ಸ್ಟೀಫನ್ ಹಾಕಿಂಗ್ ಜತೆ ನಡಿಗೆ ಮಾತು

7

ಸ್ಟೀಫನ್ ಹಾಕಿಂಗ್ ಜತೆ ನಡಿಗೆ ಮಾತು

Published:
Updated:

ಮಹರಾಯಾ ನಿಧಾನ ಕೊಂಚ:

ನಾನೂ ಬರುತ್ತೇನೆ ನಿನ್ನ ಜತೆ.

ನಮ್ಮೂರ ನಾಲ್ಕು ಚದರಡಿ

ಭೂಮಿಯ ಆಮೆ ನಾನು.

ಕೇಳಿಸಿಕೋ ಹಿರೀಕರ ಹಾಗೆ ಕಿವಿ

ಸಡಿಲ: ಏನೊಂದೂ ಗೊತ್ತಿಲ್ಲದೆ

ತರ್ಕದ ಮಾತಾಡುತ್ತಿರುವುದಾಗಿ

ಹೆದರಿಸಬೇಡಪ್ಪೋ ಹುಡುಗಾಟಿಕಿ.

ಯಾವುದೋ ಒಂದು ದಿನ ಹುಟ್ಟಿದ

ನನಗೂ ಸಾವು ಬರುತ್ತದೆ- ನಿನಗೆ

ಬರುವ ಹಾಗೆ: ಏನಾಗುತ್ತೇವೆ ಸತ್ತ

ಮೇಲೆ? ಹುಟ್ಟಿಸಿದವರು ಯಾರು?

ನನಗೂ ನಿನಗೂ ಹುಟ್ಟು ಸಾವುಗಳ

ನಿರ್ಬಂಧ ಇರುವುದಾದಲ್ಲಿ ಆ ಭೂಮಿ

ಈ ಜಗತ್ತು ವಿಶ್ವದಾಚೆಯ ಎಲ್ಲಕೂ

ಇರಬೇಕಲ್ಲ ಹುಟ್ಟು ಸಾವಿನ ಅನಂತ.ನಮ್ಮ ಮನೆಯ ನಾಯಿ ಇಪ್ಪತ್ತನೆ

ವರ್ಷಕ್ಕೆ ಸಾಯುವುದಾದಲ್ಲಿ, ಪಕ್ಕದ

ಮರ ಸಾವಿರಾರು ವರ್ಷ ಕಾಲ

ಬದುಕುವುದು ಯಾವ ದೊಡ್ಡ ಲೆಕ್ಕ.

ನದಿ ಈ ಸಮುದ್ರ ಆ ಗ್ರಹ ಈ

ತಾರೆ ನಕ್ಷತ್ರಗಳಾಚೆಗಿನ ಬ್ರಹ್ಮಾಂಡ,

ಯಾವುದೋ ಒಂದಿನ ಭೂಮಿ

ಹುಟ್ಟಿರಬಹುದಲವೆ- ನನ್ನ ನಿನ್ನ ಹಾಗೆ?

ಸೂರ್ಯನಿಗು- ನನಗೂ ನಿನಗೂ

ಇರುವ ಹಾಗೆ- ಅವನದೇ ಆದ

ಕಾಲಮಾನವೊಂದಿರಬಹುದಲ್ಲವೆ:

ಮಹಾಜ್ಞಾನಿಯ ವಿನಯ ಬರಲಿ.

ನಮ್ಮೂರಿನ ನೆಲದ ದೂಳಿನಲ್ಲೂ

ನೀನು ಕಾಣುವ ವಿಶ್ವದಾಚೆಗಿನ

ಕ್ಷಣ ಸತ್ಯದ ಕಣ ಅಡಗಿರಬಹುದು:

ಸೃಷ್ಟಿಯಲಿ ನಾನು ನನ್ನಲ್ಲಿ ಸೃಷ್ಟಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry