ಸ್ಥಳೀಯರಿಗೆ ಟಿಕೆಟ್‌ಗೆ ಒತ್ತಾಯಿಸಿ ಮುತ್ತಿಗೆ

7

ಸ್ಥಳೀಯರಿಗೆ ಟಿಕೆಟ್‌ಗೆ ಒತ್ತಾಯಿಸಿ ಮುತ್ತಿಗೆ

Published:
Updated:

ಯಾದಗಿರಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುಂತೆ ಒತ್ತಾಯಿಸಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಚುನಾವಣೆ ವೀಕ್ಷಕರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಗುರುಮಠಕಲ್ ಮತಕ್ಷೇತ್ರದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸಭೆಯ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ  ಲಕ್ಷ್ಮಾರಡ್ಡಿ ಅನಪೂರ ನೇತೃತ್ವದಲ್ಲಿ ಕ್ಷೇತ್ರದ ನೂರಾರು ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದರು.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮೂಲಕ `ಶಾಸಕ ಬಾಬುರಾವ ಚಿಂಚನಸೂರ ಹಠಾವೋ ಕಾಂಗ್ರೆಸ್ ಬಚಾವೋ' ಎಂದು ಘೋಷಣೆ ಕೂಗುತ್ತ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು. ವೀಕ್ಷಕರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಸೂದ್, ಶ್ರೀನಾಥ, ಕೆಪಿಸಿಸಿ ಕಾರ್ಯದರ್ಶಿ ಭೂಪತಿ ಹಾಗೂ ಡಿ. ಗೌತಮ್ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ವೀಕ್ಷಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಾಯಿಬಣ್ಣ ಬೋರಬಂಡಾ ಹಾಗೂ ಲಕ್ಷ್ಮಾರಡ್ಡಿ ಅನಪೂರ, ಶಾಸಕರು ಪಕ್ಷದ ಕಾರ್ಯಕರ್ತರ ಹಾಗೂ ಮತಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಭ್ರಷ್ಟಚಾರದಲ್ಲಿ ನಾಲ್ಕು ವರ್ಷ ಕಳೆದು ಪಕ್ಷದ ವರ್ಚಸ್ಸು ಹಾಳು ಮಾಡಿದ್ದಾರೆ. ಈ ಬಾರಿ ಅವರಿಗೆ ಟಿಕೀಟ್ ನೀಡಬಾರದು. ಒಂದು ವೇಳೆ ಟಿಕೀಟ್ ನೀಡಿದಲ್ಲಿ ಅವರನ್ನುಬೆಂಬಲಿಸುವದಿಲ್ಲ. ಸ್ಥಳೀಯ ನಾಯಕರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೀಟ್ ನೀಡಬೇಕು ಎಂದು ಮನವಿ ಮಾಡಿದರು.ಮತಕ್ಷೇತ್ರಕ್ಕೆ ಬಂದಂತಹ ಲಕ್ಷಾಂತರ ಅನುದಾನದಡಿ ಹಲವಾರು ಕಾಮಗಾರಿಗಳನ್ನು ಅವರ ಅಳಿಯನಿಗೆ ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳಿಗೆ ನೀಡಿದ್ದಾರೆ. ಅವರು ಕಾಮಗಾರಿ ಕೈಗೊಳ್ಳದೇ ಹಣ ಲೂಟಿ ಮಾಡಿದ್ದಾರೆ. ಪರಿಣಾಮ 13 ಎಂಜಿನಿಯರ್‌ಗಳು ಅಮಾನತುಗೊಂಡಿದ್ದಾರೆ. ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತ ಬಂದಿದ್ದೇವೆ. ಶಾಸಕರು ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಪೊಲೀಸ್ ಕೇಸ್ ದಾಖಲಿಸಿ ತೊಂದರೆ ನೀಡಿದ್ದಾರೆ. ಸ್ಥಳೀಯ ಅಭ್ಯರ್ಥಿಗೆ ಟಿಕೀಟ್ ನೀಡಿದಲ್ಲಿ ಮಾತ್ರ ಗುರುಮಠಕಲ್ ಕಾಂಗ್ರೆಸ್ ಭದ್ರ ಕೋಟೆ ಆಗಿ ಉಳಿಯಲು ಸಾಧ್ಯ ಎಂದು ಎಚ್ಚರಿಸಿದರು.ನಾಯಕರ ಮಾತುಗಳನ್ನು ಆಲಿಸಿದ ವೀಕ್ಷಕರು, ಪಕ್ಷದ ಹೈಕಮಾಂಡ್‌ಗೆ ಇಲ್ಲಿನ ವಾಸ್ತವಿಕ, ಪ್ರಾಮಾಣಿಕ ವರದಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಭೀಮರಡ್ಡಿ ಉಟ್ಕೂರ್, ಬಾಲಪ್ಪ ನೀರಟ್ಟಿ, ಶರಣಗೌಡ ಅರಕೇರಿ, ಶರಣಪ್ಪ ಮಾನೇಗಾರ, ಶರಣಪ್ಪ ಸಾಹುಕಾರ, ಅಬೀಬ್ ಅಲ್ವಿ, ಮಶೆಪ್ಪ ಬಳಿಚಕ್ರ, ಸಂಗಾರಡ್ಡಿ ಮಲ್ಹಾರ, ಕಾಶಪ್ಪ ಚಿನ್ನಾಕರ್, ಅಮರನಾಥರಡ್ಡಿ ಸಂಬರ್, ಮಹಾದೇವಪ್ಪ ನಂದೇಪಲ್ಲಿ, ನರಸಿಂಹರಡ್ಡಿ ಚಂಡ್ರಕಿ, ಜಿ.ಕೆ. ಕೃಷ್ಣಾ, ಶಂಕರರಡ್ಡಿ ಯಲಸತ್ತಿ, ಚಾಂದಪಾಷಾ, ಬಸವರಾಜ ಪೂಜಾರಿ, ಸತೀಶರಡ್ಡಿ ಕಟಗಿ ಶಹಾಪೂರ, ತಿಪ್ಪಣ್ಣ ಯಾದವ, ಜಗನಾಥರಡ್ಡಿ ಸಂಬರ್, ವಿಶ್ವನಾಥರಡ್ಡಿ ಹೊನಗೆರಾ ಸೇರಿದಂತೆ ನೂರಾರೂ ಕಾರ್ಯಕರ್ತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry