ಮಂಗಳವಾರ, ನವೆಂಬರ್ 19, 2019
29 °C

ಸ್ಥಳೀಯ- ವಲಸಿಗರ ನಡುವಿನ ಧರ್ಮಯುದ್ಧ: ಕೊಟ್ರೇಶ್

Published:
Updated:

ಹರಪನಹಳ್ಳಿ: ಕ್ಷೇತ್ರದಲ್ಲಿ ನಡೆಯುವ ಈ ಬಾರಿಯ ವಿಧಾನಸಭಾ ಚುನಾವಣೆ ವಲಸಿಗರು ಹಾಗೂ ಸ್ಥಳೀಯನ ನಡುವೆ ನಡೆಯುವ ಧರ್ಮಯುದ್ಧವಾಗಿದ್ದು, ಯುದ್ಧ ಭೂಮಿಕೆಯಲ್ಲಿ ಕ್ಷೇತ್ರದ ಮತದಾರರ ಸ್ಥಳೀಯ ಅಭ್ಯರ್ಥಿಯಾದ ತಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಕೆಜೆಪಿ ಅಭ್ಯರ್ಥಿ ಎನ್. ಕೊಟ್ರೇಶ್ ವಿಶ್ವಾಸ ವ್ಯಕ್ತಪಡಿಸಿದರು.ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಕೆಲ ಪ್ರಾದೇಶಿಕ ಪಕ್ಷಗಳು ಎರವಲು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಹೀಗಾಗಿ, ಕ್ಷೇತ್ರದಲ್ಲಿ ಸ್ಥಳೀಯನಾದ ನನ್ನನ್ನು ಆಶೀರ್ವದಿಸುವ ಮೂಲಕ ವಲಸಿಗ ಅಭ್ಯರ್ಥಿಗಳನ್ನು ಹಾಕಿರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸದಸ್ಯತ್ವಕ್ಕೆ ರಾಜೀನಾಮೆ: `ತಾಲ್ಲೂಕು ಪಂಚಾಯ್ತಿ ಅರಸೀಕೆರೆ ಕ್ಷೇತ್ರವನ್ನು ಬಿಜೆಪಿಯಿಂದ ಪ್ರತಿನಿಧಿಸುತ್ತಿದ್ದ ನಾನು ಈಗಾಗಲೇ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜತೆಗೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಏ. 6ರಂದು ರಾಜೀನಾಮೆ ಸಲ್ಲಿಸಿದ್ದೇನೆ' ಎಂದು ತಿಳಿಸಿದರು.ಪಕ್ಷಕ್ಕೆ ಸೇರ್ಪಡೆ:  ಜೆಡಿಎಸ್‌ನಲ್ಲಿ ಟಿಕೆಟ್ ಹಂಚಿಕೆಗೆ  ಸಂಬಂಧಿಸಿದಂತೆ  ಉಂಟಾಗಿರುವ  ಭಿನ್ನಾಭಿಪ್ರಾಯದಿಂದಾಗಿ ಆ ಪಕ್ಷದ ಚಿಗಟೇರಿ, ತೆಲಿಗಿ ಹಾಗೂ ಅರಸೀಕೆರೆ ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು 2-3ದಿನದಲ್ಲಿ ಪಕ್ಷ ತೊರೆದು, ಕೆಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಅನೇಕ ಮುಖಂಡರು ಸೇರ್ಪಡೆಯಾಗಿದ್ದಾರೆ. ಕೆಜೆಪಿ ಲೆಕ್ಕಕ್ಕಿಲ್ಲ ಎಂದು ಹೇಳಿಕೆ ನೀಡುತ್ತಿರುವವರಿಗೆ ಮೇ 8ರ ಚುನಾವಣಾ ಫಲಿತಾಂಶ ಕೆಜೆಪಿ ಪ್ರಾಬಲ್ಯದ ಉತ್ತರ ನೀಡಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಚ್.ಎಂ.  ಜಗದೀಶ್, ಗುಂಡಗತ್ತಿ ಕೊಟ್ರಪ್ಪ, ಮಡಿವಾಳಪ್ಪ, ಬೇವಿನಹಳ್ಳಿ ನಿಂಗಪ್ಪ, ವಿನಾಯಕ ಭಜಂತ್ರಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)