ಶನಿವಾರ, ಜೂನ್ 19, 2021
28 °C

ಸ್ತ್ರೀ ಆರೋಗ್ಯಕ್ಕೆ ಯೋಗ

ಗೋಪಾಲಕೃಷ್ಣ ದೇಲಂಪಾಡಿ Updated:

ಅಕ್ಷರ ಗಾತ್ರ : | |

ಆಧುನಿಕ ಜೀವನ ವಿಧಾನದಲ್ಲಿ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ವ್ಯಾಯಾಮ ಹಾಗೂ ಆರೋಗ್ಯದ ಕೊರತೆ ಕಂಡುಬರುತ್ತದೆ. ಹಿಂದಿನ ಕಾಲದ ಮಹಿಳೆಯರಿಗೆ ಸಾಕಷ್ಟು ವ್ಯಾಯಾಮವಾಗಬಲ್ಲ ಬಹಳಷ್ಟು ಕೆಲಸಗಳಿದ್ದವು. ಉದಾ : ರುಬ್ಬುವುದು, ಒನಕೆಯಲ್ಲಿ ಭತ್ತ ಕುಟ್ಟುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು ಇತ್ಯಾದಿ.ಅಲ್ಲದೆ ಬೆಳಿಗ್ಗೆ ಮತ್ತು ಸಂಜೆ ಭಜನೆ, ಧ್ಯಾನ, ದೇವರ ಪ್ರಾರ್ಥನೆಗಳನ್ನು ಮಾಡಿಕೊಂಡು ಶಾಂತಿ ನೆಮ್ಮದಿಯಲ್ಲಿ ಇರುತ್ತಿದ್ದರು. ಇಂದಿನ ಮುಂದುವರಿದ ಸಮಾಜದಲ್ಲಿ ಸೌಕರ್ಯಗಳು ಹೆಚ್ಚಿವೆ. ಹಾಗೆಯೇ ಕೆಲಸಗಳ ಒತ್ತಡಗಳೂ ಹೆಚ್ಚಿವೆ.ಕಚೇರಿಗಳಲ್ಲಿ ಕೆಲಸಗಳ ಒತ್ತಡಗಳಿಂದ ಸಮಯಕ್ಕೆ ಸರಿಯಾಗಿ ಉತ್ತಮ ಆಹಾರ ಸೇವಿಸಲಾಗದ ಸ್ಥಿತಿ (ಅನಿವಾರ್ಯವಾದ ಆಹಾರ ಪದ್ದತಿ), ಆಧುನಿಕ ಜೀವನ ಶೈಲಿಯಿಂದ ಬಂದಂತಹ ದೇಹದ ಅಧಿಕ ತೂಕ. ಇವು ಸಾಮಾನ್ಯವಾಗಿ ಆಧುನಿಕ ಮಹಿಳೆಯನ್ನು ಕಾಡುವ ಆರೋಗ್ಯ ಸಮಸ್ಯೆಗಳು. ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಿಕೊಳ್ಳಲು ಇರುವ ಸುಲಭ ಉಪಾಯ ಯೋಗಾಸನಗಳು.ದಿನಕ್ಕೆ ಕೇವಲ ಅರ್ಧ ತಾಸು 15ರಿಂದ 20 ಆಸನಗಳನ್ನು ಶಿಸ್ತುಬದ್ಧವಾಗಿ ಕ್ರಮ ಪ್ರಕಾರವಾಗಿ ಉಸಿರಿನ ಗತಿಯೊಂದಿಗೆ ಮಾಡಿದರೆ ಧಾರಾಳ ಸಾಕು. ಯೋಗಾಭ್ಯಾಸದಿಂದ ಪ್ರತಿಯೊಂದು ಅಂಗವೂ ಹಗುರಾಗಿ ಆರೋಗ್ಯಲಾಭ ಸಿಗುತ್ತದೆ. ಯೋಗಾಭ್ಯಾಸ ಮಾಡುವುದರಿಂದ ಸ್ತ್ರೀಯರ ದೈಹಿಕ ಸಾಮರ್ಥ್ಯ ಹೆಚ್ಚಳವಾಗುವುದಲ್ಲದೆ ಸರ್ವತೋಮುಖ ಬೆಳವಣಿಗೆಯಾಗುತ್ತದೆ.ಯೋಗ -ವಿಧಿವಿಧಾನ

ಈಗಿನ ಆಧುನಿಕ ಮಹಿಳೆಯರ ಆರೋಗ್ಯಪಾಲನೆಗಾಗಿ ಇರುವ ಪ್ರಮುಖವಾದ ಆಸನಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಆದರೆ ಯೋಗಾಸನಗಳನ್ನು ಯಾವತ್ತೂ ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ವಿನ್ಯಾಸಗಳನ್ನು ಬಿಟ್ಟು ಅಭ್ಯಾಸ ಮಾಡಬಾರದು. 

* ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ

*ಕೆಲವು ಕ್ರಿಯೆಗಳಾದ ಕಪಾಲಭಾತಿ, ತ್ರಾಟಕ ಇತ್ಯಾದಿಗಳು

* ಕುತ್ತಿಗೆ ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)

* ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು

* ಸಾಧ್ಯವಾಗುವವರಿಗೆ ಸೂರ್ಯನಮಸ್ಕಾರ

* ತುಸು ವಿಶ್ರಾಂತಿ.ಅಗತ್ಯದ ಯೋಗಾಸನಗಳ ಪಟ್ಟಿ

ತಾಡಾಸನ, ಅರ್ಧ ಚಕ್ರಾಸನ, ಪಾದ ಹಸ್ತಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ವೀರ ಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಜಠರ ಪರಿವರ್ತಾನಾಸಾನ, ಪವನ ಮುಕ್ತಾಸನ, ವಿಪರೀತ ಕರಣಿ, ಹಲಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ. ಹಾಗೂ ಮುದ್ರೆಗಳಲ್ಲಿ ಪ್ರಮುಖವಾಗಿ ಚಿನ್ಮುದ್ರೆ, ವಾಯು ಮುದ್ರೆ, ಅಪಾನ ಮುದ್ರೆ, ಸೂರ್ಯ ಮುದ್ರೆ, ವರುಣ ಮುದ್ರೆ, ಜಲೋದರ ನಾಶಕ ಮುದ್ರೆ, ಮತ್ತು ಪ್ರಾಣ ಮುದ್ರೆ.ಯೋಗಾಸನಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.  ಅದರಲ್ಲೂ ಮುಖ್ಯವಾಗಿ ಸೊಂಟನೋವು, ಬೆನ್ನುನೋವು, ಕಾಲು ಸೆಳೆತ, ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ಈ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಮುಂದೆ ಅಸೌಖ್ಯವಾಗುವುದನ್ನು ತಡೆದು ಆರೋಗ್ಯವಂತಳಾಗಿ ಸುಖವಾಗಿ ಜೀವಿಸಬಹುದು. ಆದರೆ ಯೋಗವನ್ನು ಗುರು ಮುಖೇನವೇ ಕಲಿತು ಶಿಸ್ತುಬದ್ಧವಾಗಿ ಕ್ರಮವತ್ತಾಗಿ ನಿತ್ಯ ನಿರಂತರ ಅಭ್ಯಾಸ ಮಾಡಬೇಕು .

(ಲೇಖಕರ ಮೊಬೈಲ್: 9448394987)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.