ಸ್ಥಳೀಯರಿಗೆ ಉದ್ಯೋಗ ನೀಡಲು ಆಗ್ರಹ

7

ಸ್ಥಳೀಯರಿಗೆ ಉದ್ಯೋಗ ನೀಡಲು ಆಗ್ರಹ

Published:
Updated:

ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರಲ್ಲಿರುವ ನಾರೇಪಲ್ಲಿ ಗ್ರಾಮದ ಬಳಿಯಿರುವ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 80ಕ್ಕೂ ಅಧಿಕ ಮಂದಿ ಸ್ಥಳೀಯರನ್ನು ಏಕಾ ಏಕಿ ತೆಗೆದುಹಾಕಿ ಮಹಾರಾಷ್ಟ್ರ ರಾಜ್ಯದವರನ್ನು ನೇಮಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ  ಕಾರ್ಯಕರ್ತರು ಟೋಲ್‌ಗೇಟ್ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಟೋಲ್‌ಗೇಟ್‌ನಲ್ಲಿ ಸ್ಥಳಿಯರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇಲ್ಲಿನ ಅಧಿಕಾರಿಗಳು ಮಹಾರಾಷ್ಟ್ರ ರಾಜ್ಯದವರನ್ನು ನೇಮಕ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.ಸ್ಥಳೀಯರಿಗೆ ಕನಿಷ್ಠ ಇಲ್ಲಿ ನೆಲಸಲು ಹಾಗೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೆ ಇಲ್ಲಿನ ಪ್ರಭಾರಿ ಇನ್ಸ್‌ಪೆಕ್ಟರ್ ಕೆ.ಎಂ.ಶ್ರೀನಿವಾಸಪ್ಪ ಹೋರಾಟವನ್ನು ದಮನ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ ಕೆ.ಎಂ.ಶ್ರೀನಿವಾಸಪ್ಪ ಪ್ರತಿಭಟನಾಕಾರರ ಮನವೊಲಿಸಲು ಅನೇಕ ಬಾರಿ ಪ್ರಯತ್ನ ನಡೆಸಿದರು. ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಸ್ಥಳೀಯರನ್ನು ನೇಮಕ ಮಾಡಲಾಗುವುದು ಎಂದು ಟೂಲ್‌ಗೇಟ್‌ನ ಹಿರಿಯ ಮ್ಯಾನೇಜರ್ ಸಂದೀಪ್ ಪಾಟೀಲ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್, ಮುಖಂಡರಾದ ಬಿಟಿಸಿ ಸೀನಾ, ಅರುಣ್, ವಿನಯ್, ವಿನೋದ್, ಕ್ರಿಕೆಟ್ ಮೂರ್ತಿ, ಶ್ರೀಕಾಂತ್, ಜುಬೇರ್, ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಮ್ಮ, ಪ್ರಧಾನಕಾರ್ಯದರ್ಶಿ ನಿರ್ಮಲ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನಾಗಮಣಿ ಮತ್ತಿತರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಕರ್ನಾಟಕ ರೈತ ಸಂಘ-ಹಸಿರು ಸೇನೆ ತಾಲ್ಲೂಕು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry