ಮಂಗಳವಾರ, ಮೇ 11, 2021
24 °C
ವಾರದ ವೈದ್ಯ

ಸ್ಟೆಮ್ ಸೆಲ್ಸ್ ವಿಭಿನ್ನ ಥೆರಪಿ

ಡಾ. ಅಮಿತ್ ಅಗರ್‌ವಾಲ್ ಮೂಳೆ ತಜ್ಞ Updated:

ಅಕ್ಷರ ಗಾತ್ರ : | |

*ಸ್ಟೆಮ್ ಸೆಲ್ಸ್ ಅಥವಾ ಮೂಲ ಜೀವಕೋಶಗಳ ಬಗ್ಗೆ ತಿಳಿಸಿ.ಇವು ಹೆಸರೇ ಸೂಚಿಸುವಂತೆ ದೇಹದ ಅನನ್ಯ ಜೀವಕೋಶಗಳು. ಅವುಗಳಿಗೆ ವಿವಿಧ ಪ್ರಕಾರಗಳಾಗಿ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಇದ್ದು, ಹೃದಯ ಅಥವಾ ರಕ್ತಕಣಗಳಂತಹ ವಿಶೇಷ ಜೀವಕೋಶಗಳಿಗಿಂತ ಭಿನ್ನವಾಗಿರುತ್ತವೆ. ಅಲ್ಲದೆ, ಕೆಲವು ನಿರ್ದಿಷ್ಟ ಅಂಗಗಳಿಗೆ ವಿಶೇಷ ಜೀವಕೋಶಗಳಾಗಿ ಬೇರ್ಪಡುವ ಹಾಗೂ ಅಭಿವೃದ್ಧಿ ಹೊಂದುವ ಅಥವಾ ಅಂಗಾಂಶಗಳಾಗಿ ಮಾರ್ಪಡುವ ಸಾಮರ್ಥ್ಯವನ್ನೂ ಅವು ಹೊಂದಿರುತ್ತವೆ.

* ಸ್ಟೆಮ್ ಸೆಲ್ಸ್‌ನ ಮೂಲಗಳು ಯಾವುವು?* ಭ್ರೂಣದ ಕಾಂಡಕೋಶಗಳು (Embryonic Stem Cells)

* ಶಿಶುವಿನ ಕಾಂಡಕೋಶಗಳು (Fetal Stem Cells)

* ಹೊಕ್ಕಳು ಬಳ್ಳಿಯ ಆಕರಕೋಶಗಳು (Umbilical Cord Blood Stem Cells)

* ಜರಾಯುವಿನ ಕಾಂಡ ಕೋಶಗಳು (Placental Stem Cells)

* ವಯಸ್ಕ ಕಾಂಡದ ಕೋಶಗಳು (Adult Stem Cells)

*ರೋಗದ ಸ್ಥಿತಿಯನ್ನು ಗುರುತಿಸುವಲ್ಲಿ ಇವು ಹೇಗೆ ಸಹಾಯ ಮಾಡುತ್ತವೆ?ಮೂಳೆ, ಹೃದಯದ ಸ್ನಾಯು, ನರಗಳು, ಇತರ ಅಂಗಗಳು ಮತ್ತು ಅಂಗಾಂಶಗಳಲ್ಲಿ ಪ್ರೌಢ ಕೋಶಗಳಾಗಿ ಮೂಲ ಜೀವಕೋಶಗಳು ಹೇಗೆ ಪಕ್ವವಾಗುತ್ತವೆ ಎಂಬುದನ್ನು ನೋಡುವ ಮೂಲಕ, ರೋಗದ ಬೆಳವಣಿಗೆ ಹಾಗೂ ಸ್ಥಿತಿಯನ್ನು ಹೆಚ್ಚು ನಿಖರವಾಗಿ ಗುರುತಿಸಬಹುದು.

*ಸ್ಟೆಮ್ ಸೆಲ್ ಥೆರಪಿ ಎಂದರೇನು? ಯಾವ ರೋಗಗಳನ್ನು ಗುಣಪಡಿಸಬಹುದು?

ಹಾನಿಯಾದ ಅಂಗಾಂಶಗಳನ್ನು ಬದಲಿಸಲು ಅಥವಾ ಸರಿಪಡಿಸಲು ನಮ್ಮದೇ ಆದ ಮೂಲ ಜೀವಕೋಶಗಳನ್ನು ಅಥವಾ ಆ ಜೀವಕೋಶಗಳಿಂದ ಹುಟ್ಟಿಕೊಂಡ ಕೋಶಗಳನ್ನು ಬಳಸುವ ಪ್ರಕ್ರಿಯೆಯೇ ಸ್ಟೆಮ್ ಸೆಲ್ಸ್ ಥೆರಪಿ. ಲ್ಯುಕೇಮಿಯಾದಂತಹ (ರಕ್ತ ಕ್ಯಾನ್ಸರ್) ಕೆಲವು ಪ್ರತಿರಕ್ಷಿತ ಕಾಯಿಲೆಗಳು, ಕೆಲವು ಅಂಗಾಂಶಗಳ ಕಸಿ ಸೇರಿದಂತೆ ಅನೇಕ ರಕ್ತ ಸಂಬಂಧಿ ಕಾಯಿಲೆಗಳಿಗೆ ಈ ಚಿಕಿತ್ಸೆಯನ್ನು ಬಳಸಲಾಗುತ್ತದೆ.

ಜೊತೆಗೆ ಬೆನ್ನುಹುರಿ (spinal cord) ಗಾಯಗಳು, ಟೈಪ್-1 ಮಧುಮೇಹ, ಪಾರ್ಕಿನ್ಸನ್, ಹೃದಯ ಕಾಯಿಲೆ, ಕೆಲವು ಪ್ರಕಾರದ ಕ್ಯಾನ್ಸರ್, ಸಂಧಿವಾತ ಸೇರಿದಂತೆ ಇನ್ನೂ ಹಲವು ಕಾಯಿಲೆಗಳಿಂದ ಬಳಲುವವರಿಗೂ ಇದು ಲಾಭದಾಯಕ.

*ಈ ಎಲ್ಲ ಕಾಯಿಲೆಗಳಿಗೂ ಒಂದೇ ಮೂಲ ಜೀವಕೋಶ ಕೆಲಸ ಮಾಡುತ್ತದೆಯೇ?

ಇಲ್ಲ, ಪ್ರತಿ ಕಾಂಡಕೋಶ ದೇಹದಲ್ಲಿ ಒಂದು ನಿರ್ದಿಷ್ಟ ಕಾರ್ಯವನ್ನು ಮಾತ್ರ ನಿರ್ವಹಿಸುತ್ತದೆ. ಆದ್ದರಿಂದ ಯಾವುದೇ ಒಂದು ಮೂಲ ಜೀವಕೋಶದ ಚಿಕಿತ್ಸೆಯಿಂದ ಬೇರೆ ಬೇರೆ ಸಂಬಂಧವಿಲ್ಲದ ಸ್ಥಿತಿಗಳನ್ನು ಗುಣಪಡಿಸಲು ಸಾಧ್ಯವಿಲ್ಲ.ಒಂದೊಂದು ಕಾಯಿಲೆಗೂ ಒಂದೊಂದು ಬೇರೆಯದೇ ಕಾರಣಗಳಿರುತ್ತವೆ. ಆದ್ದರಿಂದ ಒಂದೊಂದು ಸ್ಥಿತಿಗೆ ಚಿಕಿತ್ಸೆ ನೀಡಲು ಅದರದೇ ಆದ ಮೂಲ ಜೀವಕೋಶಗಳನ್ನು ಬಳಸಬೇಕಾಗುತ್ತದೆ.

*ಮೂಲ ಜೀವಕೋಶಗಳ ಚಿಕಿತ್ಸೆ ಎಷ್ಟು ಸುರಕ್ಷಿತ?

ಮೂಲ ಜೀವಕೋಶಗಳು ನಮ್ಮ ದೇಹದಿಂದ ಬಂದಂತಹವು ಎಂಬ ಕಾರಣಕ್ಕೆ ಅವು ಸಂಪೂರ್ಣ ಸುರಕ್ಷಿತ ಎಂದು ಅರ್ಥವಲ್ಲ. ನಮ್ಮ ಸ್ವಂತ ಕೋಶಗಳಿಗೆ ಪ್ರತಿರೋಧಕ ಪ್ರತಿಕ್ರಿಯೆ ಸಾಧ್ಯವಿಲ್ಲದ ಸಂದರ್ಭದಲ್ಲಿ, ಈ ಪ್ರಕ್ರಿಯೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.ಜೀವಕೋಶಗಳು ನಮ್ಮ ದೇಹ ಬಿಟ್ಟು ಹೊರಗೆ ಬಂದ ತಕ್ಷಣ ಅನೇಕ ರೀತಿಯ ಬದಲಾವಣೆಗಳಿಗೆ ಒಳಪಡಬಹುದು ಹಾಗೂ ಇದರಿಂದ ಕೋಶದ ಗುಣಲಕ್ಷಣಗಳೇ ಬದಲಾಗಬಹುದು. ಜೀವಕೋಶಗಳು ತಮ್ಮ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕಳೆದುಕೊಳ್ಳಬಹುದು. ಬ್ಯಾಕ್ಟೀರಿಯಾ, ವೈರಸ್ ಅಥವಾ ರೋಗಕಾರಕಗಳೊಂದಿಗೆ ಈ ಕೋಶಗಳು ಕಲುಷಿತಗೊಳ್ಳಬಹುದು.ಆದರೆ ಚಿಕಿತ್ಸೆಗೆ ವಯಸ್ಕ ಕಾಂಡದ ಜೀವಕೋಶಗಳನ್ನು ಬಳಸುವ ಮೂಲಕ ಈ ಎಲ್ಲ ಅಪಾಯಗಳನ್ನೂ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ.

*ಮೂಲ ಜೀವಕೋಶಗಳು ಕ್ಯಾನ್ಸರ್‌ಗೆ ಕಾರಣ ಆಗುತ್ತವೆಯೇ?

ಜೀವಕೋಶಗಳನ್ನು `ವಿಸ್ತರಣೆ' (expansion)ಎಂಬ ಪ್ರಕ್ರಿಯೆಗೆ ಒಳಪಡಿಸಿದಾಗ, ತಮ್ಮ ಬೆಳವಣಿಗೆಯನ್ನು ನಿಯಂತ್ರಿಸುವ ಸಾಮಾನ್ಯ ಕಾರ್ಯವಿಧಾನವನ್ನು ಅವು ಕಳೆದುಕೊಳ್ಳಬಹುದು. ಆಗ ಅವುಗಳನ್ನು ಬೇರ್ಪಡಿಸದೇ ಹೋದರೆ, ಅವು `ಟೆರಟೊಮ' ಎಂಬ ಗಡ್ಡೆಗಳನ್ನು ರೂಪಿಸಬಹುದು. ಆದರೆ ಹಾಗಾಗದಂತೆ ತಡೆಯುವುದು ಮುಖ್ಯ.*ಸ್ಟೆಮ್ ಸೆಲ್ಸ್ ಥೆರಪಿಯನ್ನು ಸೌಂದರ್ಯ ವೃದ್ಧಿ ಚಿಕಿತ್ಸೆಗೂ ಬಳಸಬಹುದೇ?

ಆ್ಯಂಟಿ ಏಜಿಂಗ್ ಚಿಕಿತ್ಸೆಯಾಗಿ ಇದನ್ನು ಬಳಸಲಾಗುತ್ತದೆ ಎಂಬುದೇನೋ ನಿಜ. ಆದರೆ ಇದು ಯಾವುದೇ ಬ್ಯೂಟಿ ಪಾರ್ಲರ್/ ಸ್ಪಾಗಳಲ್ಲಿ ನಿರ್ವಹಿಸಬಹುದಾದ ಸುಲಭ ಥೆರಪಿ ಅಲ್ಲ ಎಂಬುದನ್ನು ನೆನಪಿಡಬೇಕು. ಇದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿದೆ. ಅನೇಕ ಸ್ಪಾ/ ಪಾರ್ಲರ್‌ಗಳು ಸ್ಟೆಮ್ ಸೆಲ್ಸ್ ಫೇಶಿಯಲ್ ಸೇವೆಯನ್ನು ಮಂಡಿಸುತ್ತವೆ. ಆದರೆ ನೀವು ಬಹಳ ಜಾಗರೂಕತೆಯಿಂದ ಆರಿಸಿಕೊಳ್ಳಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ಈ ಚಿಕಿತ್ಸೆಯನ್ನು ನಿರ್ವಹಿಸುವವರು ಸರಿಯಾಗಿ ತರಬೇತಿ ಪಡೆದವರಾಗಿರಬೇಕು, ಪ್ರಮಾಣೀಕೃತ ತಜ್ಞರಾಗಿರಬೇಕು.

*ಖರ್ಚು-ವೆಚ್ಚ?

30 ಸಾವಿರ ರೂಪಾಯಿಯಿಂದ ಒಂದೂವರೆ ಲಕ್ಷದವರೆಗೂ ಖರ್ಚು ತಗುಲಬಹುದು. ಕಾಯಿಲೆಯ ಪ್ರಕಾರ, ಹಂತ, ರೋಗಿಯ ವಯಸ್ಸು, ಸ್ಥಿತಿ ಆಧರಿಸಿ ಖರ್ಚು ನಿರ್ಧಾರವಾಗುತ್ತದೆ.

*ಈ ಚಿಕಿತ್ಸೆಗೆ ಬೇಕಾಗುವ ಅವಧಿ?

ಹೆಚ್ಚೆಂದರೆ 5 ಗಂಟೆಯ ಒಳಗೆ ಇಡೀ ಪ್ರಕ್ರಿಯೆ ಮುಗಿದು ಹೋಗುತ್ತದೆ. ಸ್ಟೆಮ್ ಸೆಲ್ಸ್ ಸಂಗ್ರಹಕ್ಕೆ ಹೆಚ್ಚೆಂದರೆ 15 ನಿಮಿಷ ಸಾಕು. ಆ ಜೀವಕೋಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಶುದ್ಧೀಕರಿಸಲು ಸುಮಾರು 48 ನಿಮಿಷ ಬೇಕಾಗಬಹುದು. ಇದೆಲ್ಲ ಸೇರಿ ಕೋಶಗಳನ್ನು ಕಸಿ ಮಾಡಲು 4ರಿಂದ 5 ಗಂಟೆ ಸಾಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.