ಸ್ತನ ಕ್ಯಾನ್ಸರ್: ಎದೆಗುಂದದಿರಿ!

7

ಸ್ತನ ಕ್ಯಾನ್ಸರ್: ಎದೆಗುಂದದಿರಿ!

Published:
Updated:

ಸ್ತನ ಕ್ಯಾನ್ಸರ್- ಇದರ ಹೆಸರು ಕೇಳಿದರೆ ಸಾಕು, ಮಹಿಳೆಯರ ಎದೆ ಧಸಕ್ಕೆನ್ನುತ್ತದೆ. `ಅಯ್ಯೋ, ಅದು ನನಗೆ ಬಂದುಬಿಟ್ಟರೆ ಏನು ಮಾಡುವುದು?~ ಎಂಬ ಭಯದಿಂದ ಹಲವರಿಗೆ ಎದೆ ಢವಢವ ಹೊಡೆದುಕೊಂಡರೂ ಆಶ್ಚರ್ಯವಿಲ್ಲ.ನಮ್ಮ ದೇಶದಲ್ಲಿ, ಪ್ರತಿ ಇಪ್ಪತ್ತೆರಡು ಮಹಿಳೆಯರ ಪೈಕಿ ಒಬ್ಬಳಿಗೆ ಅವಳ ಜೀವಿತಾವಧಿಯಲ್ಲಿ ಇದು ಬರುವ ಸಾಧ್ಯತೆ ಇದೆಯೆಂಬ ಅಂದಾಜಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಳು ಇದರಿಂದ ನರಳುವ ಸಂಭವ ಇದೆ. ಎಲ್ಲ ರೋಗಗಳ ಹಾಗೆ ಸ್ತನ ಕ್ಯಾನ್ಸರ್‌ಗೆ ಕೂಡ `ಮೊದಲ ಔಷಧ~ ಎಂದರೆ ಅದನ್ನು ಕುರಿತ ಅರಿವು ಮತ್ತು ಅದು ಬರದಂತೆ ವಹಿಸುವ ಮುನ್ನೆಚ್ಚರಿಕೆ.ಸ್ತನಗಳನ್ನು ಮಹಿಳೆಯ ಹೆಮ್ಮೆಯ ಹೆಗ್ಗುರುತು, ಲೈಂಗಿಕ ಆಕರ್ಷಣೆಗೆ ಆಧಾರ, ತಾಯ್ತನದ ಮುಖ್ಯ ಸಾಧನ ಎಂದು ಯಾರು ಏನು ಬೇಕಾದರೂ ವರ್ಣಿಸಲಿ, ವೈದ್ಯಶಾಸ್ತ್ರದ ಪ್ರಕಾರ `ಸ್ತನ~ ಎನ್ನುವುದು ಸಂಕೀರ್ಣ ರಚನೆಯುಳ್ಳ ಒಂದು ದೈಹಿಕ ಅಂಗ. ಬೇರೆ ಅಂಗಗಳಂತೆ ಇದಕ್ಕೂ ನಿರ್ದಿಷ್ಟ ಕರ್ತವ್ಯಗಳಿವೆ. ಹಾಗೆಯೇ ಇದಕ್ಕೆ ಅದರದೇ ಆದ ಸಮಸ್ಯೆಗಳಿವೆ.`ಸ್ತನ ಕ್ಯಾನ್ಸರ್~ ಎಂದರೆ ಸ್ತನದೊಳಗಿನ ಜೀವಕೋಶಗಳಲ್ಲಿ ಬೆಳೆಯುವ ಮಾರಕ ಗಡ್ಡೆಯ ಮಾರಣಾಂತಿಕ ಸಮಸ್ಯೆ. ಸ್ತನದೊಳಗೆ ಹಾಲು ಉತ್ಪಾದಿಸುವ ಗ್ರಂಥಿಗಳ ಕಿರುಹಾಲೆಗಳ (ಔಟಚ್ಠ್ಝಿಛಿ) ಜೀವಕೋಶಗಳಲ್ಲಿ ಸ್ತನ ಕ್ಯಾನ್ಸರ್ ಆರಂಭವಾಗಬಹುದು ಅಥವಾ ಕಿರುಹಾಲೆಗಳಿಂದ ಮೊಲೆತೊಟ್ಟುಗಳಿಗೆ ಹಾಲು ಹಾಯಿಸುವ ನಾಳಗಳಲ್ಲಿ (ಈ್ಠ್ಚಠಿ) ಈ ಸಮಸ್ಯೆ ಮೊದಲು ಕಾಣಿಸಬಹುದು. ಕೆಲವೊಮ್ಮೆ ಸ್ತನದ ಅಂಗಾಂಶಗಳಲ್ಲಿ (ಜಿಠ್ಠಛಿ) ಶುರುವಾಗಬಹುದು.ಸ್ತನ ಕ್ಯಾನ್ಸರ್‌ಗೂ ಆನುವಂಶಿಕತೆಗೂ ನಿಕಟ ನಂಟು. ಯಾವುದೋ `ಆನುವಂಶಿಕ ತಪ್ಪು~ ಅದಕ್ಕೆ ಕಾರಣವಾಗಬಹುದು. ಶೇ 5 ರಿಂದ 10 ರಷ್ಟು ಕ್ಯಾನ್ಸರ್ ಪ್ರಸಂಗಗಳು ಮಾತ್ರ ನಮ್ಮ ತಂದೆ ಅಥವಾ ತಾಯಿಯಿಂದ ನೇರವಾಗಿ ಬಂದ ಅಸಾಮಾನ್ಯತೆಯ (ಅಚ್ಞಿಟ್ಟಞಚ್ಝಜಿಠಿ) ಬಳುವಳಿಯಾಗಿರಬಹುದು. ಆದರೆ ಶೇ 90 ರಷ್ಟು ಸ್ತನ ಕ್ಯಾನ್ಸರ್ ಪ್ರಸಂಗಗಳು ವಯೋಸಹಜವಾಗಿ ಕಾಣಿಸಿಕೊಳ್ಳುವ ಆನುವಂಶಿಕ ಅಂಶಗಳು ಮತ್ತು ಜೀವನಶೈಲಿಯಿಂದ ಬರುತ್ತವೆ.ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, `ಸ್ತನ ಕ್ಯಾನ್ಸರ್~ ಯಾರ ತಪ್ಪಿನ ಫಲವಾಗಿಯೂ ಬರುವ ರೋಗವಲ್ಲ. ಸ್ತನ ಕ್ಯಾನ್ಸರ್ ಬಗ್ಗೆ ಅಪರಾಧೀ ಭಾವನೆಯಿಂದ ತೊಳಲಾಡಿ ಮನ ಮುದುಡಿಸಿಕೊಳ್ಳುವುದು ಬೇಡವೇ ಬೇಡ. ಆದರೆ ಪ್ರತಿಯೊಬ್ಬರೂ ಸಮತೋಲಿತ ಆಹಾರ ಸೇವಿಸುವುದು, ಚಟಗಳಿಂದ ದೂರವಿರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು- ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ದೇಹವನ್ನು ಈ ಸಂಕಷ್ಟದಿಂದ ಮಾತ್ರವಲ್ಲ ಇನ್ನಿತರ ಸಮಸ್ಯೆಗಳಿಂದಲೂ ದೂರವಿಡಬಹುದು.ಸ್ತನ ಕ್ಯಾನ್ಸರ್ ಬಗ್ಗೆ ನಡೆದಿರುವ ಅಪಾರ ಸಂಶೋಧನೆಗಳಿಂದ ಹಲವಾರು ಮುಖ್ಯ ಅಂಶಗಳು ತಿಳಿದುಬಂದಿವೆ. ಅವೆಂದರೆ: ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ವಯಸ್ಸಾಗುತ್ತಾ ಹೋದಂತೆ ಹೆಚ್ಚುತ್ತದೆ. ಋತುಬಂಧ (ಛ್ಞಿಟಚ್ಠಛಿ) ಆಗಿರುವ ಮಹಿಳೆಯರ ದೇಹದ ತೂಕ ತುಂಬಾ ಹೆಚ್ಚಾಗಿರುವುದಕ್ಕೂ ಇದಕ್ಕೂ ನಂಟಿದೆ. ಯಾವ ಮಹಿಳೆಯ ತಾಯಿ, ಸೋದರಿ ಅಥವಾ ಮಗಳಿಗೆ ಸ್ತನ ಕ್ಯಾನ್ಸರ್ ಅಥವಾ ಅಂಡಾಶಯ ಕ್ಯಾನ್ಸರ್ ಇದೆಯೋ ಆ ಮಹಿಳೆ ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗೃತಳಾಗಿರಬೇಕು.

 

ಇನ್ನು ಕೆಲವರಲ್ಲಿ  ಇದು ಹೆತ್ತವರಿಂದ ಬಳುವಳಿಯಾಗಿರುತ್ತವೆ. ಬಾಲ್ಯದಲ್ಲಿ ಹನ್ನೆರಡು ವರ್ಷ ತುಂಬುವ ಮೊದಲೇ ಋತುಮತಿಯಾದ ಮಹಿಳೆಯರು, 55 ವರ್ಷಗಳ ನಂತರ ಋತುಬಂಧ ಆಗಿರುವ ಮಹಿಳೆಯರು ಇದಕ್ಕೆ ತುತ್ತಾಗುವ ಸಂಭವ ಹೆಚ್ಚು. ಮೂವತ್ತು ವರ್ಷ ಆದ ನಂತರ ಮಗು ಹೆತ್ತವರು ಅಥವಾ ಮಕ್ಕಳಿಗೆ ಮೊಲೆಹಾಲು ಕುಡಿಸದವರು ಮತ್ತು ಮಕ್ಕಳಿಲ್ಲದವರು - ಈ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಪಾಯ ಇರುತ್ತದೆ. ಬೀಡಿ, ಸಿಗರೇಟ್, ತಂಬಾಕು ಚಟ ಇರುವ, ಎಗ್ಗಿಲ್ಲದೆ ಮದ್ಯಸೇವನೆ ಮಾಡುವ ಮತ್ತು ಹಾರ್ಮೋನ್ ಚಿಕಿತ್ಸೆ ಪಡೆವ ಮಾನಿನಿಯರು ಇದಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಯಾವ ಸುಳಿವೂ ಕೊಡದೆ ಸ್ತನ ಕ್ಯಾನ್ಸರ್ ಬಂದುಬಿಡಬಹುದು. ಆದರೆ ಅದರ ಕುರುಹುಗಳನ್ನು ಕಂಡುಹಿಡಿಯಲು ವಿಧಾನಗಳಿವೆ. ಸ್ತನದಲ್ಲಿ ಏನೋ ಗಂಟು, ಗಟ್ಟಿಭಾಗ ಅಥವಾ ಸ್ತನದ ಆಕಾರದಲ್ಲಿ ವ್ಯತ್ಯಾಸ ಕಂಡುಬಂದರೆ, ಕ್ಯಾನ್ಸರ್ ಬಂದಿದೆ ಎಂಬ ಸಂಶಯ ತರಬಹುದು; ಆದರೆ ಮೃದುವಾದ, ಗುಂಡಗೆ ಸರಿಯಾದ ಆಕಾರದಲ್ಲಿ ಇರುವ ಸ್ತನವೂ ಕ್ಯಾನ್ಸರ್‌ಗೆ ತುತ್ತಾಗಿರಬಹುದು.  ಸ್ತನ ವಿಚಕ್ಷಣೆ ಮಾಡಲು ನಡೆಸುವ `ಮ್ಯಾಮೋಗ್ರಫಿ~ ಮುಂತಾದ ಪರೀಕ್ಷೆಗಳು ಮಾತ್ರ ಇದನ್ನು ಸ್ಪಷ್ಟಪಡಿಸಬೇಕು.ಸ್ತನಕ್ಕೆ ಕ್ಯಾನ್ಸರ್ ಬಂದಿದೆ ಎಂಬುದು ಖಚಿತವಾದರೆ, ಅದು ಎಷ್ಟು ಹರಡಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. `ಕ್ಯಾನ್ಸರ್ ಹಂತದ ನಿರ್ಧಾರ~ ಎಂದು ಇದನ್ನು ಕರೆಯಬಹುದು. ಯಾವ ಹಂತ ಎಂಬುದು ತಿಳಿದರೆ, ಅದಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ಅನುಸರಿಸಬೇಕಾದ ಕ್ರಮ ನಿರ್ಧಾರ ಆಗುತ್ತದೆ. ಸ್ತನ ಕ್ಯಾನ್ಸರ್ ಹಂತಗಳನ್ನು 0- 4 ಎಂದು ನಾಲ್ಕು ಹಂತಗಳಲ್ಲಿ ಗುರುತಿಸಲಾಗುತ್ತದೆ. ಹೆಚ್ಚಿನ ಸಂಖ್ಯೆ  ಉಲ್ಬಣವನ್ನು ಸೂಚಿಸುತ್ತದೆ.ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಹಲವು ಸಂಗತಿಗಳ ಆಧಾರದ ಮೇಲೆ ರೂಪಿಸಲಾಗುತ್ತದೆ. ಕ್ಯಾನ್ಸರ್ ಯಾವ ವಿಧ, ಯಾವ ಹಂತದಲ್ಲಿದೆ ಎನ್ನುವುದು ಮುಖ್ಯ. ಈ ಕ್ಯಾನ್ಸರ್ ಕೆಲವು ಹಾರ್ಮೋನ್‌ಗಳಿಗೆ ತುಂಬ ಸೂಕ್ಷ್ಮವಾಗಿದೆಯೇ, ಒಂದು ನಿರ್ದಿಷ್ಟ ಜೀನ್ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತದೆಯೇ ಎಂಬುದನ್ನು ಕಂಡುಹಿಡಿಯಲಾಗುತ್ತದೆ.ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಕೆಮೊಥೆರಪಿ ಔಷಧಗಳು, ಕ್ಯಾನ್ಸರ್ ಪೀಡಿತ ಅಂಗಾಂಶಗಳನ್ನು ನಾಶಮಾಡಲು ವಿಕಿರಣ ಚಿಕಿತ್ಸೆ ಕೊಡಬಹುದು. ಸ್ತನದಲ್ಲಿರುವ ಗಂಟು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಬಹುದು. ಇಲ್ಲವೇ ಸ್ತನದ ಭಾಗವನ್ನು ಅಥವಾ ಪೂರ್ತಿ ಸ್ತನವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಆಗಬಹುದು.

 

ಕೆಲವೊಮ್ಮೆ ಸ್ತನದ ಜೊತೆಗೆ ಅದರ ಸುತ್ತಮುತ್ತಲಿನ ಭಾಗಗಳನ್ನೂ ತೆಗೆದುಹಾಕಬೇಕಾಗಬಹುದು. ಸ್ತನ ಕ್ಯಾನ್ಸರ್‌ನ ವಿಧ ಅನುಸರಿಸಿ ಹಾರ್ಮೋನ್ ಚಿಕಿತ್ಸೆಯನ್ನು ಕೂಡ ವೈದ್ಯರು ನಿರ್ಧರಿಸಬಹುದು. ಇವುಗಳಲ್ಲದೆ ಜೀವಕೋಶಗಳನ್ನು ಗುರಿಯಾಗಿಟ್ಟುಕೊಂಡ `ಟಾರ್ಗೆಟೆಡ್ ಥೆರಪಿ~ ಕೂಡ ಈಗ ಚಾಲ್ತಿಯಲ್ಲಿದೆ. ಈ ಚಿಕಿತ್ಸೆಗಳಲ್ಲಿ ಯಾವ್ಯಾವುದನ್ನು ಕೊಡಬೇಕೆಂದು ಅಗತ್ಯ ನೋಡಿ ತೀರ್ಮಾನಿಸಲಾಗುತ್ತದೆ.ಚಿಕಿತ್ಸೆ ನೀಡುವಾಗ, ಸ್ತನ ಕ್ಯಾನ್ಸರ್‌ನ ಮೊದಲ ಮೂರು ಹಂತಗಳಲ್ಲಿ ಕ್ಯಾನ್ಸರ್ ಗುಣಪಡಿಸುವತ್ತ ಮತ್ತು ಅದು ಮರುಕಳಿಸದಂತೆ ತಡೆಯುವತ್ತ ವೈದ್ಯರ ಗಮನ ಇರುತ್ತದೆ. ನಾಲ್ಕನೇ ಹಂತದಲ್ಲಿ ರೋಗಿಯನ್ನು ಎಷ್ಟು ಕಾಲ ಸಾಧ್ಯವೋ ಅಷ್ಟು ಉಳಿಸುವುದು ಪ್ರಾಮುಖ್ಯ ಪಡೆಯುತ್ತದೆ. ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಗುಣಪಡಿಸುವುದು ಬಹಳ ಕಷ್ಟ.ಚಿಕಿತ್ಸೆ ಪಡೆದ ಮೇಲೂ ಕೆಲವು ಮಹಿಳೆಯರಿಗೆ ಔಷಧ ಸೇವನೆ ಇನ್ನಷ್ಟು ಕಾಲ ಇರುತ್ತದೆ. ಎಲ್ಲರಿಗೂ ಕಾಲಕಾಲಕ್ಕೆ ತಪಾಸಣೆಗಳು ಅಗತ್ಯವಾಗುತ್ತವೆ. ಶಸ್ತ್ರ ಚಿಕಿತ್ಸೆಯಲ್ಲಿ ಸ್ತನ ತೆಗೆದುಹಾಕಿದರೆ ಅದನ್ನು ಮರುರೂಪಿಸುವ ಶಸ್ತ್ರಚಿಕಿತ್ಸೆಯೂ ಆಗಲೇ ಅಥವಾ ಕೆಲಕಾಲಾ ನಂತರ ನಡೆಯಬಹುದು.ಸ್ತನ ಕ್ಯಾನ್ಸರ್ ವಿಚಾರದಲ್ಲಿ ನಾವು ಮನನ ಮಾಡಿಕೊಳ್ಳಬೇಕಾದ ವಿಚಾರಗಳೆಂದರೆ, ನಾವು ಆನುವಂಶಿಕವಾಗಿ ಪಡೆಯುವ ಜೀನ್ ಅಥವಾ ವಂಶವಾಹಿಗಳ ಮೇಲೆ ಮತ್ತು ಕುಟುಂಬದ ಆರೋಗ್ಯ ಹಿನ್ನೆಲೆಯ ಮೇಲೆ ನಮಗೆ ಹತೋಟಿ ಇರುವುದಿಲ್ಲ. ಆದರೆ ಕ್ಯಾನ್ಸರ್ ಸಾಧ್ಯತೆಯನ್ನು ತಡೆಯುವ ನಮ್ಮ ಆರೋಗ್ಯದ ಕಾಳಜಿ ಮತ್ತು ಜೀವನಶೈಲಿಗಳ ಮೇಲೆ ಖಂಡಿತವಾಗಿಯೂ ನಾವು ನಿಯಂತ್ರಣ ಸಾಧಿಸಬಹುದು. ಆರೋಗ್ಯವರ್ಧಕ ಆಹಾರ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ- ಮದ್ಯಸೇವನೆ ಚಟಗಳನ್ನು ವರ್ಜಿಸುವುದು ಇವೆಲ್ಲವೂ ನಮಗೆ ನಾವೇ ಕೊಟ್ಟುಕೊಳ್ಳುವ ಅಮೂಲ್ಯ ಉಡುಗೊರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry