ಭಾನುವಾರ, ಮೇ 22, 2022
21 °C

ಸ್ಥಗಿತಗೊಂಡ ಶೌಚ ತ್ಯಾಜ್ಯ ಸಂಸ್ಕರಣ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಮೂಲ ಸೌಲಭ್ಯವಾಗಬೇಕಿದ್ದ ಪಟ್ಟಣದ ಒಳಚರಂಡಿ ವ್ಯವಸ್ಥೆ ಇತ್ತೀಚಿನ ದಿನಗ ಳಲ್ಲಿ ನಾಗರಿಕರಿಗೆ ಶಾಪವಾಗಿ ಪರಿಣಮಿಸಿದೆ. ಪುರ ಸಭೆ ಆಡಳಿತ ವ್ಯವಸ್ಥೆಗೆ ಇದು ನಿತ್ಯದ ರಗಳೆ ಯಾಗಿದ್ದರೆ, ಸಾರ್ವಜನಿಕರಿಗೆ ಅಸಹ್ಯ ಹುಟ್ಟಿಸಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 35 ವರ್ಷಗಳ ಬಳಿಕ (1984) ಅರಸೀಕೆರೆ ಪಟ್ಟಣದ ಜನತೆ ಒಳಚರಂಡಿ ವ್ಯವಸ್ಥೆಯ ಭಾಗ್ಯ ಕಂಡಿದ್ದರೂ ಅದು ಉಪಯೋಗಕ್ಕೆ ಬಾರದಾಗಿದೆ. ಆಗ ಪಟ್ಟಣದಲ್ಲಿ ಇದ್ದದ್ದು ಕೇವಲ 25 ಸಾವಿರ ಜನಸಂಖ್ಯೆ. ಈಗ 65 ಸಾವಿರ ದಾಟಿದೆ. 28 ವರ್ಷಗಳ ಹಿಂದೆ ನಿರ್ಮಾಣವಾದ ಒಳಚರಂಡಿ ವ್ಯವಸ್ಥೆ ಈಗಿನ ತ್ಯಾಜ್ಯದ ಒತ್ತಡವನ್ನು ತಾಳಿಕೊಂಡೀತೆ? ಎಂಬ ಪ್ರಶ್ನೆ ಈಗ ಎದುರಾಗಿದೆ.

ಸಂಪರ್ಕ ಬಂದ್: ಈ ಯೋಜನೆ ಸೌಲಭ್ಯ ಕಲ್ಪಿಸಲು ಅಂದು ನಿರ್ಮಿಸಿದ್ದ ಸ್ಟೋನ್‌ವೇರ್, ಪೈಪ್‌ಲೈನ್ ಮಾರ್ಗದ ಎಲ್ಲ ಸಂಪರ್ಕ ನಿರ್ಜೀವ ಗೊಂಡು ವರ್ಷಗಳೇ ಕಳೆದಿವೆ. ಪಟ್ಟಣದ ವಿವಿಧ ರಸ್ತೆಗಳಲ್ಲಿ ನಿರ್ಮಿಸಿದ್ದ ಮ್ಯಾನ್‌ಹೋಲ್‌ಗಳು ಉಪಯೋಗಕ್ಕೆ ಬಾರದಂತಾಗಿವೆ. ಜತೆಗೆ ಸಂಪರ್ಕ ಮಾರ್ಗಗಳು ಹಾಳಾಗಿದ್ದು, ಶೌಚ ತ್ಯಾಜ್ಯ ಮಧ್ಯೆ ಕಟ್ಟಿಕೊಂಡು, ತ್ಯಾಜ್ಯ ನೀರು ಮನೆಗಳತ್ತ ಹರಿದು ಬರುತ್ತದೆ ಎಂಬ ದೂರುಗಳು ವ್ಯಾಪಕವಾಗಿದೆ.

ಮಳೆಗಾಲದಲ್ಲಂತೂ ಒಳಚರಂಡಿ ವ್ಯವಸ್ಥೆ ಹೇಳತೀರದು. ಅಲ್ಲಲ್ಲಿಯೇ ಕಟ್ಟಿಕೊಳ್ಳುವ ಮ್ಯಾನ್‌ಹೋಲ್‌ಗಳು, ಒತ್ತಡ ತಾಳದೆ ರಸ್ತೆ ಮೇಲೆ ಹರಿಯುವ ಗಲೀಜು ಗಬ್ಬುನಾತ ಬೀರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ರೋಸಿ ಹೋಗಿರುವ ನಾಗರಿಕರು ಪೌರ ಕಾರ್ಮಿಕರ ಜತೆ ಜಗಳವಾಡದ ದಿನಗಳೇ ಇಲ್ಲ. ಇತರ ಬಡಾವಣೆಗಳ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಹೊಸ ಬಡಾವಣೆಗಳಾದ ಜೇನುಕಲ್‌ನಗರ, ಮಾರುತಿ ನಗರದ ಎಡಭಾಗ, ಹೆಂಜಗೊಂಡನ ಹಳ್ಳಿ ಬಡಾವಣೆ, ಮಿನಿ ವಿಧಾನಸೌಧದ ಹಿಂಭಾಗದ ಪ್ರದೇಶ, ಮಲ್ಲೇಶ್ವರ ನಗರ, ಜಿ.ವಿ. ಸಿದ್ದಪ್ಪನಗರ ಹಾಗೂ ಕಂತೇನಹಳ್ಳಿ ಬಡಾವಣೆಗಳ ಜನರು ಈಗಲೂ ಹಳೆ ಮಾದರಿಯ ಒಳಚರಂಡಿ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ.

ಕೆಲವೆಡೆ ಮುಚ್ಚಳಿಕೆಯೇ ನಾಪತ್ತೆ: ಕೆಲವು ಮ್ಯಾನ್‌ಹೋಲ್‌ಗಳಿಗೆ ಹಾಕಲಾಗಿರುವ ಕಬ್ಬಿಣದ ಮುಚ್ಚಳಿಕೆಗಳೇ ಮಾಯವಾಗಿವೆ. ಕೆಲ ಮ್ಯಾನ್ ಹೋಲ್‌ಗಳಿಗೆ ಹೊಸ ಮುಚ್ಚಳ ಹಾಕಿದ್ದರೆ, ಬಹುತೇಕ ಮ್ಯಾನ್‌ಹೋಲ್‌ಗಳು ಕಲ್ಲು ಚಪ್ಪಡಿ ಯನ್ನು ಹೊದ್ದು ಮಲಗಿವೆ. ಬಿ.ಎಚ್. ರಸ್ತೆಯ ಸರ್ಕಾರಿ ಕಚೇರಿಗಳು ತಮ್ಮ ಒಳಚರಂಡಿ ಸಂಪರ್ಕ ವನ್ನು ಬಾಕ್ಸ್ ಚರಂಡಿಗಳಿಗೆ ಲಿಂಕ್ ಮಾಡಿ ಕೊಂಡಿವೆ. ಹೀಗಾಗಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಪುರಸಭೆ ಪಂಪ್‌ಹೌಸ್‌ವರೆಗಿನ ಬಿ.ಎಚ್.ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ದಿನನಿತ್ಯ ಗಬ್ಬು ವಾಸನೆ ಅನುಭವಿಸಬೇಕಾಗಿದೆ.

50 ಕೋಟಿ ರೂ. ಯೋಜನೆ: ಶಿಥಿಲಗೊಂಡಿ ರುವ ಒಳಚರಂಡಿ ವ್ಯವಸ್ಥೆಗೆ ಪರ್ಯಾಯವಾಗಿ ನೂತನ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಸುಸಜ್ಜಿತ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಪುರಸಭೆ ವತಿಯಿಂದ ಸಮಗ್ರ ವರದಿ ಸಲ್ಲಿಸಲಾಗಿದೆ. ಇದಕ್ಕೆ ತಗಲುವ 10 ಲಕ್ಷ ರೂಪಾಯಿ ವೆಚ್ಚವನ್ನು ಪುರಸಭೆ ಕಳೆದ ಮುಂಗಡ ಪತ್ರದಲ್ಲಿ ಕಾಯ್ದಿರಿ ಸಿತ್ತು. ಈ ಬಗ್ಗೆ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಆದರೂ ಕಾಮಗಾರಿ ಆರಂಭವಾಗಿಲ್ಲ. ಶಾಸಕರು ಇತ್ತ ಗಮನಹರಿಸಿ ಕಾಮಗಾರಿಗೆ ಚಾಲನೆ ನೀಡುವರೇ ಎಂದು ನಾಗರಿಕರು ಕಾಯುತ್ತಿದ್ದಾರೆ.

-ಮಾಡಾಳು ಶಿವಲಿಂಗಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.