ಸ್ಟೇಶನ್ ರಸ್ತೆಯಲ್ಲಿ ದೂಳಿನದ್ದೇ ಸಾಮ್ರಾಜ್ಯ!

7

ಸ್ಟೇಶನ್ ರಸ್ತೆಯಲ್ಲಿ ದೂಳಿನದ್ದೇ ಸಾಮ್ರಾಜ್ಯ!

Published:
Updated:

ರಾಯಚೂರು: ಸುಡುವ ಬಿಸಿಲು... ವಾಹನಗಳ ರಭಸದ ಓಡಾಟ... ಸಾಲದ್ದಕ್ಕೆ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲ್ಲಗಳಲ್ಲಿ ನೆಲಕ್ಕುರುಳುತ್ತಿರುವ ಭಾರಿ ಗಾತ್ರದ ಮರಗಳು... ಒಳಚರಂಡಿ ಕಾಮಗಾರಿಗಾಗಿ ಅಲ್ಲಲ್ಲಿ ಅಗೆದ ತಗ್ಗು ಗುಂಡಿಗಳು...ಇದು ನಗರದ ರೈಲ್ವೆ ಸ್ಟೇಶನ್ ರಸ್ತೆಯ ನೋಟ. ಈ ರಸ್ತೆಯಲ್ಲಿ ಸಂಚರಿಸುವ ಜನತೆ ಮೇಲಿನ ಎಲ್ಲ ಸಮಸ್ಯೆಗಳನ್ನೂ ಇಲ್ಲಿಯವರೆಗೆ ಸಹಿಸಿಕೊಂಡು ಬಂದಿದ್ದರು. ಈಗ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದೆ. ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ವರ್ಟ್ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿ ಬಳಿಕ ಅದರ ಮೇಲೆ ಹಾಗೂ ಸುತ್ತಮುತ್ತ ಸುರಿದ ಲೋಡ್‌ಗಟ್ಟಲೆ ಮಣ್ಣು ಮತ್ತು ಕಂಕರ್ ಪುಡಿ ಈಗ ದೂಳೆದ್ದಿದೆ!ವಿಪರ್ಯಾಸವೆಂದರೆ ನಿತ್ಯ ಕಾರ್‌ನಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುವ ಶಾಸಕರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಮತ್ತು ನಗರಸಭೆ ಪ್ರಭಾರಿ ಆಯುಕ್ತರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ದೂಳಿನ ತೀವ್ರತೆ ಕಂಡಿಲ್ಲವೇ ಎಂಬುದು ನಗರದ ನಾಗರಿಕರ ಪ್ರಶ್ನೆ.ಮಳೆ ಬಂದಾಗ ಈ ಸ್ಥಳದಲ್ಲಿ ಚಿಕ್ಕ ಕೆರೆಯಂತೆ ನೀರು ನಿಲ್ಲುತ್ತದೆ. ಮಳೆ ಹೋಗಿ ಎರಡು ದಿನದ ಬಳಿಕ ಈ ದೂಳು ಮತ್ತಷ್ಟು ಹೆಚ್ಚಾಗುತ್ತದೆ. ಎದುರಿಗೆ ಬರುವ ವಾಹನಗಳೂ ಕಾಣದಷ್ಟು ದೂಳು ಆವರಿಸುತ್ತದೆ. ಕೆಮ್ಮು, ಮೈ ಮೇಲೆಲ್ಲಾ ದೂಳು ಮೆತ್ತಿಕೊಂಡು ಹೋಗಬೇಕು. ಇದು ನಿತ್ಯ ಕಾಣುವ ದೃಶ್ಯ.ಜಿಲ್ಲಾ ಕೇಂದ್ರವಾದ ಈ ನಗರದ ಪ್ರಮುಖ ರಸ್ತೆ ಈ ರೈಲ್ವೆ ಸ್ಟೇಶನ್ ರಸ್ತೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮಾರ್ಗವಾಗಿ ಸಂಚರಿಸುತ್ತವೆ. ರೈಲ್ವೆ ಸ್ಟೇಶನ್ ಗೂಡ್‌ಶೆಡ್‌ನಿಂತ ನಿತ್ಯ ರಸಗೊಬ್ಬರ ಹೊತ್ತ ನೂರಾರು ಲಾರಿಗಳು, ಕೇಂದ್ರ ಬಸ್ ನಿಲ್ದಾಣದಿಂದ ಸಂಚರಿಸುವ ಬಸ್‌ಗಳು, ಕಾರ್, ಜೀಪು, ಟೆಂಪೋ ಸೇರಿದಂತೆ ಅನೇಕ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುತ್ತವೆ.ಭಾರಿ ವಾಹನಗಳು ರೊಂಯ್ಯನೇ ದೂಳೆಬ್ಬಿಸಿಕೊಂಡು ನುಗ್ಗುವಾಗ ಪಾದಚಾರಿ, ದ್ವಿಚಕ್ರವಾಹನ ಸವಾರರು ದಿಕ್ಕಾಪಾಲಾಗಬೇಕಾದ ಸ್ಥಿತಿ. ಅಸ್ತಮಾ, ಅಲರ್ಜಿ ರೋಗಿಗಳು, ವೃದ್ಧರು ಈ ರಸ್ತೆಯಲ್ಲಿ ಸಂಚರಿಸಿ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.  ಇದೇ ಸ್ಥಿತಿ ಸೇಂಟ್ ಮೇರಿ ಕಾನ್ವೆಂಟ್ ಎದುರಿಗೂ ಅದೇ ಸ್ಥಿತಿ ಇದೆ.ನಗರದ ಗೋ ಶಾಲೆ ರಸ್ತೆ ಈಗಾಗಲೇ ದೂಳು ರಸ್ತೆ ಎಂದೇ ನಗರದ ನಾಗರಿಕರಿಂದ ಹೆಸರು ಪಡೆದಿದ್ದು, ಜನತೆ ಮಾರ್ಗ ಬದಲಾಯಿಸಿ ಸಂಚರಿಸುವಂತಾಗಿದೆ. ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ ಗಂಜ್ ರಸ್ತೆಯೂ ದೂಳೆದ್ದು ಹೋಗಿದ್ದರಿಂದ ಜನತೆ ಆ ರಸ್ತೆಗಳಲ್ಲಿ ಸಂಚರಿಸದ ಸ್ಥಿತಿ ಕಂಡು ಬರುತ್ತಿತ್ತು.

 

ಈಗ ರೈಲ್ವೆ ಸ್ಟೇಶನ್ ರಸ್ತೆಗೂ ಈ ದೂಳಿನ ಭೂತ ಅಂಟಿಕೊಂಡಿದ್ದು, ಜನತೆ ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ಅಲ್ಲಿ ಹಾಕಿದ ಮಣ್ಣು ತೆಗೆದು ಡಾಂಬರ್ ಹಾಕಿ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲದೇ ಇದ್ದರೆ ಡಾಂಬರ್ ರಸ್ತೆ ನಿರ್ಮಿಸುವವರೆಗೂ ದೂಳು ಏಳುವ ಜಾಗೆಯಲ್ಲಿ ನಿತ್ಯ ಎರಡು ಹೊತ್ತು ನೀರು ಸಿಂಪರಣೆ ಮಾಡಿ ದೂಳು ನಿಯಂತ್ರಣ ಮಾಡಬೇಕು.ಹಾಗೆ ಮಾಡಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವಿದೆ. ಇಲ್ಲದೇ ಇದ್ದರೆ ಅದೇ ಸ್ಥಿತಿ ಮುಂದುವರಿದು ಜನತೆಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಜನತೆ ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry