ಶುಕ್ರವಾರ, ಜೂನ್ 25, 2021
21 °C

ಸ್ತ್ರೀ ಶಕ್ತಿಯೂ ನಿಶ್ಶಕ್ತಿಯೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಪರ ಸಂಘಟನೆಯ ಕಾರ್ಯವೊಂದು ಪುರುಷ ಅಹಂಕಾರವನ್ನು ತಿದ್ದುವ ಕಥಾ ಹಂದರವುಳ್ಳ ಚಿತ್ರ ಸ್ತ್ರೀಶಕ್ತಿ. ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಮಾತು ಹಾಡುಗಳ ಸುತ್ತ ಹರಿದಿತ್ತು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಒಂದು ಕವಿತೆಗೆ ರಾಗ ಸಂಯೋಜನೆ ಮಾಡಲಾಗಿದೆ. ಎರಡು ಹಾಡುಗಳಿಗೆ ಸಾಹಿತ್ಯ ಒದಗಿಸಿರುವುದು ಸ್ವತಃ ಮನೋಹರ್. ಚಿತ್ರದ ಹೈಲೈಟ್ ಎಂದೇ ಬಿಂಬಿಸಲಾಗಿರುವ `ಹೆಣ್ಣೇ ನಿನಗೆ...~ ಹಾಡನ್ನು `ಸುಧಾ~ ವಾರಪತ್ರಿಕೆಯ ಸಹ ಸಂಪಾದಕರಾದ ಬಿ.ಎಂ.ಹನೀಫ್ ಅವರು ಬರೆದಿದ್ದಾರಂತೆ.`ಮಾಲಾಶ್ರೀ ಅಭಿನಯಿಸಿದ `ಶಕ್ತಿ~ ಹೆಣ್ಣಿನ ತೋಳ್ಬಲವನ್ನು ಚಿತ್ರಿಸುತ್ತದೆ. ಆದರೆ ಸ್ತ್ರೀಶಕ್ತಿ ಭಾವನೆಗಳ ಶಕ್ತಿಯನ್ನು ತಿಳಿಸುತ್ತದೆ. ಉಳಿದ ಚಿತ್ರಗಳ ನಟಿಯರದು ನಿಶ್ಶಕ್ತಿ~ ಎನ್ನುವ ಹಾಸ್ಯಚಟಾಕಿ ಮನೋಹರ್ ಅವರದು. ಅವರು ಹಾಗೆ ಹೇಳಲು ಕಾರಣವೂ ಇತ್ತು.`ಪುಟ್ಟಣ್ಣ ಕಣಗಾಲ್, ದೊರೆ ಭಗವಾನ್, ಜಯರಾಂ ಮುಂತಾದ ನಿರ್ದೇಶಕರು ಸ್ತ್ರೀ ಪ್ರಧಾನ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಕಾಲ ಬದಲಾಯಿತು. ಸ್ತ್ರೀ ಪಾತ್ರಗಳು ಕೇವಲ ಬಂದು ಹೋಗುವುದಕ್ಕೆ, ಗ್ಲಾಮರ್‌ಗೆ, ಅಳುಮುಂಜಿ ನಟನೆಗೆ ಮೀಸಲಾದವು~ ಎಂಬ ವಿಷಾದ ಅವರ ಮಾತುಗಳಲ್ಲಿತ್ತು. `ಈಗ ಮತ್ತೆ ಮಹಿಳಾ ಪ್ರಧಾನ ಚಿತ್ರಕ್ಕೆ ಕೈ ಹಾಕಿರುವುದು ನಿರ್ದೇಶಕ ಎಸ್.ವಿ.ಸುರೇಶ್ ಅವರ ಹೆಚ್ಚುಗಾರಿಕೆ~ ಎಂದು ಬೆನ್ನು ತಟ್ಟಿದರು.ಕಾರ್ಯಕ್ರಮದ ಪ್ರಮುಖ ಆಕರ್ಷಣೆ ತುಳಸಿ ಶಿವಮಣಿ. ಚೆನ್ನೈನಿಂದ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅನುಭವಗಳನ್ನು ಅವರು ಹಂಚಿಕೊಂಡರು. ಚಿತ್ರದಲ್ಲಿ ಅವರಿಗೆ ಒಂದು ಒಳ್ಳೆ ಇಮೇಜ್ ಸೃಷ್ಟಿಸಲಾಗಿದೆಯಂತೆ. ತಮ್ಮ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಜೀವ್ ಆತ್ಮವಿಶ್ವಾಸದಿಂದ ನಟಿಸಿದ್ದಾರೆ ಎಂದು ಮೆಚ್ಚಿಕೊಂಡರು.ಸುರೇಶ್ ಸಹೋದರಿ ಚಂದ್ರಕಲಾ ಚಿತ್ರಕತೆಗೆ ಸ್ಫೂರ್ತಿಯಂತೆ. ಶಿವಮೊಗ್ಗದ ಮಹಿಳಾ ಸಹಕಾರ ಸಂಘವೊಂದರ ರೂವಾರಿ ಅವರು. `ಶಿವಮೊಗ್ಗೆ ಸಂಘಟನೆಗೆ ಹೆಸರಾದ ಜಿಲ್ಲೆ. ಅಲ್ಲಿಯಷ್ಟು ಕ್ರಿಯಾಶೀಲವಾದ ಮಹಿಳಾ ಸಂಘಟನೆಗಳನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ~ ಎಂದರು.  ನಟಿ ಪ್ರಮೀಳಾ ಜೋಷಾಯಿ, ಸುದೀಪ್ ಅವರ ಪತ್ನಿ ಪ್ರಿಯಾ, ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೋನು... ಹೀಗೆ ಸಮಾರಂಭ ಮಹಿಳೆಯರಿಂದಲೇ ತುಂಬಿತ್ತು. ನಟ ದರ್ಶನ್, ನಿರ್ದೇಶಕ ಸುರೇಶ್, ಆನಂದ್ ಆಡಿಯೋದ ಶಾಂ ಕಾರ್ಯಕ್ರಮಕ್ಕೆ ಕಳೆ ತಂದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.