ಮಂಗಳವಾರ, ಮೇ 11, 2021
24 °C

ಸ್ಟೆಥಾಸ್ಕೋಪ್ ಬದಲು ತಂಬೂರಿ

ಶಿರೀಷ ಜೋಶಿ Updated:

ಅಕ್ಷರ ಗಾತ್ರ : | |

ಸ್ಟೆಥಾಸ್ಕೋಪ್ ಬದಲು ತಂಬೂರಿ

ಸಮಕಾಲೀನ ಹಿಂದುಸ್ತಾನಿ ಗಾಯಕಿಯರಲ್ಲಿ ಕಿಶೋರಿ ಆಮೋಣಕರರ ಹೆಸರು ಪ್ರಮುಖವಾದುದು. ಈಗವರು ಹಿಂದುಸ್ತಾನಿ ಸಂಗೀತದ ಹಿರಿಯ ಗಾಯಕಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.ತಾಯಿ ಮೋಗುಬಾಯಿ ಕುರ್ಡೀಕರರಿಂದ ಸಂಗೀತವನ್ನು ಕಲಿತ ಇವರು ಜೈಪುರ ಅತ್ರ್‌ಲಿ ಘರಾಣೆಯ ಪ್ರಮುಖ ಗಾಯಕಿಯರಲ್ಲಿ ಒಬ್ಬರು. ಮೋಗುಬಾಯಿ ಕುರ್ಡೀಕರ್ ಉಸ್ತಾದ ಅಲ್ಲಾದಿಯಾಖಾನರ ಶಿಷ್ಯೆ.ಬುದ್ಧಿವಂತ ಗಾಯಕಿ ಎಂದೇ ಕಿಶೋರಿ ಸಂಗೀತಲೋಕದಲ್ಲಿ ಚಿರಪರಿಚಿತರು. ತಮ್ಮ ಗಾಯನದಲ್ಲಿ ಇವರು ತೋರುವ ಲಯಗಾರಿಕೆ ಎಂಥವರನ್ನೂ ಮರುಳಾಗಿಸಬಲ್ಲುದು. ಇವರ ಕಂಠದಿಂದ ಹೊರಹೊಮ್ಮುವ ಸುಶ್ರಾವ್ಯವಾದ ಸ್ವರಗಳು ಕೇಳುಗರನ್ನು ಕ್ಷಣಾರ್ಧದಲ್ಲಿ ಮೋಡಿಮಾಡುತ್ತವೆ!ತೀಕ್ಷ್ಣವಾದ ಗ್ರಹಣಶಕ್ತಿ ಇವರಿಗೆ ಜನ್ಮಜಾತವಾಗಿ ಬಂದ ವರ. ಇದನ್ನು ಮನಗಂಡ ತಾಯಿ ಮಗಳಿಗೆ ಸಂಗೀತ ದೀಕ್ಷೆಯನ್ನು ನೀಡಲಾರಂಭಿಸಿದರು. ಮೊದಮೊದಲಿಗೆ ಕಿಶೋರಿಗೆ ಸಂಗೀತದಲ್ಲಿ ಅಂಥ ಆಸಕ್ತಿಯೇನೂ ಇರಲಿಲ್ಲ.ತಾಯಿ ಮೋಗುಬಾಯಿ ತಾಲೀಮು ನೀಡುವಾಗಲೆಲ್ಲ ಬೇಸರದಿಂದಲೇ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಮೋಗುಬಾಯಿಯ ಶಿಸ್ತು ಮತ್ತು ಖಡಕ್ ಆದೇಶಗಳಿಂದಾಗಿ ತಾಲೀಮಿನಲ್ಲಿ ಪಾಲ್ಗೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ಅದೇ ಅದೇ ತಾನಗಳನ್ನು, ಪಲಟೆಗಳನ್ನು ಉಲಿಯುವುದು ಬೇಸರ ತರಿಸುತ್ತಿದ್ದರೂ ತಾಯಿಯ ಎದುರು ಅದನ್ನು ವ್ಯಕ್ತಪಡಿಸುವಂತಿರಲಿಲ್ಲ. ಆದರೆ ದಿನಗಳೆದಂತೆ ಕಂಠ ಸುಶ್ರಾವ್ಯವಾಗತೊಡಗಿತು.ಹಾಡು ಒಲಿಯತೊಡಗಿತು. ಕಠಿಣವಾದ ರಿಯಾಜ್ ಮತ್ತು ತಾಲೀಮುಗಳೇ ಸಂಗೀತದ ಸಾಧನೆಯ ಮಾರ್ಗಗಳು ಎಂಬುದು ಅರಿವಾದ ನಂತರ ಕಲಿಯುವಿಕೆಯಲ್ಲಿ ಆಸಕ್ತಿ ಕುದುರತೊಡಗಿತು.ಮೋಗುಬಾಯಿ ಕುರ್ಡೀಕರ ಮಗಳಿಗೆ ಕೇವಲ ಸಂಗೀತವನ್ನು ಮಾತ್ರ ಕಲಿಸದೆ, ಶೈಕ್ಷಣಿಕವಾಗಿಯೂ ಒಳ್ಳೆಯ ಶಿಕ್ಷಣವನ್ನೇ ಕೊಡಿಸತೊಡಗಿದ್ದರು. ಶಾಲಾ ಶಿಕ್ಷಣದಲ್ಲಿಯೂ ಕಿಶೋರಿ ಒಳ್ಳೆಯ ಪ್ರಗತಿಯನ್ನೇ ತೋರಿದರು. ಅಲ್ಲಿಯೂ ಬುದ್ಧಿವಂತ ಬಾಲಕಿ ಎಂಬ ಪ್ರಶಂಸೆಗೆ ಪಾತ್ರರಾದರು. ದಿನಗಳೆದಂತೆ ಕಿಶೋರಿ ತಮ್ಮ ಶಾಲಾ ಶಿಕ್ಷಣದಲ್ಲಿ ಉನ್ನತ ತರಗತಿಗಳಿಗೆ ಬಂದಾಗ ವಿಚಿತ್ರವಾದ ಸಮಸ್ಯೆಯೊಂದು ಅವರನ್ನು ಕಾಡತೊಡಗಿತು.ಮನೆಯಲ್ಲಿ ಮೋಗುಬಾಯಿ ಕುರ್ಡೀಕರರ ಶಿಸ್ತಿನ ಸಂಗೀತದ ತಾಲೀಮು ಹಾಗೂ ನಿಯಮಿತವಾದ ರಿಯಾಜ್‌ಗಳು. ಶಾಲೆಯಲ್ಲಿಯೂ ನಿರಂತರ ಪಾಠಗಳು ಮತ್ತು ಹೆಚ್ಚುತ್ತಿರುವ ವಿದ್ಯಾಭ್ಯಾಸದ ಒತ್ತಡ ಇವೆರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ಕಿಶೋರಿಗೆ ಕಷ್ಟಕರ ಎನಿಸತೊಡಗಿತು. ಹಾಗೂ ಹೀಗೂ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯನ್ನು ದೊರಕಿಸಿಕೊಂಡಾಯಿತು.ನಂತರ `ಇಂಟರ್~ನಲ್ಲಿ ಸೈನ್ಸ್ ಆಯ್ದುಕೊಂಡು (ಮಹಾರಾಷ್ಟ್ರದಲ್ಲಿ ಪಿ.ಯೂ.ಸಿ. ಮಟ್ಟದ ಶಿಕ್ಷಣವನ್ನು `ಇಂಟರ್~ ಎಂದು ಕರೆಯುತ್ತಾರೆ) ಓದು ಮುಂದುವರಿಸಿದರು. ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುವುದೆಂದರೆ ಸಾಮಾನ್ಯವೆ? ಶಾಲಾಪಠ್ಯದ ಒತ್ತಡ ಇನ್ನಷ್ಟು ಹೆಚ್ಚಾಯಿತು. ಈ ಒತ್ತಡವನ್ನು ನಿಭಾಯಿಸುವುದು ಕಿಶೋರಿಗೆ ದುಸ್ತರವಾಯಿತು.ಆದರೆ ಯಾರಿಗೆ ಹೇಳುವುದು? ಇತ್ತ ದರಿ, ಅತ್ತ ಪುಲಿ! ಮನೆಯಲ್ಲಿ ತಾಯಿಯ ಕಟ್ಟುಪಾಡುಗಳೂ ಸಡಿಲಾಗುತ್ತಿಲ್ಲ. ಕಾಲೇಜಿನಲ್ಲಿ ವಿದ್ಯಾಭ್ಯಾಸದ ಒತ್ತಡವೂ ಅನಿವಾರ್ಯ! ಇದರಿಂದಾಗಿ ಕಿಶೋರಿ ಆಮೋಣಕರರ ದೇಹದ ಮೇಲೆ ವಿಪರೀತ ಪರಿಣಾಮಗಳು ಉಂಟಾಗತೊಡಗಿದವು. ಅಸಾಧ್ಯವಾದ ದಣಿವಿನಿಂದಾಗಿ ಉತ್ಸಾಹ, ಉಲ್ಲಾಸಗಳೆರಡೂ ಕರಗಿಹೋದವು. ಬದುಕು ಯಾಂತ್ರಿಕವಾಗತೊಡಗಿತು.ಕಿಶೋರಿ ಆಮೋಣಕರ ವೈದ್ಯೆಯಾಗಬೇಕೆಂದು ಬಯಸಿದವರು. ಅಂತೆಯೇ ಮ್ಯಾಟ್ರಿಕ್ ನಂತರ ಇಂಟರ್‌ನಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡಿದ್ದರು. ಆದರೆ ಈಗ ಪರಿಸ್ಥಿತಿ ಗಂಭೀರವಾಗಿತ್ತು! ಸಂಗೀತ ಮತ್ತು ವಿಜ್ಞಾನ ಇವೆರಡನ್ನೂ ನಿಭಾಯಿಸುವುದು ಸಾಧ್ಯವಿಲ್ಲ ಎಂಬಂಥ ಸ್ಥಿತಿಗೆ ಆಕೆ ತಲುಪಿದ್ದರು. ಹೀಗಾಗಿ ಸಂಗೀತ ಮತ್ತು ವಿಜ್ಞಾನ ಇವೆರಡಲ್ಲಿ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆಯ ಹಂತಕ್ಕೆ ಪ್ರಕರಣ ಬೆಳೆಯಿತು.ಸಂಗೀತವೆ? ವೈದ್ಯ ವೃತ್ತಿಯೆ? ಈ ದ್ವಂದ್ವ ಕಿಶೋರಿ ಆಮೋಣಕರರನ್ನು ಕಾಡತೊಡಗಿತು. ಕಾಲೇಜಿಗೆ ಹೋಗುವುದೆ? ಇಲ್ಲವೆ ಸಂಗೀತ ಕಲಿಯುವುದೆ? ಬದುಕಿನಲ್ಲಿ ಸ್ಟೆಥೋಸ್ಕೋಪ್ ಹಿಡಿಯುವುದೆ? ಇಲ್ಲವೆ ತಂಬೂರಿ ಮೀಟುವುದೆ? ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳುವುದು?ಮಗಳ ಪರಿಸ್ಥಿತಿಯನ್ನು ನೋಡಿದ ತಾಯಿ, `ಎರಡರಲ್ಲಿ ಒಂದನ್ನು ಆಯ್ದುಕೋ~ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ಅಂತಿಮ ನಿರ್ಧಾರ ಕಿಶೋರಿಯವರದೇ ಆಗಿತ್ತು. ಕೊನೆಗೆ ಅವರು ಆಯ್ದುಕೊಂಡದ್ದು ಸಂಗೀತವನ್ನೇ. ತಂಬೂರಿಯ ನಿನಾದದ ನಡುವೆ ಸ್ಟೆಥೋಸ್ಕೋಪಿನ ಬೇಡಿಕೆ ಕರಗಿಹೋಗಿತ್ತು.`ನನ್ನ ಮೈಯೊಳಗಿನ ಕಣಕಣಗಳೆಲ್ಲ ಸಂಗೀತ ಸಂಗೀತ ಎಂದು ಕೂಗತೊಡಗಿದ್ದರಿಂದ ನಾನು ಸಂಗೀತವನ್ನು ಆಯ್ದುಕೊಂಡೆ~ ಎಂದು ಅವರು ವಿವರಿಸುತ್ತಾರೆ. ನಂತರ ಅವರ ಸಂಪೂರ್ಣ ಗಮನ ಸಂಗೀತದತ್ತ ಹರಿಯಿತು. ಅವರೊಬ್ಬ ಪ್ರಬುದ್ಧ ಗಾಯಕಿಯಾಗಿ ರೂಪುಗೊಂಡರು. ವೈದ್ಯಕೀಯ ವೃತ್ತಿಗೆ ಬಹಳಷ್ಟು ಬೇಡಿಕೆಯಿದ್ದ ದಿನಗಳಲ್ಲಿ ಕಿಶೋರಿ ಆಮೋಣಕರ ಸಂಗೀತವನ್ನು ಆಯ್ದುಕೊಂಡಿದ್ದು ಹಲವರಿಗೆ ಅಚ್ಚರಿಯನ್ನು ಮೂಡಿಸಿತ್ತು. ವ್ಯಾವಹಾರಿಕವಾಗಿ ಅದೊಂದು ತಪ್ಪು ನಡೆಯಾಗಿತ್ತು. ಆದರೆ ಸಂಗೀತದ ದೃಷ್ಟಿಯಿಂದ ಅದೊಂದು ಮಹತ್ತರ ನಿರ್ಧಾರವಾಗಿತ್ತು!ಅಂದು ಡಾಕ್ಟರ್ ಆಗುವ ಯೋಗ ಕಿಶೋರಿ ಅಮೋಣಕರರಿಗೆ ತಪ್ಪಿ ಹೋಯಿತು ನಿಜ. ಆದರೆ ಮುಂದಿನ ದಿನಗಳಲ್ಲಿ ಆಕೆಯ ಸಂಗೀತ ಸಾಧನೆ ಅವರಿಗೆ ಗೌರವ ಡಾಕ್ಟರ್ ಪದವಿಯನ್ನು ತಂದು ಕೊಟ್ಟಿತು. ಅಂತೆಯೇ ಅವರು ಇಂದು ಡಾ.ಕಿಶೋರಿ ಆಮೋಣಕರ್. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.