಸತಾದರೂ ಸ್ಕ್ರೀನ್ ನೋಡದೆ ಒತ್ತುವಷ್ಟು ಪರಿಣತಿ ಅವನದ್ದು. ತರಗತಿ ನಡೆಯುವಾಗ ಮೊಬೈಲನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವ ವಿಕಾಸ್ ಮೊಬೈಲ್ ಅಂದು ಸಹಜ ಮೋಡ್‌ನಲ್ಲೇ ಇತ್ತು. ಹಾಗಾಗಿ ಆದಿತ್ಯ ಕೊಟ್ಟ ಮಿಸ್‌ಕಾಲ್‌ನಿಂದ ಮೊಬೈಲ್ ರಿಂಗಣಿಸಿತು. ಮೇಷ್ಟರು ಅವನನ್ನು ಕೆಲವೇ ಕ್ಷಣಗಳಲ್ಲಿ ಕ್ಲಾಸಿನಿಂದ ಹೊರಹಾಕಿದರು.

***

ಮತ್ತೊಂದು ಖಾಸಗಿ ಶಾಲೆ. ಅಲ್ಲೂ ಮೊಬೈಲ್ ಬಳಕೆ ನಿಷಿದ್ಧ. ಹೀಗಿದ್ದೂ ಕೆಲವರು ಕದ್ದು ತರಗತಿಗೆ ಮೊಬೈಲ್ ತರುತ್ತಿರುವ ಸುದ್ದಿ ಆಡಳಿತ ಮಂದಿ ಕಿವಿಗೆ ಬಿದ್ದಿತ್ತು. ತಂಡ ಕಟ್ಟಿಕೊಂಡು ಆ ಆಡಳಿತ ಮಂಡಳಿಯವರು ರೇಡ್ ಮಾಡಿಯೇಬಿಟ್ಟರು. ಹೇಳಿಕೇಳಿ ಅದು ಪ್ರತಿಷ್ಠಿತ ಶಾಲೆ.60ಕ್ಕೂ ಹೆಚ್ಚು ಕೊಠಡಿಗಳು. ಏಳನೇ ತರಗತಿ `ಬಿ~ ವಿಭಾಗದಲ್ಲಿ ನಡೆದ ರೇಡ್‌ನ ಸಂದೇಶ ಮೂರೇ ಸೆಕೆಂಡುಗಳಲ್ಲಿ ಎಂಟನೇ ತರಗತಿಯ `ಡಿ~ ವಿಭಾಗಕ್ಕೆ ರವಾನೆಯಾಗಿತ್ತು. ಅಲ್ಲಿನ ಒಬ್ಬ ವಿದ್ಯಾರ್ಥಿ ತಕ್ಷಣ ಎಚ್ಚೆತ್ತುಕೊಂಡು ಮೊಬೈಲನ್ನು ತನ್ನ ಶೂ ಕೆಳಗೆ ತೂರಿಸಿದ್ದ. ತಂಡ ರೇಡ್ ಮಾಡುವ ಹೊತ್ತಿಗೆ ಸಾಕ್ಸ್ ಕೆಳಗೆ ಕಾಲಿನಡಿ ಇಟ್ಟಿದ್ದ ಮೊಬೈಲ್ ಶಬ್ದ ಮಾಡಬೇಕೆ? ಆತ ಥರಗುಟ್ಟಿಹೋದ. ಪರಿಶೀಲಿಸಲು ಬಂದ ತಂಡ ಅವನ ಶೂ ಬಿಚ್ಚಿಸಿ ಮೊಬೈಲ್ ಪತ್ತೆಹಚ್ಚಿದರು.

***ನಗರದ ಶಾಲೆಗಳಲ್ಲಿ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕರು ಇಂಥ ಅಸಂಖ್ಯ ಅನುಭವಗಳನ್ನು ಹೇಳಿಕೊಳ್ಳುತ್ತಾರೆ. ಬಹುತೇಕ ಶಾಲೆಗಳು ತರಗತಿಗೆ ಮೊಬೈಲ್ ತರುವಂತಿಲ್ಲ ಎಂಬ ಕಡ್ಡಾಯ ನಿಯಮ ಜಾರಿಗೊಳಿಸಿದ್ದರೂ ಕದ್ದು ಮುಚ್ಚಿ ತರುವವರೇ ಹೆಚ್ಚು. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಸಿಮ್ ತೆಗೆದಿಡುತ್ತಾರೆ.ರೇಡ್ ಮಾಡಿದರೆ ಸಿಕ್ಕಿ ಬಿದ್ದರೂ `ಇದು ಡಮ್ಮಿ ಮೊಬೈಲ್ ಸರ್, ಸಿಮ್ ಇಲ್ಲ ನೋಡಿ~ ಎಂದು ತೋರಿಸಿ ಬಚಾವಾಗುತ್ತಾರೆ. ಮೊಬೈಲ್ ತರಬಾರದೆಂದು ಎಷ್ಟೇ ಕಟ್ಟುನಿಟ್ಟು ಮಾಡಿದ್ದರೂ ವಾರಕ್ಕೊಮ್ಮೆ ದಿಢೀರ್ ದಾಳಿ ಮಾಡಿದರೂ ಏಳರಿಂದ ಎಂಟು ಮೊಬೈಲ್‌ಗಳು ಪತ್ತೆಯಾಗುತ್ತವೆ ಎನ್ನುತ್ತಾರೆ ಖಾಸಗಿ ಶಾಲೆಯ ಒಬ್ಬರು ಮುಖ್ಯೋಪಾಧ್ಯಾಯರು.ಕದ್ದುಮುಚ್ಚಿ ಶಾಲೆಗೆ ಮೊಬೈಲ್ ತರುವ ಮಕ್ಕಳು ಅದನ್ನು ಮಾತನಾಡಲು ಬಳಸುವುದು ಕಡಿಮೆ; ಮೆಸೇಜ್ ಕಳುಹಿಸಲು ಅದರ ಬಳಕೆ ಸೀಮಿತ. ಮೆಸೇಜ್ ನಂತರದ ಸ್ಥಾನ ಫೇಸ್‌ಬುಕ್‌ಗೆ. ಒಂದೇ ಕ್ಲಿಕ್‌ಗೆ ಮೊಬೈಲ್‌ನಲ್ಲಿ ಸಿಗುವ ಸಾಮಾಜಿಕ ಜಾಲತಾಣಗಳನ್ನು ಕೂತಲ್ಲಿಯೇ ನೋಡುವುದು  ಕೆಲವರಿಗೆ ಚಟ. ವಿಡಿಯೊ, ಹಾಡುಗಳನ್ನು ಡೌನ್‌ಲೋಡ್ ಮಾಡುವುದು, ಸಿನೆಮಾ ನೋಡುವುದಕ್ಕೆ ಮೂರನೇ ಆದ್ಯತೆ.ಯಶವಂತಪುರದ ರಾಜರಾಜೇಶ್ವರಿ ಶಾಲೆ ಈ ಸಮಸ್ಯೆಗೆ ವಿಭಿನ್ನ ಪರಿಹಾರ ಕಂಡುಕೊಂಡಿದೆ. ಪ್ರತೀ ತರಗತಿಯಲ್ಲೂ ಮೂರು ಮಂದಿ ಉತ್ತಮ ವಿದ್ಯಾರ್ಥಿಗಳನ್ನು ಆರಿಸಿ ಯಾರಾದರೂ ಮೊಬೈಲ್ ಬಳಸುವುದನ್ನು ಕಂಡರೆ ಗುಟ್ಟಾಗಿ ಶಿಕ್ಷಕರಿಗೆ ಮಾಹಿತಿ ನೀಡುವಂತೆ ಅಲ್ಲಿ ಹೇಳಲಾಗಿದೆ.ಮೊಬೈಲ್ ಪತ್ತೆ ಯಾರು ಮಾಡಿದರು ಎಂಬ ಮಾಹಿತಿಯನ್ನು ಗುಟ್ಟಾಗಿಡುವುದರಿಂದ ಶಿಕ್ಷಕರಿಗೆ ಸುದ್ದಿ ನೀಡಿದ ವಿದ್ಯಾರ್ಥಿಗಳೂ ಸೇಫ್. ಇತ್ತ ಮಾಹಿತಿ ತಿಳಿದ ಶಿಕ್ಷಕರು ತರಗತಿಗೆ ರೇಡ್ ಮಾಡಿ ಮೊಬೈಲ್ ಪತ್ತೆಹಚ್ಚುತ್ತಾರಂತೆ.ಬ್ಲಾಸಮ್ ಶಾಲೆಯೂ ಇದೇ ವಿಧಾನವನ್ನು ಅನುಸರಿಸಿದೆ. ಪ್ರತಿ ತಿಂಗಳೂ `ಆಪರೇಷನ್ ಈಗಲ್~ ಹೆಸರಿನಲ್ಲಿ ತಿಂಗಳಿಗೊಮ್ಮೆ ತರಗತಿಗೆ ದಿಢೀರ್ ದಾಳಿ ನಡೆಸುತ್ತದೆ. ಕೆಲವು ಪೋಷಕರೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. `ದಾಳಿ ನಡೆಸಿದಾಗ ಮೊಬೈಲ್ ಮಾತ್ರವಲ್ಲ; ಪೆನ್‌ಡ್ರೈವ್, ಐಪಾಡ್, ನೂರರಿಂದ ಐನೂರರವರೆಗಿನ ನೋಟುಗಳು, ಪ್ರೇಮ ಪತ್ರಗಳೂ ಸಿಗುವುದುಂಟು~ ಎಂದು ಮುಗುಳ್ನಗೆ ಬೀರುತ್ತಾರೆ ಶಾಲೆಯ ನಿರ್ದೇಶಕ ಶಶಿಕುಮಾರ್.`ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಪ್ರತಿ ಮಾಸಿಕ ಸಭೆಯಲ್ಲೂ ಪೋಷಕರಿಗೆ ಹೇಳುತ್ತಿರುತ್ತೇವೆ. ಮಕ್ಕಳಿಗಾಗಿ ವಿಶೇಷ ಜಾಗೃತಿ ಶಿಬಿರಗಳನ್ನೂ ಏರ್ಪಡಿಸುತ್ತೇವೆ. ಹೀಗಿದ್ದೂ ಕೆಲವೊಮ್ಮೆ ತರಗತಿಗಳಲ್ಲಿ ಮೊಬೈಲ್‌ಗಳು ಪತ್ತೆಯಾಗುತ್ತವೆ. ಮೊಬೈಲ್ ಸಿಕ್ಕವರನ್ನು ಮೂರು ದಿನ ಆಟವಾಡಲು ಮೈದಾನಕ್ಕೆ ಕಳುಹಿಸದೆ ತರಗತಿಯಲ್ಲೇ ಕೂರಿಸುತ್ತೇವೆ.ಇದೇ ಆ ಮಕ್ಕಳಿಗೆ ಕೊಡುವ ಶಿಕ್ಷೆ. ಆಡಲಾಗುತ್ತಿಲ್ಲವಲ್ಲ ಎಂಬ ಬೇಸರದಿಂದಲಾದರೂ ಅವರು ಮೊಬೈಲ್‌ನಿಂದ ದೂರ ಉಳಿಯಲಿ ಎಂಬ ಯೋಜನೆ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯದ್ದು. ಪ್ರತಿ ಹತ್ತು ಮಕ್ಕಳಿಗೊಬ್ಬರು ಶಿಕ್ಷಕಿ ಇರುವುದರಿಂದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸಾಧ್ಯ ಎಂಬುದು ಮುಖ್ಯೋಪಾಧ್ಯಾಯಿನಿ ಅಂಬುಜಾ ಶರ್ಮಾ ಅವರ ಮಾತು.`ದೂರದ ಶಾಲೆಗೆ ಕಳುಹಿಸಿರುತ್ತೇವೆ. ಮಕ್ಕಳ ಯೋಗಕ್ಷೇಮ ವಿಚಾರಿಸಲು ಮೊಬೈಲ್ ಕೊಟ್ಟಿರುತ್ತೇವೆ, ಅದರಲ್ಲಿ ತಪ್ಪೇನು ಎಂಬುದು ಕೆಲವು ಪೋಷಕರ ಪ್ರಶ್ನೆ. ಆ ಭಯ ಪೋಷಕರಿಗೇಕೆ? ಡೈರಿಯಲ್ಲೇ ನಾವು ಶಾಲೆ ಆರಂಭಿಸುವ ಹಾಗೂ ಬಿಡುವ ಸ್ಪಷ್ಟ ಮಾಹಿತಿ ನೀಡಿರುತ್ತೇವೆ.ಶಾಲೆಯ ವಾಹನದಲ್ಲೇ ಮನೆ ಬಾಗಿಲ ತನಕ ಡ್ರಾಪ್ ನೀಡುತ್ತೇವೆ. ಪಾಠದಲ್ಲಿ ಏಕಾಗ್ರತೆ ಇಲ್ಲದೆ ಹೋದರೆ ಶಿಕ್ಷಣದ ಉದ್ದೇಶಕ್ಕೇ ಅವಮಾನ. ಹಲವಾರು ಐಟಿ ಕಂಪೆನಿಗಳೇ ಕಚೇರಿ ಒಳಗೆ ಮೊಬೈಲ್ ಬಳಕೆ ನಿಷೇಧಿಸಿರುವಾಗ ಶಾಲೆಯಲ್ಲಿ ಬಳಸುವುದು ಎಷ್ಟು ಸರಿ ಹೇಳಿ~ ಎಂಬುದು ಸೇಂಟ್ ಮೇರೀಸ್ ಶಾಲೆಯ ಮುಖ್ಯಸ್ಥ ನಾಗರಾಜು ಎತ್ತಿರುವ ಪ್ರಶ್ನೆ.

`ಶೌಚಾಲಯದಲ್ಲೂ ಬಳಸುತ್ತಾರಂತೆ~`ಮಕ್ಕಳನ್ನು ಶಾಲೆಯಿಂದ ಸಂಜೆ ಕರೆದೊಯ್ಯಲು ಸಹಾಯವಾಗುತ್ತದೆ ಎಂಬ ಸಬೂಬಿಗೆ ಅರ್ಥವಿಲ್ಲ. ಪ್ರತಿನಿತ್ಯ ತರಗತಿಗೆ ಮೊಬೈಲು ತರುವ ಮಕ್ಕಳು ಟೀಚರ್ ತರಗತಿಗೆ ಬರುವ ಮುನ್ನವೋ, ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಹೊರಗೆ ಬಂದೋ ಮೆಸೇಜು ಮಾಡುತ್ತಿರುತ್ತಾರೆ ಎಂದು ನನ್ನ ಮಗಳು ಹೇಳುತ್ತಿರುತ್ತಾಳೆ.ಹಿಂದೆಲ್ಲಾ ಹೈಸ್ಕೂಲ್ ಮಕ್ಕಳು ಮೊಬೈಲ್ ತರುವ ಬಗ್ಗೆ ಕೇಳಿದ್ದೆ. ಈಗ ಆರನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳ ಗೆಳತಿಯರೂ ತರುತ್ತಿದ್ದಾರಂತೆ. ಏಳನೇ ಕ್ಲಾಸ್‌ವರೆಗೆ ರ‌್ಯಾಂಕ್ ಪಡೆಯುತ್ತಿದ್ದ ಪಕ್ಕದ ಮನೆ ಹುಡುಗಿ ಮೊಬೈಲ್ ಕೈಗೆ ಬಂದ ಬಳಿಕ ಶೇ 60 ಅಂಕ ಪಡೆಯುತ್ತಿರುವುದು ಆತಂಕ ತಂದಿದೆ.

 

ಮನೆಯಲ್ಲಿ ನಾನು ಮಗಳನ್ನು ಮೊಬೈಲಿನಿಂದ ದೂರವಿಟ್ಟಿದ್ದರೂ ಗೆಳತಿಯರ ಜತೆ ಸೇರಿ ಎಲ್ಲಿ ತಪ್ಪು ದಾರಿ ಹಿಡಿಯುತ್ತಾಳೋ ಎಂಬ ಭಯವಿದೆ~ ಅಂತಾರೆ ಮಾಳವಿಕಾ ತಾಯಿ ಪೂರ್ಣಿಮಾ ಭಾರ್ಗವಿ.ತಂತ್ರಜ್ಞಾನ ಯುಗದಲ್ಲಿ ಅಪ್‌ಡೇಟ್ ಆಗಿರಬೇಕು ಎಂಬುದೇನೋ ಸತ್ಯ. ಆ ಕಾರಣಕ್ಕೆ ಪರೀಕ್ಷೆಯಲ್ಲಿ ಶೇ 90 ಅಂಕ ಬಂದರೆ ಮೊಬೈಲ್ ಕೊಡಿಸುವ ಆಮಿಷ ತೋರಿ ಮಕ್ಕಳನ್ನು ಮೊಬೈಲ್ ವ್ಯಸನಿಯಾಗಿಸುವುದು ಸರಿಯಲ್ಲ.

 

ಆಟ ಆಡುತ್ತೇವೆ ಎಂದು ಮೊಬೈಲು ಹಿಡಿಯುವ ಪುಟಾಣಿ ಕೈಗಳು ಅರಿವಿಲ್ಲದೆಯೇ ಆ ಮಾಯಾಲೋಕದ ಪಾತ್ರಗಳಾಗಿ ಕಳೆದುಹೋಗುತ್ತಾರೆಂಬ ಆತಂಕವಿದೆ. ಇಲ್ಲಿ ಮಕ್ಕಳು ಅಪರಾಧಿಗಳಲ್ಲ. ಈ ಕುರಿತು ಮೊದಲು ಎಚ್ಚೆತ್ತುಕೊಳ್ಳಬೇಕಾದದ್ದೂ ಪೋಷಕರೇ ಎಂಬುದು ಅನೇಕರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry