ಸ್ತ್ರೀ ಭ್ರೂಣ ಹತ್ಯೆ ತಡೆ ಅಗತ್ಯ

7

ಸ್ತ್ರೀ ಭ್ರೂಣ ಹತ್ಯೆ ತಡೆ ಅಗತ್ಯ

Published:
Updated:
ಸ್ತ್ರೀ ಭ್ರೂಣ ಹತ್ಯೆ ತಡೆ ಅಗತ್ಯ

ಹಾವೇರಿ: `ಸ್ತ್ರೀ ಭ್ರೂಣ ಹತ್ಯೆ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ತರುವುದರ ಜತೆಗೆ, ಸಮುದಾಯದಲ್ಲಿ ಹೆಣ್ಣು ಮಗುವಿನ ಮಹತ್ವದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸ್ತ್ರೀ ಹಾಗೂ ಪುರುಷ ಅನುಪಾತದಲ್ಲಿ ಆಗಿರುವ ವ್ಯತ್ಯಾಸವನ್ನು ಸರಿದೂಗಿಸಲು ಸಾಧ್ಯ~ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಮಾಳೋದೆ ಹೇಳಿದರು.ಜಿಲ್ಲಾಡಳಿತ ಭವನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ತ್ರೀ ಭ್ರೂಣ ಹತ್ಯೆ ಕಾನೂನು ಜಾರಿ ಕುರಿತ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸ್ತ್ರೀ ಪುರುಷರ ಒಟ್ಟಾರೆ ಅನುಪಾತ ಪ್ರತಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದು, ಅತಿ ಹೆಚ್ಚು ವ್ಯತ್ಯಾಗಳುಳ್ಳ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಪ್ರತಿ ಸಾವಿರ ಪುರುಷರಿಗೆ 908 ಸ್ತ್ರೀಯರನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, 945 ಸ್ತ್ರೀಯರನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದ್ವಿತೀಯ ಹಾಗೂ 951 ಸ್ತ್ರೀಯರನ್ನು ಹೊಂದಿರುವ ಹಾವೇರಿ ಜಿಲ್ಲೆ ತೃತೀಯ ಸ್ಥಾನದಲ್ಲಿವೆ ಎಂದರು.ಸ್ತ್ರೀ ಭ್ರೂಣ ಹತ್ಯೆ ಕಾನೂನಿನ ನಿಯಮಾವಳಿಗಳನ್ನು ಆಸ್ಪತ್ರೆಯಲ್ಲಿ ಕಟ್ಟುನಿಟ್ಟಿನಿಂದ ಅನುಸರಿಸುತ್ತಿರುವ ಬಗ್ಗೆ ಜಿಲ್ಲಾ ಸಲಹಾ ಸಮಿತಿಯ ಸದಸ್ಯರು ಜಿಲ್ಲೆಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ರಾಣೆಬೆನ್ನೂರಿನ ಕೇಲಗಾರ ಮೆಡಿಕಲ್ ಸೆಂಟರ್ ಆಸ್ಪತ್ರೆಯು ನಿಯಮಾವಳಿ ಪಾಲಿಸದ್ದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.ಜಿಲ್ಲೆಯ ಯಾವುದೇ ನರ್ಸಿಂಗ್ ಹೋಂನಲ್ಲಿ ಸ್ತ್ರೀ ಭ್ರೂಣ ಹತ್ಯೆ ನಡೆಯುವ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ (ಮೊಬೈಲ್: 94498 43054 ಅಥವಾ ದೂ: 08375-249049ಗೆ ) ದೂರು ಸಲ್ಲಿಸಬಹುದು. ದೂರು ಅಥವಾ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.ಸಮಾಜದಲ್ಲಿ ಪುರುಷ ಹಾಗೂ ಸ್ತ್ರೀ ಮಧ್ಯದ ಅನುಪಾತದ ವೈಪರಿತ್ಯದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶೀಘ್ರವೇ ಪ್ರತಿ ಜಿಲ್ಲೆಯಲ್ಲಿ ಸರ್ಕಾರೇತರ ಸಂಸ್ಥೆಯೊಂದನ್ನು ನೇಮಕ ಮಾಡಲಿದೆ ಎಂದು ಹೇಳಿದರು.ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಡಾ. ಬಸವರಾಜ ಸಜ್ಜನರ, ಬಿ.ಎಸ್. ಕಲಾದಗಿ, ಪರಿಮಳಾ ಜೈನ್, ಗಂಗಧರ ಹೂಗಾರ, ಡಾ. ರಾಜಕುಮಾರ ಮರೋಳ, ಗೀತಾ ಪ್ರಭಾಕರ ಮಂಗಳೂರು, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಭಾಗವಹಿಸಿದ್ದರು.ಆರೋಗ್ಯ ಸಹಾಯಕರಾದ ಶಂಕರ ಸುತಾರ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಫ್. ಕುರವಳ್ಳಿ ವಂದಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry