ಸ್ತಬ್ಧ ಗಡಿಯಾರ

7

ಸ್ತಬ್ಧ ಗಡಿಯಾರ

Published:
Updated:

ಚಿತ್ರ: ಒಂದು ಕ್ಷಣದಲ್ಲಿ

ನಿರ್ಮಾಪಕರು: ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್

ನಿರ್ದೇಶಕ: ದಿನೇಶ್‌ಬಾಬು

ತಾರಾಗಣ: ತರುಣ್‌ಚಂದ್ರ, ಭಾಮಾ, ಸಂಜನಾ, ಜೈಜಗದೀಶ್, ಶರಣ್, ಸತ್ಯಜಿತ್, ಉಮೇಶ್, ಸಂಗೀತಾ, ಶೀಲಾ, ಬ್ರಹ್ಮಾವರ್ ಮತ್ತಿತರರು.ಅನುಭವ ಹೆಚ್ಚಾದಂತೆ ನಿರ್ದೇಶಕನ ಕುಶಲತೆಯೂ ಹೆಚ್ಚುತ್ತದೆ. ಸಿನಿಮಾ ಭಾಷೆ ಸುಲಲಿತವಾದಂತೆ ಅವರಿಂದ ಸೃಷ್ಟಿಯಾಗುವ ಚಿತ್ರಗಳು ಮತ್ತಷ್ಟು ಪರಿಣಾಮಕಾರಿಯಾಗಬಲ್ಲವು. ಆದರೆ ಈ ಮಾತು `ಸುಪ್ರಭಾತ~, `ಅಮೃತವರ್ಷಿಣಿ~ಯಂಥ ಸಿನಿಮಾ ನೀಡಿದ ದಿನೇಶ್‌ಬಾಬು ಅವರಿಗೆ ಅನ್ವಯವಾಗಲಾರದು. ಉತ್ತಮ ಸಿನಿಮಾವಾಗಿಸಬಹುದಾದ ಕಥೆಯನ್ನು ಹೇಗೆ ನೀರಸವಾಗಿ ತೆರೆಯ ಮೇಲೆ ತರಬಹುದು ಎಂಬುದಕ್ಕೆ ಉದಾಹರಣೆಯಂತಿದೆ `ಒಂದು ಕ್ಷಣದಲ್ಲಿ~ ಚಿತ್ರ.ಒಂದು ಸೂಕ್ಷ್ಮ ಎಳೆಯನ್ನಿಟ್ಟುಕೊಂಡು ಅದನ್ನು ಸುಂದರ ಸಿನಿಮಾವನ್ನಾಗಿ ರೂಪಿಸುವುದು ಸಾಧ್ಯ ಎಂಬುದನ್ನು ದಿನೇಶ್‌ಬಾಬು ತಮ್ಮ ಆರಂಭದ ಚಿತ್ರಗಳಲ್ಲಿ ತೋರಿಸಿಕೊಟ್ಟಿದ್ದರು. ಅವರ ಪ್ರೇಮಕಥೆ, ಹಾಸ್ಯ, ಥ್ರಿಲ್ಲರ್ ಚಿತ್ರಗಳಲ್ಲಿ ಇದು ವ್ಯಕ್ತವಾಗಿತ್ತು. ಆದರೆ ಅವರಲ್ಲಿ ಹಿಂದಿನ ಆ ನವಿರುತನ, ಸೂಕ್ಷ್ಮತೆ ಉಳಿದಿಲ್ಲ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಚಿತ್ರಕಥೆ ಹೆಣಿಗೆಯಲ್ಲಿ, ನಿರ್ದೇಶನದಲ್ಲಿ, ನಿರೂಪಣೆಯಲ್ಲಿ ಅವರು ಉದಾಸೀನತೆ ತೋರಿದ್ದಾರೆ. ಅದರ ಪರಿಣಾಮವಾಗಿ ಹಸಿರು ವನದಂತೆ ಕಂಗೊಳಿಸಬಹುದಾಗಿದ್ದ ಸಿನಿಮಾ ಬಿಸಿಲ ಝಳದಲ್ಲಿ ಬರಡಾದ ಭೂಮಿಯಂತಾಗಿದೆ. ಗಡಿಯಾರದ ಮುಳ್ಳುಗಳು ನಡೆಯುವುದನ್ನು ಮರೆತಂತೆ ಒಂದೊಂದು ಕ್ಷಣವೂ ಗಂಟೆಗಳುರುಳಿದಂತೆ ಸಾಗುತ್ತದೆ. ಸಮಯ ಮೀರಿ ಹೋಗುತ್ತಿದೆ ಎಂದು ಪರೀಕ್ಷೆ ಕೊಠಡಿಯಲ್ಲಿ ಅವಸರದಲ್ಲಿ ತೋಚಿದ್ದನ್ನೆಲ್ಲಾ ಗೀಚುವ ವಿದ್ಯಾರ್ಥಿಯಂತೆ ದಿನೇಶ್‌ಬಾಬು ಚಿತ್ರಕಥೆ ರಚಿಸಿದ್ದಾರೆ. ಅದಕ್ಕೆ ಸಿನಿಮಾದ ರೂಪ ನೀಡುವಾಗಲೂ ಅವರು ಆಸಕ್ತಿ ಕಳೆದುಕೊಂಡಂತಿದೆ. ನಿರ್ಭಾವುಕ, ನಿರಾರ್ದ್ರ ಸನ್ನಿವೇಶಗಳು ಇದೊಂದು ಪ್ರೇಮಕಥೆಯೇ ಎಂಬ ಸಂದೇಹ ಮೂಡಿಸುತ್ತದೆ.ಇಬ್ಬರು ನಾಯಕಿಯರಿದ್ದರೂ ನಾಯಕನ ಮನಸ್ಸು ಪ್ರೀತಿಯತ್ತ ವಾಲುವುದಿಲ್ಲ. ಮದುವೆಯ ಬಂಧವಿಲ್ಲದೆ ಒಂದಷ್ಟು ಕಾಲ ಸ್ವತಂತ್ರವಾಗಿ ಹಾರಾಡಬೇಕೆಂಬ ಬಯಕೆ ಆತನದು. ಮದುವೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆತ ನಡೆಯುವ ಹಾದಿ ಬದಲಾಗುತ್ತದೆ. ಒಬ್ಬ ನಾಯಕಿಯ ನಿರ್ಗಮನದೊಂದಿಗೆ ಮತ್ತೊಬ್ಬಳ ಆಗಮನ. ಈ ಮೂರೂ ಪಾತ್ರಗಳನ್ನು ಇಂದಿನ ಯುವಪೀಳಿಗೆಯ ಮನೋಭಾವದೊಂದಿಗೆ ತಳುಕು ಹಾಕಿ ಸನ್ನಿವೇಶಗಳನ್ನು ಗಾಢವಾಗಿ ರೂಪಿಸಿದ್ದರೆ ಉತ್ತಮ ಸಿನಿಮಾ ಸೃಷ್ಟಿಯ ಸಾಧ್ಯತೆಯಿತ್ತು. ಆ ಸಾಮರ್ಥ್ಯವೂ ನಿರ್ದೇಶಕರಿಗಿತ್ತು. ನಿರೂಪಣೆಯ ವಿಧಾನದಲ್ಲೂ ಅವರು ಶ್ರಮವಹಿಸಿಲ್ಲ. ಅಭಿನಯ ಪ್ರಾಧಾನ್ಯ ಪಾತ್ರಕ್ಕೆ ಸೂಕ್ತವಾದ ಕಲಾವಿದರ ಆಯ್ಕೆಯಲ್ಲಿಯೂ ಎಡವಿದ್ದಾರೆ.ತರುಣ್ ದೇಹಭಾಷೆ, ಅಭಿನಯ ಮತ್ತು ಸಂಭಾಷಣೆ ಒಪ್ಪಿಸುವ ಬಗೆ ಆದಿಯಿಂದ ಅಂತ್ಯದವರೆಗೂ ಒಂದೇ ರೀತಿ. ಅವರಿಂದ ಉಂಟಾಗುವ ಖಾಲಿತನವನ್ನು ಶರಣ್ ತುಂಬಿಕೊಡುತ್ತಾರೆ. ಸಂಜನಾ ಪುಟ್ಟಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. ಭಾಮಾ ತಂಗಾಳಿಯಂತೆ. ಪಾತ್ರವನ್ನು ವಿಸ್ತರಿಸಿದ್ದರೆ, ಭಾವನೆಯ ಸ್ಪರ್ಶಕ್ಕೆ ತುಸು ಅವಕಾಶವಿದ್ದಿದ್ದರೆ ಭಾಮಾ ಅಭಿನಯ ಇನ್ನಷ್ಟು ಕಳೆಕಟ್ಟುತ್ತಿತ್ತು.ಚಿತ್ರದುದ್ದಕ್ಕೂ ಎದುರಾಗುವ ಲೋಪಗಳ ನಡುವೆ ಇಷ್ಟವಾಗುವುದು ಗಿರಿಧರ್ ದಿವಾನ್ ಸಂಗೀತ ಮತ್ತು ಸುರೇಶ್ ಬೈರಸಂದ್ರ ಛಾಯಾಗ್ರಹಣ. ಗಿರಿಧರ್ ಹೊಸೆದಿರುವ ಹಾಡುಗಳಲ್ಲಿ ಮಾಧುರ್ಯವಿದೆ. ರಾಮ್‌ನಾರಾಯಣ್ ಸಾಹಿತ್ಯವೂ ಅದಕ್ಕೆ ಪೂರಕವಾಗಿದೆ. ಸುರೇಶ್ ಬೈರಸಂದ್ರ ಕ್ಯಾಮೆರಾ ಪ್ರಯೋಗ ಭೂರಮೆಯ ಸೊಬಗನ್ನು ಸುಂದರವಾಗಿ ಹಿಡಿದಿಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry