ಗುರುವಾರ , ಮೇ 26, 2022
32 °C

ಸ್ಥಳೀಯರ ಪ್ರತಿಭಟನೆ-ಕಾಮಗಾರಿಗೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಹೊಳೆ (ಸಿದ್ದಾಪುರ): ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಡಬೇರು, ಹಳ್ಳಿಬೈಲು ಜನವಸತಿ ಪ್ರದೇಶದಲ್ಲಿ ಕಂದಕ ತೆಗೆಯಲು ಮುಂದಾದ ಅರಣ್ಯ ಇಲಾಖೆ ಕ್ರಮಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.ಹಳ್ಳಿಬೈಲು ನಿವಾಸಿಗಳಾದ ಹೆರಿಯ ಕುಲಾಲ ಶೀನ ಪೂಜಾರಿ, ಬಾಬಣ್ಣ ದೇವಾಡಿಗ, ವಿಜೇಂದ್ರ ಪೂಜಾರಿ, ಚಂದ್ರ ಮೋಗವೀರ, ನಾಗೇಂದ್ರ ಕನ್ನಂತ ಹಾಗೂ ಶಾಡಬೇರು ವನಜ ಕುಲಾಲ್ ಹಲವು ವರ್ಷಗಳಿಂದ ಕಾಡಿನ ಪಕ್ಕ ವಾಸ್ತವ್ಯವಿದ್ದಾರೆ.

 

ಅರಣ್ಯಕ್ಕೆ ಹೊಂದಿಕೊಂಡಿರುವ ಅವರ ಜಮೀನು ಹಾಗೂ ಮನೆ ಸಮೀಪ ಅರಣ್ಯ ಇಲಾಖೆ ಬುಧವಾರ ಜೆಸಿಬಿ ಮೂಲಕ ಕಂದಕ ನಿರ್ಮಿಸಲು ಮುಂದಾಗಿತ್ತು. ಇದರಿಂದ ಇಲ್ಲಿನ ಮನೆಗಳಿಗೆ ಅನಾನುಕೂಲ ಆಗಲಿದೆ ಎಂದು ವಾದಿಸಿದ ಸ್ಥಳೀಯರು ಕಂದಕ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

 

ಜೆಸಿಬಿಯಿಂದ ಕಾಮಗಾರಿ ಮುಂದುವರಿಸಲು ಸ್ಥಳೀಯರು ಪ್ರತಿರೋಧ ವ್ಯಕ್ತ ಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.  ಕುಂದಾಪುರ ವಲಯ ಅರಣ್ಯಾಧಿಕಾರಿ ಸದಾನಂದ ಅವರು  ಗುರುವಾರ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಜತೆ ಚರ್ಚಿಸಿದರು.ಅರಣ್ಯ ಇಲಾಖೆಯು ಗಡಿ ಗುರುತು ಪತ್ತೆ ಹಚ್ಚಲು ಸರ್ವೇ ನಡೆಸಿ, ಸಾರ್ವಜನಿಕರಿಗೆ  ತೊಂದರೆ ಆಗದಂತೆ ಕಾಮಗಾರಿ ನಡೆಸುವುದಾಗಿ ಅವರು  ಭರವಸೆ ನೀಡಿದರು. ಆ ಬಳಿಕ ಸ್ಥಳೀಯರು ಕಂದಕ ನಿರ್ಮಾಣ ಕಾಮಗಾರಿ ಮುಂದುವರಿಸಲು ಅವಕಾಶ ಕಲ್ಪಿಸಿದರು.ಪ್ರತಿಭಟನೆಯಲ್ಲಿ ಹಳ್ಳಿಹೊಳೆ ಗ್ರಾ.ಪಂ.ಅಧ್ಯಕ್ಷ ಶಂಕರನಾರಾಯಣ ಚಾತ್ರ, ಸದಸ್ಯ ಚಂದ್ರಕಾಂತ ಶೆಟ್ಟಿ,  ಮಾಜಿ ತಾ.ಪಂ. ಸದಸ್ಯ ಹನ್ಕಿ ರಾಜು ಪೂಜಾರಿ, ಕೃಷ್ಣ ಚಾತ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾರಾಯಣ ರಾವ್, ಜಿಲ್ಲಾ ಸಂಘಟನಾ ಸಂಚಾಲಕ  ವಾಸುದೇವ ಮುದೂರು, ಹಳ್ಳಿಹೊಳೆ ಸಮಿತಿ ಸಂಚಾಲಕ ಮಂಜು, ಗ್ರಾಮ ಸಮಿತಿ ಸಂಚಾಲಕ ಎಚ್ ಶಂಕರ, ಗೋಪಾಲ ನಾಯ್ಕ, ಮಾಜಿ ತಾ.ಪಂ. ಸದಸ್ಯ ಹದ್ದೂರು ರಾಜೀವ ಶೆಟ್ಟಿ ಪಾಲ್ಗೊಂಡಿದ್ದರು.`ಸ್ಥಳೀಯರಿಗೆ ತೊಂದರೆ ಆಗದಂತೆ ಗಡಿ ಗುರುತು~

`ಇಲಾಖೆ ವತಿಯಿಂದ ಅರಣ್ಯದ ಸುತ್ತಲು ಗಡಿಗೆ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಸಂರಕ್ಷಿತ ಅರಣ್ಯಕ್ಕೆ ಹೊಂದಿ ಕೊಂಡಿರುವ ಸರ್ಕಾರಿ ಅಧೀನದ 100 ಮೀಟರ್ ವ್ಯಾಪ್ತಿಯನ್ನು ಒಳಪಡಿಸಿ ಕಂದಕ ನಿರ್ಮಿಸುತ್ತಿದ್ದೇವೆ.

 

ಈ ಭಾಗದ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ ಸರ್ವೆ ಕಾರ್ಯ ಕೈಗೊಂಡು ಕಾಮಗಾರಿ ನಡೆಸುತ್ತೇವೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಉದ್ದೇಶ ಇಲಾಖೆಗೆ ಇಲ್ಲ~ ಎಂದು ವಲಯ ಅರಣ್ಯ ಅಧಿಕಾರಿ ಸದಾನಂದ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.