ಸ್ಥಳೀಯರಿಂದ ಅಡ್ಡಿ: ಲಘು ಲಾಠಿ ಪ್ರಹಾರ

7
ಕ್ಯಾಟ್‌ಫಿಶ್ ಸಾಕಣೆ ಹೊಂಡ ತೆರವು ಕಾರ್ಯಾಚರಣೆ

ಸ್ಥಳೀಯರಿಂದ ಅಡ್ಡಿ: ಲಘು ಲಾಠಿ ಪ್ರಹಾರ

Published:
Updated:
ಸ್ಥಳೀಯರಿಂದ ಅಡ್ಡಿ: ಲಘು ಲಾಠಿ ಪ್ರಹಾರ

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು (ಹೆಚ್ಚುವರಿ) ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಕ್ಯಾಟ್‌ಫಿಶ್ ಸಾಕಣೆಯ ಹೊಂಡಗಳನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ ಘಟನೆ ವಡೇರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇಡಿ ಅಗ್ರಹಾರ ಗ್ರಾಮದಲ್ಲಿ ಸೋಮವಾರ ನಡೆಯಿತು.ಮೀನುಗಾರಿಕೆ ಇಲಾಖೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ ನೆರವಿನಿಂದ ತಹಶೀಲ್ದಾರ್ ರಂಗನಾಥ್ ಮೇಡಿ ಅಗ್ರಹಾರ ಗ್ರಾಮದ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಣೆ ಹೊಂಡಗಳನ್ನು ತೆರವುಗೊಳಿಸಲು ಮುಂದಾದರು.ಈ ಸಂದರ್ಭದಲ್ಲಿ `ತಾವು ಸಾಲ ಮಾಡಿ ಈ ಮೀನುಗಳ ಸಾಕಣೆ ಮಾಡುತ್ತಿದ್ದು, ಮೀನುಗಳನ್ನು ಸ್ಥಳಾಂತರಿಸಲು ಒಂದು ತಿಂಗಳ ಕಾಲಾವಕಾಶ ನೀಡಬೇಕು' ಎಂದು ಸ್ಥಳೀಯರು ಮನವಿ ಮಾಡಿದರು.ಇದಕ್ಕೆ ತಹಶೀಲ್ದಾರ್ ಒಪ್ಪದೆ ತೆರವು ಕಾರ್ಯಾಚರಣೆಗೆ ಮುಂದಾದರು. ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಾರ್ಯಾಚರಣೆಗೆ ಅಡ್ಡಿಪಡಿಸಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.ಈ ವೇಳೆ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. `ಎರಡು ದಿನಗಳ ಒಳಗಾಗಿ ಸಾಕಿರುವ ಮೀನುಗಳನ್ನು ಹೊರತೆಗೆಯದಿದ್ದರೆ ಎಲ್ಲ ಹೊಂಡಗಳನ್ನು ತೆರವುಗೊಳಿಸಲಾಗುವುದು' ಎಂದು ತಹಶೀಲ್ದಾರ್ ಎಚ್ಚರಿಕೆ ನೀಡಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.`ವಡೇರಹಳ್ಳಿ, ಮೇಡಿ ಅಗ್ರಹಾರ ಹಾಗೂ ವೀರಸಾಗರ ಗ್ರಾಮಗಳಲ್ಲಿ 24 ಕ್ಯಾಟ್‌ಫಿಶ್ ಸಾಕಣೆ ಹೊಂಡಗಳಿದ್ದು, ಅವುಗಳನ್ನು ತೆರವುಗೊಳಿಸಲು ನಾಲ್ಕು ಬಾರಿ ನೋಟಿಸ್ ನೀಡಲಾಗಿತ್ತು. ಈವರೆಗೆ 10 ಹೊಂಡಗಳನ್ನು ತೆರವುಗೊಳಿಸಲಾಗಿದ್ದು, 14 ಹೊಂಡಗಳನ್ನು ತೆರವುಗೊಳಿಸಬೇಕಾಗಿದೆ.ಮೀನುಗಳನ್ನು ಸ್ಥಳಾಂತರಿಸಿ ತೆರವು ಮಾಡಿಕೊಡಲು ಸಾಕಾಣಿಕೆದಾರರಿಗೆ ಸೂಚಿಸಲಾಗಿದ್ದು, ಎರಡು ದಿನಗಳ ಒಳಗಾಗಿ ತೆರವು ಮಾಡದಿದ್ದರೆ ಯಾವುದೇ ಅವಕಾಶ ನೀಡದೆ ಹೊಂಡಗಳನ್ನು ನೆಲಸಮ ಮಾಡಲಾಗುವುದು' ಎಂದು ತಹಶೀಲ್ದಾರ್ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry