ಶುಕ್ರವಾರ, ಮಾರ್ಚ್ 5, 2021
30 °C

ಸ್ತನ ಕ್ಯಾನ್ಸರ್: ಅರಿವು ಮೊದಲ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ತನ ಕ್ಯಾನ್ಸರ್: ಅರಿವು ಮೊದಲ ಚಿಕಿತ್ಸೆ

ಭಾರತದಲ್ಲಿ ಕ್ಯಾನ್ಸರ್ ಮಹಾಪಿಡುಗಿನಂತೆ ಹರಡುತ್ತಿದೆ. ವಿಶ್ವದ ಕ್ಯಾನ್ಸರ್ ಬಾಧಿತ ದೇಶಗಳಲ್ಲಿ ಭಾರತ 5ನೆಯ ಸ್ಥಾನ ಪಡೆದಿದೆ. ಕ್ಯಾನ್ಸರ್ ಪೀಡಿತರಲ್ಲಿ ಸ್ತನ ಕ್ಯಾನ್ಸರ್ ಎರಡನೆಯ ಸ್ಥಾನ ಹೊಂದಿದೆ. ಆಘಾತಕಾರಿ ಅಂಶವೆಂದರೆ ಮಹಾನಗರಗಳಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.ಬೆಂಗಳೂರು ಅತಿ ಹೆಚ್ಚು ಸ್ತನ ಕ್ಯಾನ್ಸರ್ ಪೀಡಿತರು ನೋಂದಣಿಯಾಗಿರುವ ನಗರವಾಗಿದೆ. ದಾಖಲಾದ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಪ್ರಕಾರ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ 36 ಜನರು ಸ್ತನ ಕ್ಯಾನ್ಸರ್್್ ಗೆ ಗುರಿಯಾದವರಿದ್ದಾರೆ ಎಂದು ಐಸಿಎಂಆರ್ ಹೇಳುತ್ತದೆ. 2020ರ ವೇಳೆಗೆ ಗರ್ಭಕಂಠದ ಕ್ಯಾನ್ಸರ್ ಪೀಡಿತರ ಸಂಖ್ಯೆಯನ್ನೂ ಹಿಂದಿಕ್ಕೆ ಸ್ತನ ಕ್ಯಾನ್ಸರ್ ಹರಡಲಿದೆ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ. ಬೆಂಗಳೂರಿನ ನಂತರ ತಿರುವನಂತಪುರದಲ್ಲಿ 35, ಚೆನ್ನೈನಲ್ಲಿ 32, ದೆಹಲಿಯಲ್ಲಿ 32, ಮುಂಬೈನಲ್ಲಿ 31, ಅಹ್ಮದಾಬಾದ್ ನಗರದಲ್ಲಿ 27 ಕೋಲ್ಕತ್ತಾದಲ್ಲಿ 26 ಜನರು ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 

ಸ್ತನ ಕ್ಯಾನ್ಸರ್ ಆನುವಂಶಿಕ ಕಾರಣಗಳಿಂದ ಬರುತ್ತದೆಯೇ?

ಆನುವಂಶಿಕ ಕಾರಣಗಳಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎನ್ನುವುದು ಆರಂಭಿಕ ದಿನಗಳ ನಂಬಿಕೆಯಾಗಿತ್ತು. ಅದು ಸತ್ಯವೂ ಹೌದು. ಶೇ 10ರಿಂದ 15ರಷ್ಟು ಅನುವಂಶೀಯತೆಯೂ ಇದಕ್ಕೆ ಕಾರಣ. ಬಿಆರ್‌ಸಿಎ1 ಮತ್ತು ಬಿಆರ್‌ಸಿಎ 2 ಜೀನ್‌ಗಳು ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಒಂದು ವೇಳೆ, ಅಮ್ಮ, ಚಿಕ್ಕಮ್ಮ, ಅಜ್ಜಿ ಮುಂತಾದವರು ಯಾರಾದರೂ ಸ್ತನ ಕ್ಯಾನ್ಸರ್‌ನಿಂದ ಬಳಲಿದ್ದರೆ ಆ ಕುಟುಂಬದ ಹೆಣ್ಣುಮಕ್ಕಳು ಈ ವಿಷಯದಲ್ಲಿ ಎಚ್ಚರ ವಹಿಸಬೇಕಿರುವುದು ಅಗತ್ಯ. ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್‌ನಿಂದ ಬಳಲಿರುವ ಹಿನ್ನೆಲೆ ಇದ್ದಲ್ಲಿ 10ರಲ್ಲಿ ಒಬ್ಬರಿಗಾದರೂ ಈ ಕ್ಯಾನ್ಸರ್ ಕಾಡುವ ಸಾಧ್ಯತೆ ಇದ್ದೇ ಇರುತ್ತದೆ.

ಯಾವ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಬರುತ್ತದೆ?

ಸಾಮಾನ್ಯವಾಗಿ 55 ವರ್ಷ ದಾಟಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡುಬರುತ್ತದೆ. ಪಾಶ್ಚಿಮಾತ್ಯ ಮಹಿಳೆಯರನ್ನು ಹೋಲಿಸಿದ್ದಲ್ಲಿ ಭಾರತೀಯ ಮಹಿಳೆಯರಿಗೆ 10 ವರ್ಷ ಮುಂಚೆಯೇ ಈ ಕ್ಯಾನ್ಸರ್ ಕಾಡಬಹುದು. ಆದರೆ ಹಾಗೆಂದು ಇದು ಕೇವಲ ವಯೋವೃದ್ಧರಿಗೆ ಸೀಮಿತವಲ್ಲ. ಹದಿಹರೆಯದ ಯುವತಿಯರೂ ಸ್ತನಕ್ಯಾನ್ಸರ್‌ಗೆ ಒಳಪಟ್ಟಿರುವುದು ಪತ್ತೆಯಾಗುತ್ತಿದೆ.

ಕ್ಯಾನ್ಸರ್‌ ಕಾರಣಗಳೇನು?

*ಮದುವೆಯನ್ನು ಮುಂದೂಡುವುದು ಅಥವಾ ವಿಳಂಬವಾಗಿ ಮದುವೆ ಮಾಡಿಕೊಳ್ಳುವುದು.

*ಕಡಿಮೆ ಮಕ್ಕಳನ್ನು ಹೊಂದುವುದು

*ಗರ್ಭಧಾರಣೆಯ ಸಾಮರ್ಥ್ಯ ಅಥವಾ ಸಂದರ್ಭಗಳಲ್ಲಿ ಇಳಿಕೆ.

*ಎದೆಹಾಲುಣಿಸುವುದಕ್ಕೆ ನಿರಾಕಾರ/ಕಡಿಮೆ ಅವಧಿಗೆ ಸೀಮಿತ.

*ಗರ್ಭ ನಿರೋಧಕ ಮಾತ್ರೆಗಳ ಸೇವನೆ

*ಚಟುವಟಿಕೆಯಿಲ್ಲದ ಜೀವನಶೈಲಿ

*ಮದ್ಯಪಾನ, ಧೂಮಪಾನ

*ಅನುವಂಶೀಯ ಕಾರಣಗಳು

ಗುಣ ಲಕ್ಷಣಗಳು ಏನು?

*ಸ್ತನದ ಗಾತ್ರದಲ್ಲಿ ಬದಲಾವಣೆ ಅಥವಾ ಗಟ್ಟಿಗೊಳ್ಳುವುದು

*ಸ್ತನದ ಚರ್ಮದ ಮೇಲೆ ಗುಳಿ ಬೀಳುವುದು

*ಸ್ತನದ ಚರ್ಮದ ಸ್ವರೂಪ ಮತ್ತು ಬಣ್ಣದಲ್ಲಿ ಬದಲಾವಣೆ ಕಾಣಬಹುದು.

*ಮೊಲೆತೊಟ್ಟು ಒಳಮುಖವಾಗಿ ಮಡಿಸಿಕೊಳ್ಳಬಹುದು.

*ಮೊಲೆತೊಟ್ಟಿನಿಂದ ರಕ್ತ ಅಥವಾ ಕೀವಿನಂಥ ಸ್ರಾವ.

*ಮೊಲೆಯ ಬಣ್ಣ ಕೆಂಪಾಗಿ ಬದಲಾಗಬಹುದು.

*ಗಾತ್ರ, ಅಳತೆ ಅಥವಾ ಸ್ವರೂಪದಲ್ಲಿ ಬದಲಾವಣೆ ಕಾಣಬಹುದು.ಮಹಿಳೆಯರು ತಮ್ಮ ಸ್ತನದಲ್ಲಿ ಆಗುವ, ಆಗುತ್ತಿರುವ ಎಲ್ಲ ಬದಲಾವಣೆಗಳನ್ನು ಗಮನಿಸುತ್ತಿರಬೇಕು. ಒಂದು ವೇಳೆ ಬದಲಾವಣೆ ಕಂಡು ಬಂದಲ್ಲಿ ಕೂಡಲೇ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಸಂಕೋಚ ತಾಳಲೇಬಾರದು. ವಿಳಂಬ ಮಾಡಲೇಬಾರದು.ಸ್ತನದಲ್ಲಿ ಕಂಡು ಬರುವ ಯಾವುದೇ ಗಂಟನ್ನೂ ಅತಿಯಾದ ಸಂಶಯದ ದೃಷ್ಟಿಯಿಂದಲೇ ಕಾಣಬೇಕು. ಅದು ಕ್ಯಾನ್ಸರ್ ಅಲ್ಲ ಎಂದು ಸಾಬೀತು ಆಗುವವರೆಗೂ ಅದನ್ನು ಸಂಶಯಿಸಲೇಬೇಕು. ಅಗತ್ಯದ ಪರೀಕ್ಷೆಗಳಿಗೆ ಒಳಪಡಲೇಬೇಕು. ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭ ಎನ್ನುವುದು ನೆನಪಿರಲಿ.ವೈದ್ಯಕೀಯ ತಪಾಸಣೆ, ಪರೀಕ್ಷೆ, ಟಿಶ್ಯೂ ಪರಿಶೀಲನೆ, ಮ್ಯಾಮೋಗ್ರಫಿ, ಎಬಿವಿ ಸ್ಕ್ಯಾನ್, ಎಂಆರ್ಐ ಮುಂತಾದ ತಪಾಸಣೆಗೆ ಒಳಪಡಲೇಬೇಕು. ಎಲ್ಲಕ್ಕೂ ತಜ್ಞ ವೈದ್ಯರ ಸಮಾಲೋಚನೆ ಅತ್ಯಗತ್ಯ ಎನ್ನುವುದನ್ನು ಮರೆಯಬಾರದು. ಗಂಟಿನ ಗಾತ್ರ, ಹಂತ ಇನ್ನಿತರ ವಿವರಗಳಿಗಾಗಿ ಎಫ್ಎನ್ಎಸಿ, ಟಿಆರ್ಯುಸಿಯುಟಿ ಮುಂತಾದವುಗಳಿಂದ ಟಿಶ್ಯು ತಪಾಸಣೆಯಾಗಬೇಕು. ಗಂಟಿನ ಇತರ ಮಾಹಿತಿಗಾಗಿ ತಜ್ಞರ ನಿಗರಾಣಿಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ಗೂ ಒಳಪಡಬಹುದು.ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ

ಸಾಂಪ್ರದಾಯಿಕ ರೀತಿಯ ಶಸ್ತ್ರಚಿಕಿತ್ಸೆ:
ಸೆಂಟಿನಲ್ ನೋಡ್ ಬೈಯಾಪ್ಸಿ ತಂತ್ರ, ಸ್ತನವನ್ನೇ ತೆಗೆದು ಹಾಕುವುದು. ಇದಕ್ಕೆ ಪ್ರತಿಯಾಗಿ ಆಂಕೊ ಪ್ಲಾಸ್ಟಿಕಾ ತಂತ್ರಜ್ಞಾನದಿಂದ ಮತ್ತೆ ಸ್ತನ ಮರುಜೋಡಣೆಯನ್ನೂ ಮಾಡಬಹದು.

ಇದೆಲ್ಲವೂ ಕ್ಯಾನ್ಸರ್ ಅನ್ನು ಮೊದಲ ಅಥವಾ ಆರಂಭಿಕ ಹಂತದಲ್ಲಿಯೇ ಗುರುತಿಸಿದಾಗ ಸಾಧ್ಯವಾಗಬಹುದು. ಇಲ್ಲದಿದ್ದಲ್ಲಿ ರೋಗಿಗೆ ಕೀಮೊ ಥೆರಪಿ, ರೇಡಿಯೋ ಥೆರಪಿ, ಹಾರ್ಮೋನ್ ಥೆರಪಿ ಹಾಗೂ ಟಾರ್ಗೆಟ್ ಥೆರಪಿಯಂಥ ಸಂಯೋಜನಾ ಚಿಕಿತ್ಸೆಗೆ ಒಳಪಡಿಸಬೇಕಾಗಬಹುದು.ಕೀಮೊ ಮತ್ತು ಟಾರ್ಗೆಟ್ ಥೆರಪಿ ಪರಿಣಾಮಕಾರಿಯಾಗಬೇಕಾದರೆ, ಜೀನ್ ಅಧ್ಯಯನಕ್ಕೆ ರೋಗಿಯು ಸಹಕರಿಸಬೇಕಾಗುತ್ತದೆ. ಆಗ ವೈಯಕ್ತಿಕವಾದ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದು.ಎಲ್ಲ ಮಹಿಳೆಯರು ನಿಯಮಿತವಾಗಿ ತಜ್ಞ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು. ರೋಗದ ಕೌಟುಂಬಿಕ ಹಿನ್ನೆಲೆ ಇದ್ದವರು ಹೈ ರಿಸ್ಕ್ ಗ್ರೂಪ್ ಸ್ಕ್ರೀನಿಂಗ್ಗೆ ಒಳಗಾಗಲೇಬೇಕು. ಸ್ವಯಂ ಪರೀಕ್ಷೆಗೆ ಒಳಪಡಬೇಕು. ಮ್ಯಾಮೋಗ್ರಾಮ್, ಎಂಆರ್ಐ ಹಾಗೂ ಜೀನ್ ಪರೀಕ್ಷೆಗಳಿಗೆ ಅಗತ್ಯವಿದ್ದರೆ ಒಳಪಡಲೇಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.