ಬುಧವಾರ, ಏಪ್ರಿಲ್ 21, 2021
23 °C

ಸ್ತ್ರೀ ಶೋಷಣೆಯ ಒಳನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘12ನೇ ಶತಮಾನದಲ್ಲಿ ಜೀವಿಸಿದ್ದ ಶರಣೆ ಅಕ್ಕಮಹಾದೇವಿ ತಾನು ಬೆತ್ತಲಾಗಲಿಲ್ಲ. ಬದಲಾಗಿ ಅಂದು ಪ್ರಚಲಿತದಲ್ಲಿದ್ದ ಪುರುಷರ ವಿಕೃತಿಗಳನ್ನು ಬೆತ್ತಲೆ ಮಾಡಿದರು’ ಎಂದು ಹಿರಿಯ ಚಿತ್ರನಟಿ ಜಯಮಾಲಾ ಅಭಿಪ್ರಾಯಪಟ್ಟರು.ನಗರದಲ್ಲಿ ಶನಿವಾರ ಸಖಿ ಪ್ರಕಾಶನವು ಪ್ರಕಟಿಸಿದ, ಲೇಖಕ ಡಾ. ಆರ್.ಜಯಶಂಕರ್ ಅವರ ‘ಸುವರ್ಣಭೂಮಿಯ ಚಿತ್ರಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಥೈಲ್ಯಾಂಡ್‌ನಲ್ಲಿ ಮಹಿಳೆಯರು ಒತ್ತಾಯದ ಲೈಂಗಿಕ ಶೋಷಣೆಗೆ ಒಳಗಾಗುವ ಮೂಲಕ ಪುರುಷ ಸಮಾಜದ ವಿಕೃತಿಯನ್ನು, ಪ್ರವಾಸೋದ್ಯಮದ ಉತ್ತೇಜನದ ನೆಪದಲ್ಲಿ ಲೈಂಗಿಕತೆಯನ್ನು ಪ್ರಚೋದಿಸುತ್ತಿರುವ ಸರ್ಕಾರದ ಮುಖವಾಡವನ್ನು ಬಯಲಿಗೊಳಿಸುತ್ತಿದ್ದಾರೆ’ ಎಂದರು.‘ಅಲ್ಲಿನ ಸ್ತ್ರೀ ಶೋಷಣೆಯ ಕುರಿತು ಈ ಕೃತಿಯು ಸೂಕ್ತ ಒಳನೋಟಗಳನ್ನು ನೀಡಲಿದೆ’ ಎಂದು ಅವರು ಹೇಳಿದರು.ಕೃತಿ ಬಿಡುಗಡೆ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಭ್ರಷ್ಟಾಚಾರವು ಇಂದು ಸರ್ವವ್ಯಾಪಿಯಾಗಿದೆ. ಥೈಲ್ಯಾಂಡ್‌ನಲ್ಲಿನ ಭ್ರಷ್ಟಾಚಾರದ ಕುರಿತೂ ಕೂಡ ಕೃತಿ ಉಲ್ಲೇಖಿಸಿದೆ’ ಎಂದು ಅಭಿಪ್ರಾಯಪಟ್ಟರು.ಕೃತಿ ಪರಿಚಯ ಮಾಡಿದ ಕವಿ ಡಾ.ಕೆ.ವೈ.ನಾರಾಯಣಸ್ವಾಮಿ, ‘ಕೃತಿಯನ್ನು ಓದಿದಾಗ ಥೈಲ್ಯಾಂಡ್‌ನಲ್ಲಿ ಮಾನವ ಹಕ್ಕುಗಳ ಸ್ಥಿತಿ ತಿಳಿದು ಬರುತ್ತದೆ. ಅದರೊಂದಿಗೆ ನಮ್ಮ ದೇಶದ ಕೊಳಕನ್ನೂ ನಾವು ವಿಮರ್ಶಿಸಿಕೊಳ್ಳಬೇಕಿದೆ’ ಎಂದರು.ಹಿರಿಯ ವಕೀಲ ಸಿ.ಎಚ್. ಹನುಮಂತರಾಯ, ಲೇಖಕ ಡಾ.ಆರ್. ಜಯಶಂಕರ್, ಸಖಿ ಪ್ರಕಾಶನದ ಟ್ರಸ್ಟಿ ಎಂ.ಪಿ.ವೀಣಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.