ಸ್ತನ ಕ್ಯಾನ್ಸರ್ ಬೆಂಗಳೂರು ನಂ 1

7

ಸ್ತನ ಕ್ಯಾನ್ಸರ್ ಬೆಂಗಳೂರು ನಂ 1

Published:
Updated:

ಸ್ತನ ಕ್ಯಾನ್ಸರ್ ನಗರವಾಸಿ ಮಹಿಳೆಯರ ಜೀವನದಲ್ಲಿ ಕೋಲಾಹಲ ಎಬ್ಬಿಸುತ್ತದೆ. ಕೇಂದ್ರ ಸರ್ಕಾರದ ಸಮೀಕ್ಷೆಯೊಂದರ ಪ್ರಕಾರ ದೇಶದ ಇತರೆಲ್ಲ ನಗರಗಳಿಗಿಂತ ಬೆಂಗಳೂರಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಹಿನ್ನೆಲೆಯಲ್ಲಿ ಇದರ ಮೇಲೊಂದು ಬೆಳಕು...ಆಕೆ ಆಗಷ್ಟೇ ಮೂವತ್ತು ದಾಟಿರುವ ಯುವತಿ. ಓದು, ಆನಂತರದ ಉದ್ಯೋಗ, ವೃತ್ತಿ ಜೀವನದ ಸವಾಲಿನ ಮಧ್ಯೆ ಮದುವೆ ಯೋಚನೆ ಮಾಡಿದ್ದೇ ತಡವಾಗಿ. ಮನೆಯವರು ಆಕೆಯ ಹೈ ಪ್ರೊಫೈಲ್ ಜಾಬ್‌ಗೆ ತಕ್ಕ ಯುವಕನನ್ನು ಹುಡುಕುತ್ತಲೇ ಇದ್ದರು. ಅಷ್ಟರಲ್ಲಿ ಸಿಡಿಲಿನಂತೆ ಎರಗಿತ್ತು ಸ್ತನ ಕ್ಯಾನ್ಸರ್.ಮತ್ತೊಬ್ಬಾಕೆ ಎರಡು ಮಕ್ಕಳ ತಾಯಿ. ಕಳೆದ ವರ್ಷವಷ್ಟೇ 40ನೇ ಹುಟ್ಟುಹುಬ್ಬ ಆಚರಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಆ ಮಹಿಳೆ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಆಗಾಗೆ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೂ ಮನೆಗೆಲಸ, ಕಚೇರಿ ಕೆಲಸದ ಒತ್ತಡದಲ್ಲಿ ಆ ಕಡೆ ಗಮನ ನೀಡಲಿಲ್ಲ. ಅದಕ್ಕಾಗಿ ಈಗ ಭಾರಿ ಬೆಲೆ ತೆತ್ತಿದ್ದಾರೆ.  ಕ್ಯಾನ್ಸರ್ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ.

 

ಇದು ಒಂದಿಬ್ಬರು ಮಹಿಳೆಯರ ಕಥೆಯಲ್ಲ. ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಲ್ಲಿ, ಸ್ಪೆಷಾಲಿಟಿ ಕ್ಲಿನಿಕ್‌ಗಳಲ್ಲಿ ದಿನಕ್ಕೆ ಹತ್ತಾರು ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಸಮೀಕ್ಷೆಯೊಂದರ ಪ್ರಕಾರ ದೇಶದ ಇತರೆಲ್ಲ  ನಗರಗಳಿಗಿಂತ ಬೆಂಗಳೂರಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ.ಕೇಂದ್ರ ಸರ್ಕಾರದ ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ ಪ್ರಕಾರ ಬೆಂಗಳೂರಿನ 1 ಲಕ್ಷ ಜನರ ಪೈಕಿ 36.1 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ.ಮುಂಬೈ ನಂತರದ ಸ್ಥಾನದಲ್ಲಿದ್ದು ಇಲ್ಲಿ 32.3, ಚೆನ್ನೈನಲ್ಲಿ ಶೇ 31.5 ಹಾಗೂ ಕೋಲ್ಕತ್ತದಲ್ಲಿ 25.5ರಷ್ಟಿದೆ.5-6 ಮಕ್ಕಳನ್ನು ಹೆರುವ ಗ್ರಾಮೀಣ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್, ಗರ್ಭಕೊರಳಿನ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಕಾಣಿಸಿಕೊಂಡಲ್ಲಿ, ಒಂದು ಅಥವಾ ಎರಡು ಮಕ್ಕಳನ್ನು ಹೆರುವ ನಗರವಾಸಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚು.ಫ್ಯಾಷನ್ ಹುಚ್ಚಿನಲ್ಲಿ ಅಥವಾ ಕೆಲಸದ ಒತ್ತಡದಲ್ಲಿ ಮಕ್ಕಳಿಗೆ ಹಾಲುಣಿಸದೇ ಇರುವುದು ಸಹ ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.ಕಾರಣ ಏನು..?

ಕಲುಷಿತ ಆಹಾರ, ಬದಲಾದ ಜೀವನ ಕ್ರಮ, ಕಡಿಮೆ ದೈಹಿಕ ಶ್ರಮದ ಕೆಲಸ, ಅತಿಯಾಗಿ ತಂತ್ರಜ್ಞಾನ ಅವಲಂಬಿಸಿದ ಕೆಲಸ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚು.  ಸ್ತನದಲ್ಲಿ ಏನಾದರೂ ಅಸಾಮಾನ್ಯ ವ್ಯತ್ಯಾಸಗಳು ಬದಲಾವಣೆಗಳು ಕಂಡು ಬಂದ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ.ವಯೋಮಾನ ಅಧಿಕವಾದಂತೆ ಈ ಅಪಾಯದ ಸಾಧ್ಯತೆಯೂ ಹೆಚ್ಚು. 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ತಪಾಸಣೆಗೆ ಒಳಗಾಗಬೇಕು.ಬಾಲ್ಯದಲ್ಲಿ ಅಥವಾ ಯೌವನದಲ್ಲಿ ಎದೆಯ ಭಾಗಕ್ಕೆ ವಿಕಿರಣ (radiation) ಚಿಕಿತ್ಸೆ ಪಡೆದವರು ಅನಂತರದ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಅತಿಯಾದ ತೂಕ ಹೊಂದಿದ್ದರೆ ಅದೂ ಕೂಡ ಈ ಕಾಯಿಲೆಗೆ ಕಾರಣವಾಗಬಹುದು.12 ವರ್ಷಕ್ಕಿಂತ ಮುಂಚೆ ಋತುಮತಿಯಾದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು.  55 ವರ್ಷ ಮೇಲ್ಪಟ್ಟು ಮುಟ್ಟು ನಿಂತರೆ ಸಹ ಸ್ತನ ಪರೀಕ್ಷೆಗೆ ಒಳಗಾಗಲೇಬೇಕು. ವಿಳಂಬಿತ ತಾಯ್ತನ ಸಹ ಇದಕ್ಕೆ ಕಾರಣವಾಗುತ್ತದೆ (35 ವರ್ಷದ ನಂತರ ಮೊದಲ ಮಗುವಿಗೆ ಜನ್ಮ ನೀಡಿದಾಗ)

 

ಕೌಟುಂಬಿಕ ಇತಿಹಾಸ ಸ್ತನ ಕ್ಯಾನ್ಸರ್‌ನ ಅಡಿಪಾಯ. ಕುಟುಂಬದಲ್ಲಿ ಯಾರಾದರೂ ಇಬ್ಬರಲ್ಲಿ ಇದು ಕಾಣಿಸಿಕೊಂಡರೆ ಇನ್ನುಳಿದವರು ಜಾಗೃತೆ ವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಆದರೂ ಕೌಟುಂಬಿಕ ಇತಿಹಾಸ ಇಲ್ಲದ ಮಹಿಳೆಯರಲ್ಲೂ ಈ ಕ್ಯಾನ್ಸರ್ ಕಂಡು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆರಂಭಿಕ ಹಂತದಲ್ಲಿಯೇ ಗೊತ್ತಾದರೆ ಸ್ತನ ಕ್ಯಾನ್ಸರ್ ಪೂರ್ಣ ಗುಣಪಡಿಸಬಹುದು. ನಂತರದ ಹಂತಗಳಲ್ಲಾದರೆ ಅದು ಬೆಳೆಯದಂತೆ ನಿಯಂತ್ರಿಸಬಹುದು. ಅದಕ್ಕೆ ಸೂಕ್ತವಾದ ಔಷಧ, ಚಿಕಿತ್ಸೆ ಲಭ್ಯವಿದೆ. ಈ ವಿಷಯದಲ್ಲಿ ವೈದ್ಯ ವಿಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿದಿದೆ.ಆದರೆ ಕಡಿಮೆ ವರಮಾನವಿರುವ ರಾಷ್ಟ್ರಗಳಲ್ಲಂತೂ ಇದು ಅತೀ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಳ್ಳಬಹುದಾದ ಕಾಯಿಲೆ. ಅದಕ್ಕೆ ಸೂಕ್ತ ಮುನ್ನೆಚ್ಚರಿಕೆಯ ಅಗತ್ಯವಿದೆ. ಲಕ್ಷಣಗಳು ಕಂಡುಬರುತ್ತಿದ್ದಂತೆ ಸೂಕ್ತ ಪರೀಕ್ಷೆಗೆ ಒಳಗಾಗಬೇಕು.ವಿಳಂಬವಾದಲ್ಲಿ ಜೀವಕ್ಕೇ ಅಪಾಯ ಉಂಟಾಗಬಹುದು. ಪ್ರತಿ ವರ್ಷ ಅಕ್ಟೋಬರ್ ಮಾಸವನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಪಂಗಿರಾಮನಗರದ ಕಾಳಿಂಗ ರಾವ್ ರಸ್ತೆಯಲ್ಲಿರುವ ಎಚ್‌ಸಿಜಿ ಆಸ್ಪತ್ರೆ ರಿಯಾಯ್ತಿ ದರದಲ್ಲಿ ವಿವಿಧ ತಪಾಸಣೆ ಮಾಡುತ್ತಿದೆ.ವೈದ್ಯರು ಏನು ಹೇಳುತ್ತಾರೆ..?

ಎಷ್ಟು ಬಾರಿ ಜಾಗೃತಿ ಮೂಡಿಸಿದರೂ ಇಂದಿಗೂ ವಿದ್ಯಾವಂತ ಸಮುದಾಯದಲ್ಲಿ ಕ್ಯಾನ್ಸರ್ ಬಗ್ಗೆ ತಪ್ಪು ಕಲ್ಪನೆಗಳೇ ಹೆಚ್ಚು.ರೋಗ ಲಕ್ಷಣಗಳು ಕಾಣಿಸಿಕೊಂಡಲೇ ವೈದ್ಯರ ಬಳಿ ಬಂದು ಚಿಕಿತ್ಸೆ ತೆಗೆದುಕೊಂಡರೆ ಕ್ಯಾನ್ಸರ್ ನಿರ್ಮೂಲನೆ ಸಾಧ್ಯ ಎನ್ನುತ್ತಾರೆ ಎಚ್‌ಸಿಜಿ ಆಸ್ಪತ್ರೆಯ ವೈದ್ಯ ಡಾ.ಶೇಖರ್ ಪಾಟೀಲ್.ಸರಿಯಾದ ನಿದ್ರೆ, ತೂಕದ ಆಹಾರ, ವ್ಯಾಯಾಮ, ಯೋಗ, ಮುಂತಾದ ಕ್ರಮಗಳ ಮೂಲಕ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಬೇಕು. ಸದಾ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ಆಗ  ಸ್ತನ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗುತ್ತದೆ ಎಂಬುದು ಅವರ ಅಭಿಮತ.ಸ್ತನ ಕ್ಯಾನ್ಸರ್ ಲಕ್ಷಣಗಳು

ಒಂದು ಭಾಗದಲ್ಲಿ ಊತ (swelling) ಕಾಣಿಸಿಕೊಳ್ಳುವುದುಸ್ತನದಲ್ಲಿ ಅಥವಾ ಅದರ ಸುತ್ತಮುತ್ತ ಗಡ್ಡೆ.ತೊಟ್ಟಿನ ಗಾತ್ರ ಹಾಗೂ ಬಣ್ಣದಲ್ಲಿ ವ್ಯತ್ಯಾಸ.ಸ್ತನದ ತೊಟ್ಟು ಕೆಂಪಾದಾಗ.ಸ್ತನದ ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ವ್ಯತ್ಯಾಸ.ಸ್ತನದ ಒಂದು ಭಾಗದಿಂದ ನಿಯಮಿತವಾಗಿ ನೋವು ಬರುವುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry