ಭಾನುವಾರ, ಆಗಸ್ಟ್ 18, 2019
22 °C

`ಸ್ಕೌಟ್ಸ್ ಮತ್ತು ಗೈಡ್ಸ್ ಬಲ ವೃದ್ಧಿ'

Published:
Updated:

ದೇವನಹಳ್ಳಿ: ಯುವಜನ ಸೇವಾ ಇಲಾಖೆಯ ವ್ಯಾಪ್ತಿಯಲ್ಲಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ವರ್ಗಾವಣೆ ಮಾಡಿರುವುದರಿಂದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರವಾದಂತಾಗಿದ್ದು ಅದರ ಬಲ ವೃದ್ಧಿಯಾಗಿದೆ' ಎಂದು ಭಾರತ ಸ್ಕೌಡ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಆಯುಕ್ತ ಚಿನ್ನಸ್ವಾಮಿ ರೆಡ್ಡಿ ತಿಳಿಸಿದರು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ 2013-14 ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯನ್ನು ತಳಮಟ್ಟದಿಂದಲೇ ನೀಡಿದರೆ ಮಕ್ಕಳಲ್ಲಿ ಶಿಸ್ತು ಸಮಯ ಪ್ರಜ್ಞೆ, ರಾಷ್ಟ್ರಪ್ರೇಮ ಬೆಳೆಸಲು ಹೆಚ್ಚಿನ ಅನುಕೂಲವಾಗಲಿದೆ' ಎಂದರು.`ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಪ್ರತಿ ಶಾಲೆಯ್ಲ್ಲಲೂ ಈ ಬಗ್ಗೆ ಅರಿವು ಮೂಡಿಸಿ ಸ್ಥಳೀಯ ಶಿಕ್ಷಕರು ಇದರ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕಾಗಿದೆ' ಎಂದು ಅವರು ಹೇಳಿದರು.ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ನಾಗರಾಜ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಧ್ಯೇಯೋದ್ದೇಶಗಳನ್ನು ಮಕ್ಕಳಿಗೆ ತಿಳಿಸಲು ಸ್ಕೌಟ್ಸ್ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಬಿ.ಕೆ.ಶಿವಪ್ಪ, `ದೇವನಹಳ್ಳಿಯಲ್ಲಿ ಮಾದರಿ ಸ್ಕೌಟ್ಸ್ ಭವನವನ್ನು ನಿರ್ಮಾಣ ಮಾಡಲು ಶ್ರಮಿಸಲಾಗುವುದು. ಇದರಿಂದ ಸ್ಥಳೀಯ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಪಡೆಯಲು ಸಾಧ್ಯವಾಗುತ್ತದೆ' ಎಂದರು.ಜಿಲ್ಲಾ ಉಪ ಆಯುಕ್ತ ಶಂಕರ್ ಮಾತನಾಡಿ, `ಸ್ಕೌಟ್ಸ್‌ನಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಪದವಿ ಸೇರಿದಂತೆ ಉನ್ನತ ವ್ಯಾಸಂಗದಲ್ಲಿ ಮತ್ತು ವಿವಿಧ ಇಲಾಖೆಯಲ್ಲಿ ಮೀಸಲಾತಿ ದೊರೆಯಲಿದೆ' ಎಂದರು.ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಕಾಂಬ್ಳಿ, ಬೇಬಿ ಜಿ.ನಾಯಕ್, ಗೌರಮ್ಮ ವೆಂಕಟೇಶ, ಹೂಗಾರ್, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಭಾಗವಹಿಸಿದ್ದರು.

Post Comments (+)