ಬುಧವಾರ, ನವೆಂಬರ್ 13, 2019
23 °C

ಸ್ತ್ರೀ `ಶಕ್ತಿ' ಸಂಘಗಳಿಗೆ ಬೇಡಿಕೆ...!

Published:
Updated:

ಶಹಾಪುರ:  ಪ್ರಸಕ್ತ ಚುನಾವಣೆಯಲ್ಲಿ ಚುನಾವಣೆಯ ನೀತಿ ಸಂಹಿತೆಯ ಬಿಸಿ ರಾಜಕೀಯ ಪಕ್ಷಗಳಿಗೆ ಹೆಚ್ಚು ತಟ್ಟುತ್ತಿದ್ದರಿಂದ ಅನಿವಾರ್ಯವಾಗಿ ಸರ್ಕಾರೇತರ ಮಹಿಳಾ ಸಂಘಟನೆಗಳನ್ನು ರಾಜಕೀಯ ಮುಖಂಡರು ದುರ್ಬಳಕೆ ಮಾಡಿಕೊಳ್ಳುವ ಸಾಹಕ್ಕೆ ಕೈ ಹಾಕಿದ್ದಾರೆ.ವಾಮ ಮಾರ್ಗದ ಮೂಲಕ ಮಹಿಳಾ ಮತದಾರರಿಗೆ ಸಂಘಟನೆಯ ನೆಪದಲ್ಲಿ ಗೌಪ್ಯವಾಗಿ ಕಪ್ಪು ಕಾಣಿಕೆಯು ಹರಿದಾಡುತ್ತಿರುವುದು ಬೆಳಕಿನಷ್ಟೆ ಸತ್ಯವಾಗಿದೆ. ಮತಯಾಚನೆ ಸಂದರ್ಭದಲ್ಲಿ ಕೆಲ ಮಹಿಳಾ ಸಂಘಟನೆಗಳು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದು ಮಹಿಳಾ ಪೊಲೀಸರು ಹದ್ದಿನ ಕಣ್ಣು ಇಡುವುದು ಅಗತ್ಯವಾಗಿದೆ. ವಿಚಿತ್ರವೆಂದರೆ ಪೊಲೀಸ್ ಇಲಾಖೆಯು ಪುರುಷ ಪೊಲೀಸ್ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿರುವಾಗ ಹೆಚ್ಚಿನ ಮಹಿಳಾ ಪೊಲೀಸರನ್ನು ನಿಯೋಜಿಸುವುದು ತಲೆ ನೋವಾಗಿ ಪರಿಣಮಿಸಿದೆ.ಕ್ಷೇತ್ರದಲ್ಲಿ 91,246 ಮಹಿಳಾ ಮತದಾರರಿದ್ದಾರೆ. ಹೆಚ್ಚು ಸಂಘಟಿತ ಹಾಗೂ ಪ್ರಜ್ಞೆಯನ್ನು ಬೆಳಸಿಕೊಂಡಿರುವ ಮಹಿಳಾ ಸಂಘಟನೆಗಳ ಓಲೈಕೆಗೆ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಅದರಲ್ಲಿ ಮಹಿಳಾ ಕಾರ್ಯಕರ್ತರ ಪಡೆಯನ್ನು ರಚಿಸಿ ಮತಯಾಚನೆ ಸಂದರ್ಭದಲ್ಲಿ ಕಪ್ಪು ಕಾಣಿಕೆಯ ವಾಗ್ದಾನ,  ಉಡುಗೊರೆ ಸಲ್ಲಿಸುವಿಕೆ ನಡೆಯುತ್ತಲಿದೆ. ತಾಲ್ಲೂಕಿನಲ್ಲಿ  ಸ್ತ್ರಿಶಕ್ತಿ, ಪಟ್ಟಣದ ಎಸ್‌ಜೆಆರ್‌ವೈ, ಸರ್ಕಾರರೇತರ ಮಹಿಳಾ ಸಂಘಗಳು ಸೇರಿದಂತೆ ಅಂದಾಜು 1,200  ಗುಂಪುಗಳಿವೆ ಎನ್ನುತ್ತಾರೆ ಸ್ತ್ರಿಶಕ್ತಿ ಗುಂಪಿನ ಅಧ್ಯಕ್ಷರೊಬ್ಬರು.

ಅದರಲ್ಲಿ ಹೆಚ್ಚು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಂಗನವಾಡಿ ಕಾರ್ಯಕರ್ತರನ್ನು. ಪ್ರಮುಖ ರಾಜಕೀಯ ಪಕ್ಷಗಳು ಕಾರ್ಯಕರ್ತರ ಮೇಲೆ ತಮಗೆ ಬೆಂಬಲಿಸುವಂತೆ ಒತ್ತಡ ಹಾಕುವುದು ಹಾಗೂ ಅಗತ್ಯವಾದ ಕಾಣಿಕೆಯನ್ನು ತಲುಪಿಸುವಂತೆ ಅಲಿಖಿತವಾಗಿ ಇಲಾಖೆಯ ಅಧಿಕಾರಿಯಿಂದ ಫರ್ಮಾನು ನೀಡುತ್ತಿದ್ದಾರೆ. ಅನಿವಾರ್ಯವಾಗಿ ನಾವು ನಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ತೆರೆಮರೆಯಲ್ಲಿ ರಾಜಕೀಯ ಪ್ರಚಾರ ನಡೆಸಿದ್ದೇವೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು.ತಾಲ್ಲೂಕಿನಲ್ಲಿ ಅಕ್ಷರ ದಾಸೋಹದ 768 ಹಾಗೂ ಅಂಗನಾಡಿ ಕಾರ್ಯಕರ್ತೆಯರು 365. ಸಹಾಯಕರು 358, ಆಶಾ ಕಾರ್ಯಕರ್ತರು 256 ಇದ್ದಾರೆ. ಇದರಲ್ಲಿ ಬಹುಪಾಲು ಸದಸ್ಯರು ಕಲುಷಿತ ರಾಜಕೀಯ ವಿಷಮ ವಾತಾವರಣದಲ್ಲಿ ಸಿಲುಕಿದ್ದಾರೆ. ತಟಸ್ಥವಾಗಿ ಉಳಿದುಕೊಳ್ಳು ಕೂಡಾ ಸಾಧ್ಯವಿಲ್ಲದ ದುಸ್ಥಿತಿಯನ್ನು ಸ್ಥಳೀಯ ರಾಜಕೀಯ ಮುಖಂಡರು ತಂದೊಡ್ಡಿದ್ದಾರೆ. ನಿಜವಾಗಿ ನಮಗೆ ಇದರಲ್ಲಿ ಆಸಕ್ತಿ ಇಲ್ಲ ಆದರೂ ಬದುಕಿಗಾಗಿ ರಾಜಕೀಯ ಮುಖಂಡರ ಮಾತು ಕೇಳುವುದು ಅನಿವಾರ್ಯತೆಯನ್ನು ತಂದಿದ್ದಾರೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯೊಬ್ಬರು.ಹೆಚ್ಚಿನ ಪ್ರಾಮುಖ್ಯತೆಯನ್ನು ಹಾಗೂ ರಾಜಕಾರಣಿಗಳ ಜುಟ್ಟು ಹಿಡಿದು ಅಲುಗಾಡಿಸುತ್ತಿರುವುದು ಸ್ತ್ರಿಶಕ್ತಿ ಗುಂಪುಗಳು. ಕೆಲ ಪ್ರಭಾವಿ ರಾಜಕೀಯ ಮುಖಂಡರ ಮಹಿಳೆಯರು ಚುನಾವಣೆ ಪ್ರಚಾರದ ಭರಾಟೆಯಲ್ಲಿ ಮುಳುಗಿದ್ದಾರೆ. ನೇರವಾಗಿ ಮಹಿಳಾ ಮತದಾರರನ್ನು ಹಾಗೂ ಸಂಘಟಿತ ಮಹಿಳಾ ಸಂಘಗಳ ಪ್ರಮುಖರನ್ನು ಭೇಟಿಯಾಗಿ ಪ್ರತಿ ಸಂಘಗಳಿಗೆ ಈಗಾಗಲೇ ಕಪ್ಪು ಕಾಣಿಕೆಯನ್ನು ಅರ್ಪಿಸುತ್ತಿದ್ದಾರೆ. ಇಂತಹ ಭ್ರಷ್ಟಾಚಾರವನ್ನು ಯಾವ ರೀತಿ ಮಟ್ಟಹಾಕಬೇಕು ಎಂಬುವುದರ ಬಗ್ಗೆ ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಕಂಡು ಹಿಡಿಯಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಅಕ್ರಮವನ್ನು ಬೆಳಕಿಗೆ ತರುವಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ.ಅದರಲ್ಲಿ ಹೆಚ್ಚಾಗಿ ಸರ್ಕಾರದಿಂದ ಸಹಾಯಧನ ಪಡೆದ ಸ್ವಸಹಾಯ ಸಂಘಗಳ ಮೇಲೆ ಕೆಲ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ಮತ್ತೆ ನಿಮ್ಮ ಸ್ವಸಹಾಯ ಸಂಘಕ್ಕೆ ಇಂತಿಷ್ಟು ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಲಾಗುವುದೆಂಬ ಹುಸಿ ಭರವಸೆಯನ್ನು ನೀಡುತ್ತಿದ್ದಾರೆ ಎಂಬುವುದು ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ.ಚುನಾವಣೆ ಆಯೋಗ ಗ್ರಾಮೀಣ ಪ್ರದೇಶದ ಸ್ವಸಹಾಯಕ ಸಂಘ, ಸ್ತ್ರಿಶಕ್ತಿ ಗುಂಪು, ಕೆಲ ಅಂಗನವಾಡಿ ಕಾರ್ಯಕರ್ತರ ಬಗ್ಗೆ ನಿಗಾವಹಿಸಿ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿ ಸಿದರೆ ಯಾವುದೇ ಮುಲಾಜಿ ಇಲ್ಲದೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಜ್ಞಾವಂತ ಜಾಗೃತ ಮತದಾರರು ಜಿಲ್ಲಾ ಚುನಾವಣೆ ಅಧಿಕಾರಿಗೆ ಮನವಿ ಮಾಡಿದ್ದಾರೆ.

 

ಪ್ರತಿಕ್ರಿಯಿಸಿ (+)