ಸ್ಥಳಾಂತರದ ದಾರಿಯಲ್ಲಿ ಜಿಲ್ಲಾಡಳಿತ

7
ನಗರ ಸಂಚಾರ

ಸ್ಥಳಾಂತರದ ದಾರಿಯಲ್ಲಿ ಜಿಲ್ಲಾಡಳಿತ

Published:
Updated:
ಸ್ಥಳಾಂತರದ ದಾರಿಯಲ್ಲಿ ಜಿಲ್ಲಾಡಳಿತ

ಕೋಲಾರ: ಜಿಲ್ಲಾಡಳಿತದ ನೇತೃತ್ವ ವಹಿಸಿರುವ  ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣವು ಈಗ ಸ್ಥಳಾಂತರದ ದಾರಿ­ಯಲ್ಲಿದೆ. ಇದು ಇತ್ತೀಚಿನ ಕನಸಲ್ಲ. ಹಲವು ವರ್ಷಗಳ ಕನಸು. ಸ್ಥಳಾಂತರದ ವಿಷಯವು ಈಗ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೂ ದಾರಿ ಮಾಡಿದೆ ಎಂಬುದು ಗಮನಾರ್ಹ.ವಿಭಜನೆಯಾದ ಬಳಿಕ ಕೋಲಾರ­ದಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ವಿಭಜನೆಗೂ ಮುನ್ನ 11 ತಾಲ್ಲೂಕುಗಳ ಏಕೈಕ ಜಿಲ್ಲಾ ಕೇಂದ್ರವಾಗಿ, ದೊಡ್ಡಣ್ಣನಂತಿದ್ದ ಕೋಲಾರ ಮಾತ್ರ ಆ ವಿಷಯದಲ್ಲಿ ಇನ್ನೂ ಅಂಬೆಗಾಲನ್ನು ಇಡುತ್ತಿದೆ.ನಗರದ ಪಾಲಸಂದ್ರ ಬಡಾವಣೆಯ ಪಕ್ಕದಲ್ಲಿ, ಕೋಲಾರಮ್ಮ ಅಮಾನಿಕೆರೆಗೆ ಕೂಗಳತೆ ದೂರದಲ್ಲಿರುವ ನ್ಯಾಯಾ­ಲಯ ಸಂಕೀರ್ಣ ಮತ್ತು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವು ಜಿಲ್ಲೆಯ ಸಾವಿ­ರಾರು ಮಂದಿಯ ದಿನನಿತ್ಯದ ಅಗತ್ಯ ಮತ್ತು ವ್ಯವಹಾರಗಳಿಗೆ ಹತ್ತಿರದ ಸ್ಥಳವಾಗಿದೆ.

ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರ­ವಾಗಿದ್ದ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಸೆ.25ರಂದು ವೇಮಗಲ್‌­ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತ ಭವನ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿ ಹೋಗಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಕಚೇರಿ, ಹೆಚ್ಚುವರಿ ಜಿಲ್ಲಾ­ಧಿಕಾರಿ ಕಚೇರಿ, ಸಕಾಲ ಕೇಂದ್ರ, ಜಿಲ್ಲಾ ಖಜಾನಾಧಿಕಾರಿ ಕಚೇರಿ, ಚುನಾವಣಾ ಶಾಖೆ, ಭೂಮಾಪನ ಇಲಾಖೆ, ಪ್ರಕೃತಿ ವಿಕೋಪ ನಿರ್ವಹಣಾ ಘಟಕ ಕಾರ್ಯ ನಿರ್ವಹಿಸುತ್ತಿವೆ. ಸಂಕೀರ್ಣದ ಸುತ್ತ­ಮುತ್ತ ತಹಶೀಲ್ದಾರ್‌ ಕಚೇರಿ, ತೋಟ­ಗಾರಿಕೆ ಇಲಾಖೆ, ಕೃಷಿ ಇಲಾಖೆ, ಸಾಮಾ­ಜಿಕ ಅರಣ್ಯ ಇಲಾಖೆ, ಗ್ರಾಹಕರ ವೇದಿಕೆ ನ್ಯಾಯಾಲಯ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ, ನ್ಯಾಷನಲ್ ಇನ್ಫರ್ಮೇಟಿಕ್ಸ್ ಸೆಂಟರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲಾ ಪಂಚಾಯತಿ ಎಂಜಿನಿ­ಯರಿಂಗ್ ವಿಭಾಗ, ಅಬಕಾರಿ ಇಲಾಖೆ, ವಾರ್ತಾ ಇಲಾಖೆ, ತಾಲ್ಲೂಕು ಪಂಚಾ­ಯಿತಿ ಮತ್ತು ಉಪವಿಭಾಗಾಧಿಕಾರಿ ಕಚೇರಿ­ಗಳು ಕಾರ್ಯನಿರ್ವಹಿಸುತ್ತಿವೆ. ಇವು­ಗಳ ಪೈಕಿ ಯಾವೆಲ್ಲ ಕಚೇರಿಗಳು ಜಿಲ್ಲಾಡಳಿ­ತಕ್ಕೆ ಸ್ಥಳಾಂತರಗೊಳ್ಳಲಿವೆ   ಎಂಬುದು ಇತ್ಯರ್ಥವಾಗಿಲ್ಲ.ಎಲ್ಲಿ ಜಿಲ್ಲಾಡಳಿತ ಭವನ?

ಜಿಲ್ಲಾಡಳಿತ ಭವನವನ್ನು ಎಲ್ಲಿ ನಿರ್ಮಿಸಲಾಗುವುದು ಎಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ. ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಸಿದ ಸಭೆಯಲ್ಲಿ, ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ನೀಡಿದ್ದ ಮಾಹಿತಿ­ಯಂತೆ, ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ­ಯಿಂದ ಮುಂದಕ್ಕೆ ಸರ್ಕಾರಿ ಜಾಗವಿದ್ದು ಅಲ್ಲಿ ಜಿಲ್ಲಾಡಳಿತ ಭವನವನ್ನು ನಿರ್ಮಿ­ಸುವ ಆಲೋಚನೆ ಇದೆ. ಆ ಸ್ಥಳದ ಬಗ್ಗೆ ಪರಿಶೀಲನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇದೇ ವೇಳೆ, ಜಿಲ್ಲಾಡಳಿತ ಭವನ­ವನ್ನು ನಗರದಿಂದ ಹಲವು ಕಿಲೋ ಮೀಟರುಗಟ್ಟಲೇ ದೂರದಲ್ಲಿ ನಿರ್ಮಿಸು­ವು­ದರಿಂದ ಸಾರ್ವಜನಿಕರಿಗೆ ತೊಂದರೆ­ಯಾಗುತ್ತದೆ ಎಂಬ ಮಾತುಗಳೂ ಕೇಳಿ ಬಂದಿವೆ.ಇದೇ ವೇಳೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನೇ ಉರುಳಿಸಿ ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸ­ಬಹುದು. ಸಂಕೀರ್ಣದ ಎದುರಿಗೇ ಇರುವ ತೋಟಗಾರಿಕಾ ಇಲಾಖೆಯ ನರ್ಸರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಅಲ್ಲಿಯೂ ಭವನ ನಿರ್ಮಿಸಬಹುದು ಎಂಬ ಸಲಹೆಗಳೂ ಕೇಳಿ ಬಂದಿವೆ.ಇದು ಜಿಲ್ಲಾಧಿಕಾರಿ ಕಚೇರಿ

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಕಚೇರಿಯು 1867ನೇ ಸಾಲಿನಲ್ಲಿ ನಿರ್ಮಾಣವಾಗಿದೆ. ಸುಮಾರು 12,788 ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡಕ್ಕೆ ಸುಣ್ಣದ ಗಾರೆಯಲ್ಲಿ ಕಟ್ಟಿದ ಇಟ್ಟಿಗೆ ಗೋಡೆಗಳಿವೆ. ಮದ್ರಾಸ್ ಟೆರೇಸ್ ಮಾದರಿಯ ಮೇಲ್ಛಾವಣಿಯನ್ನು ಹಲವು ಬಾರಿ ದುರಸ್ತಿ ಮಾಡಲಾಗಿದೆ.ದೈನಂದಿನ ಕೆಲಸ ಅಡಚಣೆಯಾಗಿರುವುದರಿಂದ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿ 2006ರಲ್ಲೇ ಅಂದಿನ ವಿಧಾನಪರಿಷತ್ ಸಭಾಪತಿ ವಿ.ಆರ್‍.ಸುದರ್ಶನ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು.ಅಂದಿನಿಂದ 7 ವರ್ಷವಾದರೂ ಜಿಲ್ಲಾಡಳಿತ ಭವನ ನಿರ್ಮಾಣ ವಿಷಯ ತೆವಳುತ್ತಲೇ ಇತ್ತು. ಸುಮಾರು ಆರು ವರ್ಷದಿಂದ ನಗರದ ಮೆಕ್ಕೆ ವೃತ್ತದಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣ ಕಾಮಗಾರಿಯೂ ನಡೆಯುತ್ತಲೇ ಇದ್ದು, ಇನ್ನೂ ಬಿಡುಗಡೆಯ ಭಾಗ್ಯ ದೊರೆತಿಲ್ಲ.ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವ ಕಟ್ಟಡಗಳ ಪೈಕಿ ಇದನ್ನೂ ಸೇರಿಸುವ ಪ್ರಯತ್ನ ನಡೆದಿತ್ತಾದರೂ, ಅಪೂರ್ಣ ಕಟ್ಟಡ ಉದ್ಘಾಟನೆ ಬೇಡ ಎಂಬ ನಿಲುವಿನ ಕಾರಣ ಪಟ್ಟಿಯಿಂದ ಕೈ ಬಿಡಲಾಯಿತು.ಇದೀಗ, ಜಿಲ್ಲಾಧಿಕಾರಿ ಡಿ.ಕೆ.ರವಿಯವರ ಪ್ರಯತ್ನದ ಫಲವಾಗಿ ಜಿಲ್ಲಾಡಳಿತ ಭವನ ನಿರ್ಮಾಣ ಪ್ರಸ್ತಾಪ ಮತ್ತೆ ಜೀವ ತಳೆದಿದೆ. ಜಿಲ್ಲಾಡಳಿತ ಭವನವು ಎಂದಿಗೆ ನಿರ್ಮಾಣಗೊಳ್ಳುತ್ತದೆ ಎಂಬ ಪ್ರಶ್ನೆ ಮಾತ್ರ ಉಳಿದಿದೆ.ಸನಿಹದಲ್ಲೇ ಸೌಲಭ್ಯ

ಉತ್ತರ ಕರ್ನಾಟಕದ ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಗೊಂಡಿರುವ ಸ್ಥಳಗಳಿಗೆ ಹೋಲಿಸಿದರೆ, ಕೋಲಾರದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಿರುವ ಸ್ಥಳವು ಹತ್ತಿರದಲ್ಲೇ ಇದೆ. ದೂರ ಎಂದು ಹೇಳಿದರೆ, ಉತ್ತಮ ಕಟ್ಟಡ ಸೌಲಭ್ಯ ಮತ್ತು ಎಲ್ಲ ಇಲಾಖೆಗಳ ಸೇವೆಯು ಒಂದೇ ಸೂರಿನ ಅಡಿಯಲ್ಲಿ ದೊರಕುವ ಸೌಲಭ್ಯದಿಂದ ದೂರವೇ ಉಳಿಯಬೇಕಾಗುತ್ತದೆ ಅಷ್ಟೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ದೂರದೃಷ್ಟಿಯಿಂದ ಯೋಚಿಸಬೇಕಾಗಿದೆ.

-–ಪಿ.ಎನ್.ಶ್ರೀನಿವಾಸಾಚಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry