ಸ್ಟಾಲಿನ್‌ಗೆ ಸಾರಥ್ಯ

7

ಸ್ಟಾಲಿನ್‌ಗೆ ಸಾರಥ್ಯ

Published:
Updated:
ಸ್ಟಾಲಿನ್‌ಗೆ ಸಾರಥ್ಯ

ಚೆನ್ನೈ (ಪಿಟಿಐ):  ಕಿರಿಯ ಪುತ್ರ, ಪಕ್ಷದ ಖಜಾಂಚಿ ಎಂ. ಕೆ. ಸ್ಟಾಲಿನ್ ತಮ್ಮ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಸ್ಪಷ್ಟ ಇಂಗಿತವನ್ನು  ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರು ಇದೇ ಮೊದಲ ಬಾರಿಗೆ ನೀಡಿದ್ದಾರೆ.`ನಾನು ಸಾಯುವವರೆಗೂ ಸಮಾಜದ ಸುಧಾರಣೆಗೆ ಕೆಲಸ ಮಾಡುತ್ತೇನೆ, ನನ್ನ ನಂತರ ಯಾರು ಎಂಬ ಪ್ರಶ್ನೆಗೆ  ಉತ್ತರ ನಿಮ್ಮ ಮಧ್ಯೆ ಕುಳಿತಿರುವ ಸ್ಟಾಲಿನ್ ಎನ್ನುವುದನ್ನು ಮರೆಯಬೇಡಿ' ಎಂದು ಗುರುವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕರುಣಾನಿಧಿ ತಿಳಿಸಿದರು.ಪಿಎಂಕೆಯ ಸುಮಾರು ಎರಡು ಸಾವಿರ ಕಾರ್ಯಕರ್ತರು ಡಿಎಂಕೆಗೆ ಸೇರಿದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದಾಗ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು.  ಕರುಣಾನಿಧಿ ಅವರ ಹಿರಿಯ ಪುತ್ರ, ಕೇಂದ್ರ ಸಚಿವ ಎಂ. ಕೆ. ಅಳಗಿರಿ ಮತ್ತು ಸ್ಟಾಲಿನ್ ಮಧ್ಯೆ ಪಕ್ಷದ ಉತ್ತರಾಧಿಕಾರತ್ವಕ್ಕೆ ಮೊದಲಿನಿಂದಲೂ ಪೈಪೋಟಿ ಇದೆ. ಹಿಂದೆ ಅನೇಕ ಬಾರಿ ಕರುಣಾನಿಧಿ ಅವರು ಸ್ಟಾಲಿನ್ ತಮ್ಮ ಉತ್ತರಾಧಿಕಾರಿ ಎಂದು ಸೂಕ್ಷ್ಮವಾಗಿ ತಿಳಿಸಿದ್ದರು. ಆದರೆ ಈ ಬಾರಿ ಅದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.2009ರಲ್ಲಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿದಾಗಲೇ ಕರುಣಾನಿಧಿ ನಂತರ ಅವರೇ ಪಕ್ಷದ ನೇತೃತ್ವ ವಹಿಸುತ್ತಾರೆ ಎಂಬ ಭಾವನೆ ಮೂಡಿತ್ತು.ಆದರೆ ಅಳಗಿರಿ ಅವರು, ತಾವು ತಂದೆಯನ್ನು ಬಿಟ್ಟು ಬೇರೆ ಯಾರನ್ನೂ ಮುಖಂಡ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಪಕ್ಷದಲ್ಲಿಯ ಲೋಪದೋಷಗಳಿಂದ ಬೇಸತ್ತ ಪಿಎಂಕೆ ಕಾರ್ಯಕರ್ತರು ಡಿಎಂಕೆ ಸೇರಿದ್ದಾರೆ ಎಂದು ತಿಳಿಸಿರುವ ಕರುಣಾನಿಧಿ ಅವರು, ಪಿಎಂಕೆ ಮುಖ್ಯಸ್ಥ ರಾಮದಾಸ್ ಅವರು ಅನಗತ್ಯವಾಗಿ ತಮ್ಮನ್ನು ವಿವಾದದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry