ಸ್ಥಳೀಯ ಸಾಂಸ್ಕೃತಿಕ ಪ್ರಜ್ಞೆಬೇಕು -ಡಾ.ಸಬರದ

7

ಸ್ಥಳೀಯ ಸಾಂಸ್ಕೃತಿಕ ಪ್ರಜ್ಞೆಬೇಕು -ಡಾ.ಸಬರದ

Published:
Updated:

ಡಾ.ದೇವೇಂದ್ರಕುಮಾರ ಹಕಾರಿ ವೇದಿಕೆ ಕುಷ್ಟಗಿ: ಸ್ಥಳೀಯವಾದದ್ದನ್ನು ತುಚ್ಛೀಕರಿಸುವುದೇ ಜಾಗತೀಕರಣದ ಮೂಲ ಮಂತ್ರ. ಇದನ್ನು ವಿರೋಧಿಸಲೇಬೇಕು.ಸ್ಥಳೀಯವಾದಂತಹ ಸಾಂಸ್ಕೃತಿಕ ಪ್ರಜ್ಞೆ ಎಲ್ಲಿಯವರೆಗೆ ನಮ್ಮಲ್ಲಿ ಮೂಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಏಳಿಗೆ ಅಸಾಧ್ಯ ಎಂದು ಡಾ.ಬಸವರಾಜ ಸಬರದ ಪ್ರತಿಪಾದಿಸಿದರು. ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ 5ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಈ ಪ್ರತಿಪಾದನೆ ಮಾಡಿದರು.ದೂರದ ಇಂಗ್ಲೆಂಡ್‌ನ ರಾಣಿ ಎಲಿಜಾಬೆತ್‌ಗಿಂತ ನಮ್ಮ ಹೊಲಗಳಲ್ಲಿ ಮೈಮುರಿದು ದುಡಿಯುವ ನಮ್ಮ ಅವ್ವ ನಮಗೆ ಮುಖ್ಯವಾಗಬೇಕು. ಇದೇ ಸ್ಥಳೀಯವಾದಂತಹ ಸಾಂಸ್ಕೃತಿಕ ಪ್ರಜ್ಞೆ ಎನಿಸುತ್ತದೆ. ಆದರೆ, ಜಾಗತೀಕರಣ ಸ್ಥಳೀಯವಾದುದನ್ನು ತಿರಸ್ಕರಿಸುತ್ತಾ ತನ್ನದನ್ನು ಬಡದೇಶಗಳ ಮೇಲೆ ಹೇರುತ್ತದೆ. ನಮ್ಮ ದೇಶ-ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಂಡುಬರುತ್ತಿರುವ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.ಜಾಗತೀಕರಣಕ್ಕೆ ಪರ್ಯಾಯವಾಗಿ ನಾವಿಂದು ದೇಶಿ ಜ್ಞಾನ ಪರಂಪರೆಯನ್ನು ಬೆಳೆಸಬೇಕಾಗಿದೆ. ದೇಶೀಯ ಚಿಂತನೆ ಎಂದರೆ ಕೇವಲ ಸಂಪ್ರದಾಯ ಎಂದು ಭಾವಿಸಬಾರದು. ಸಂಪ್ರದಾಯ ಯಾವಾಗಲೂ ಸ್ಥಗಿತತೆಯನ್ನು ಹೇಳಿದರೆ, ಪರಂಪರೆ ಚಲನಶೀಲತೆಯನ್ನು ತೋರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಪರಂಪರಾಗತ ದೇಶಿ ತಂತ್ರಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಕಸಿಯೊಂದಿಗೆ ಬೆಳೆಸಬೇಕಾಗಿದೆ ಎಂದೂ ಅವರು ಹೇಳಿದರು.ಈ ಜಾಗತೀಕರಣ, ಕೈಗಾರಿಕೀಕರಣ ಕೊಪ್ಪಳ ಜಿಲ್ಲೆಯನ್ನೂ ಬಿಟ್ಟಿಲ್ಲ. ಜಿಲ್ಲೆಯ ನೀರಾವರಿ ಪ್ರದೇಶ ಹೊರರಾಜ್ಯದವರ ಪಾಲಾಗಿದ್ದರೆ, ರೈತರ ಫಲವತ್ತಾದ ಭೂಮಿ ಪರಭಾರೆಯಾಗುತ್ತಲಿದೆ. ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಅನೇಕ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಇಲ್ಲ. ಡಾ.ಸರೋಜಿನಿ ಮಹಿಷಿ ವರದಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಹ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.ಜಿಲ್ಲೆ ಆರ್ಥಿಕವಾಗಿ ಬೆಳೆದು ನಿಲ್ಲಬೇಕು. ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು. ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಅನೇಕ ಸಮಸ್ಯೆಗಳಿವೆ. ಅಧಿಕ ಪ್ರಮಾಣದ ಫ್ಲೋರೈಡ್ ಹಾಗೂ ಉಪ್ಪಿನಾಂಶ ಹೆಚ್ಚಾಗಿರುವ ಕಾರಣ ಜನರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮಗಳಿಗೆ ತುಂಗಭದ್ರಾ ಅಣೆಕಟ್ಟೆಯಿಂದ ಕುಡಿಯುವ ನೀರು ಪೂರೈಕೆ ಮಾಡುವತ್ತ ಚಿಂತನೆ ಮಾಡಬೇಕು.ಮೈಸೂರಿನಿಂದ ಬೆಂಗಳೂರಿಗೆ ಕಾವೇರಿಯನ್ನು ತಂದಿರುವ ಸರ್ಕಾರ, ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಯಿಂದ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ನೀರು ಏಕೆ ತರಬಾರದು ಎಂದೂ ಅವರು ಪ್ರಶ್ನಿಸಿದರು.ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು, ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕವಾಗಿ ಸಹಾಯ ಮಾಡಿರುವ ಸರ್ಕಾರ ಕನ್ನಡ ನುಡಿ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡುವ ಸಂಬಂಧ ಬಜೆಟ್‌ನಲ್ಲಿ ಹಲವಾರು ಯೋಜನೆ-ಕಾರ್ಯಕ್ರಮ ಪ್ರಕಟಿಸಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry