ಭಾನುವಾರ, ಏಪ್ರಿಲ್ 11, 2021
27 °C

ಸ್ತಬ್ಧ ಚೆಲುವೆಯರ ಚಿತ್ರಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲಿಂದಲೋ ಬಂದ `ಬಣ್ಣದ ಬೆಡಗಿಯರು~ ದಣಿವಾರಿಸಿಕೊಳ್ಳುತ್ತಿದ್ದಾರೆ. ಯಾರದೋ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ. ಆಗಸದಲ್ಲಿ ಚಂದ್ರ, ಎಲೆ ಉದುರಿಸುತ್ತಿರುವ ಮರ. ಒಂದಾದ ಮೇಲೆ ಒಂದರಂತೆ ಹಕ್ಕಿಗಳ ಹಾಡು. ತಂಗಾಳಿಯಲ್ಲಿ ತೇಲಿದ ಸೆರಗು ಹಾಗೆಯೇ ಸ್ತಬ್ಧ.ಇವರನ್ನೇ ಅರಸಿ ಬಂದ ಕೆಲವರು ಧನ್ಯತೆಯಲ್ಲಿ ಮುಳುಗಿದ್ದಾರೆ. ಎಷ್ಟೋ ದಿನಗಳ ಬಳಿಕ ಸಂಧಿಸಿದ ಗೆಳೆಯರಂತೆ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಚೌಕಟ್ಟಿನಿಂದ ಹೊರಬರಬಾರದೇ ಎಂದು ಕೇಳಿಕೊಳ್ಳುತ್ತಿದ್ದಾರೆ...ಯುಬಿ ಸಿಟಿಯಲ್ಲಿ ಕಂಡು ಬಂದ ಕೆಲ ದೃಶ್ಯಗಳಿವು. ಸಬ್‌ಲೈಮ್ ಗೆಲೇರಿಯಾ, `ಆರ್ಟ್ ಚಟ್ನಿ~ ಸಹಯೋಗದೊಂದಿಗೆ ಯುಬಿ ಸಿಟಿ ನಡೆಸುತ್ತಿರುವ ಮೂರನೇ ಕಲಾ ಮೇಳವೇ `ಆರ್ಟ್ ಬೆಂಗಳೂರು~. 1 ಆರ್ಟ್, ಡೆಕ್ಕನ್ ಕಲಾ ಪ್ರತಿಷ್ಠಾನ, ಟೈಮ್ ಅಂಡ್ ಸ್ಪೇಸ್, ಥರ್ಡ್ ಐ, ಮಹೂವ, ಅಜಂತಾ ಸ್ಟುಡಿಯೊ, ವಿನ್ಸೆಂಟ್ ಆರ್ಟ್ ವರ್ಲ್ಡ್, ಜ್ಯೋತಿ ಅರನ್ಹಾ, ಸವಿ 3 ಸ್ಟುಡಿಯೊ, ವರ್ಣ ಸಂಗಮ, ಚಿತ್ರ ಸಂಗಂ, ಅಯ್ಯಾಹ್, ಪಿಆರ್‌ವಿ, ಇಂಪನಾ ಆರ್ಟ್ ಹೌಸ್ ಸೇರಿದಂತೆ ದೇಶದ ಹದಿನಾರು ಪ್ರಮುಖ ಕಲಾ ಗ್ಯಾಲರಿಗಳು ಮೇಳದಲ್ಲಿ ಪಾಲ್ಗೊಂಡಿವೆ.ಶಿಪ್ರಾ ಭಟ್ಟಾಚಾರ್ಯ, ಗಣೇಶ್ ದೊಡ್ಡಮನಿ, ಶೇಖರ್ ಬಳ್ಳಾರೊ, ಶೇಖರ್ ರಾಯ್, ಶುವಾ ಪ್ರಸನ್ನ ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದರ ನೂರಾರು ಕಲಾಕೃತಿಗಳು ಇವೆ. ಡೇವಿಡ್ ಮುಜುಗ್ನೊ, ಜೋಸೆಫ್ ಕಾರ್ಟೂನ್, ರುತ್ ನ್ಯಾಕುಂದಿ, ವಿಲ್ಸನ್ ವಾಂಗಿ, ದಿನೇಶ್ ರೇವನ್‌ಕರ್ ಸೇರಿದಂತೆ ಆಫ್ರಿಕಾದ ಕಲಾವಿದರು ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ.ಕಲಾವಿದರು, ಗ್ಯಾಲರಿಗಳು ಹಾಗೂ ಕಲಾ ಸಂಗ್ರಾಹಕರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಈ ಮೂಲಕ ನಡೆದಿದೆ. ದಕ್ಷಿಣ ಭಾರತದಲ್ಲಿಯೇ ಇದು ಅತ್ಯಂತ ಪ್ರಮುಖ ಕಲಾಹಬ್ಬ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಉತ್ಸವದ ಕೆಲವು ವಿಶೇಷಗಳು ಹೀಗಿವೆ: ಎಂ.ಎಫ್.ಹುಸೇನ್, ಜಮಿನಿ ರಾಯ್, ಬಿ. ಪ್ರಭಾ, ಎಫ್.ಎನ್. ಸೋಜಾ, ಗಣೇಶ ಪೈನೆ, ಕೆ.ಕೆ.ಹೆಬ್ಬಾರ್, ಕ್ರಿಶನ್ ಖನ್ನಾ, ರಾಮ್‌ಕುಮಾರ್, ಬಾಕ್ರೆ, ಸೋಮನಾಥ್ ಹೋರ್ ಮುಂತಾದ ಖ್ಯಾತನಾಮರ ಕಲಾಕೃತಿಗಳ ಹರಾಜು ನಡೆಯುತ್ತಿದೆ. ಇದರಿಂದ ದೊರೆತ ಶೇ 10ರಷ್ಟು ಹಣವನ್ನು ಬಡ ಮಕ್ಕಳಿಗಾಗಿ ದುಡಿಯುತ್ತಿರುವ `ಕ್ರಿಸ್ಟೆಲ್ ಹೌಸ್ ಇಂಡಿಯಾ~ ಸರ್ಕಾರೇತರ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ.ಪಲ್ಲವಿ ಫೋಲೆ ಹಾಗೂ ವಿಜಿತ್ ಪಿಳ್ಳೈ ಆಯೋಜಿಸಿರುವ ಆಭರಣ ಕಲಾ ಪ್ರದರ್ಶನವನ್ನೂ ಇಲ್ಲಿ ಕಾಣಬಹುದು. ಪ್ರಸಿದ್ಧ ಛಾಯಾಗ್ರಾಹಕ ಪಲ್ಲೊನ್ ಧರುವಾಲಾ ಅವರು ಕಲಾ ಉತ್ಸವದಲ್ಲಿ ಛಾಯಾಗ್ರಹಣ ಶಿಬಿರ ನಡೆಸುತ್ತಿದ್ದಾರೆ. ಮಕ್ಕಳಿಗಾಗಿಯೇ ಪ್ರತ್ಯೇಕ ಕಲಾ ಪ್ರದರ್ಶನವಿದೆ. ನೈನಿತಾಲ್ ಸ್ಕೂಲ್ ಆಫ್ ಮ್ಯೂಸಿಕ್ ಸಂಗೀತ ಕಲೆಯ ಬಗ್ಗೆ, ಶೈಮಕ್ ದವರ್ ಪ್ರದರ್ಶನ ಕಲಾ ಸಂಸ್ಥೆ ನೃತ್ಯ ಕಲೆಯ ಬಗ್ಗೆ, ಪ್ರಸಿದ್ಧ ಕಲಾವಿದ ಸುರೇಶ್ ಜಯರಾಂ `ಆರ್ಟ್ ಸ್ಪೀಕ್~ ಬಗ್ಗೆ, ರೀನು ಅವರು ಪಾಪ್ ಅಪ್ ಕಲೆಯ ಬಗ್ಗೆ ಕಾರ್ಯಾಗಾರ ನಡೆಸಿಕೊಡುತ್ತಿದ್ದಾರೆ.ಈ ಕಲಾ ಉತ್ಸವಕ್ಕೆ ಪುಟ್ಟ ಇತಿಹಾಸವೂ ಉಂಟು. ಮೊದಲ `ಆರ್ಟ್ ಬೆಂಗಳೂರು~ ನಡೆದಿದ್ದು 2010ರಲ್ಲಿ. ಚಿತ್ರಕಲೆ, ಸಾಂದರ್ಭಿಕ ಚಿತ್ರ, ಛಾಯಾಚಿತ್ರ, ಶಿಲ್ಪಕಲೆ, ಇನ್‌ಸ್ಟಲೇಷನ್, ಉತ್ಪನ್ನ ವಿನ್ಯಾಸ ಇತ್ಯಾದಿ ಕಲಾ ಪ್ರಕಾರಗಳನ್ನು ಪ್ರದರ್ಶಿಸುವುದು ಇದರ ಗುರಿ. ಮೂರನೇ ಪ್ರದರ್ಶನವನ್ನು ದೊಡ್ಡ ಮಟ್ಟದಲ್ಲಿಯೇ ನಡೆಸಬೇಕು ಎಂಬ ಉದ್ದೇಶದಿಂದ ಈ ಬಾರಿ ದೇಶ ವಿದೇಶಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ.ಸಬ್‌ಲೈಮ್ ಗೆಲೇರಿಯಾದ ಸಂಸ್ಥಾಪಕಿ ಉಜ್ಮಾ ಇರ್ಫಾನ್ `ದೇಶ- ವಿದೇಶಗಳ ಕಲಾಸಕ್ತರಿಗೆ ಇದೊಂದು ಪ್ರಮುಖ ಹಬ್ಬವಾಗಲಿದೆ. ಕಾಲಮಾನಕ್ಕೆ ತಕ್ಕಂತೆ ಹಬ್ಬದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಲವು ಹೊಸ ಅಂಶಗಳು ಸೇರ್ಪಡೆಯಾಗಿವೆ. ದೊಡ್ಡ ದೊಡ್ಡ ಕಲಾವಿದರು ಮೇಳದಲ್ಲಿ ಪಾಲ್ಗೊಳ್ಳುವುದು ಸಂತಸದ ವಿಚಾರ~ ಎನ್ನುತ್ತಾರೆ.ಅಂದಹಾಗೆ ಕಲಾಮೇಳದ ಮಾಹಿತಿ ನೀಡಲು ಪ್ರತ್ಯೇಕ ಜಾಲತಾಣದ ವ್ಯವಸ್ಥೆ ಮಾಡಲಾಗಿದೆ. ಕಲಾಕೃತಿಯಂತೆಯೇ ಜಾಲತಾಣವನ್ನೂ ವಿನ್ಯಾಸಗೊಳಿಸಿರುವುದು ವಿಶೇಷ. ಇಲ್ಲಿ ಕಲಾಮೇಳದ ಕಲ್ಪನೆ, ಉತ್ಸವಕ್ಕೆ ಬೆಂಬಲ ನೀಡಿರುವವರ ವಿವರ, ಹರಾಜಿಗೆ ಲಭ್ಯ ಇರುವ ಕಲಾಕೃತಿಗಳು, ಪ್ರದರ್ಶಕರ ವಿವರ, ಕಾರ್ಯಾಗಾರಗಳು ನಡೆಯುವ ದಿನಾಂಕ ಮತ್ತು ಸಮಯ ಮುಂತಾದ ಮಾಹಿತಿ ಇವೆ.ಖ್ಯಾತ ಹಾಡುಗಾರ ತೋಚಿ ರೈನಾ ಅವರ `8 ಪೀಸ್ ಬ್ಯಾಂಡ್~ ಗಜಲ್ ಹಾಗೂ ಸೂಫಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಶುಕ್ರವಾರ ಆರಂಭವಾಯಿತು.ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ತಿಂಗಳ 24ರವರೆಗೆ ಉತ್ಸವ ನಡೆಯಲಿದೆ. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ. ಮಾಹಿತಿಗೆ: www.artbengaluru.in ಸಂಪರ್ಕಿಸಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.