ಸ್ಥಳ ಕೊರತೆ, ಅನಾರೋಗ್ಯಕರ ಪರಿಸರ

7

ಸ್ಥಳ ಕೊರತೆ, ಅನಾರೋಗ್ಯಕರ ಪರಿಸರ

Published:
Updated:

ಕೃಷ್ಣರಾಜಪುರ: ಕಾಲೇಜಿನಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಸ್ಥಳಾವಕಾಶದ ಕೊರತೆ. ಕುಳಿತುಕೊಳ್ಳಲು ಮೇಜುಗಳಿಲ್ಲ. ನೈರ್ಮಲ್ಯ, ಶುಚಿತ್ವ ಇತ್ತ ಸುಳಿಯುವುದೇ ಇಲ್ಲ. ಅನಾರೋಗ್ಯಕರ ವಾತಾವರಣದಲ್ಲಿ ಕಲಿಕೆ...ಸರ್ಕಾರಿ ಕಾಲೇಜು ಆಟದ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದು ಹೀಗೆ.

‘ಒಂದೊಂದು ತರಗತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದರಿಂದಾಗಿ ಆರಾಮವಾಗಿ ಕುಳಿತುಕೊಳ್ಳಲು ಸ್ಥಳವೇ ಇಲ್ಲದಂತಾಗಿದೆ. ಸ್ಥಳಾವಕಾಶದ ಕೊರತೆಯಿಂದ ವಿದ್ಯಾರ್ಥಿಗಳು ಕೊಠಡಿಯಿಂದ ಹೊರಗೆ ಕುಳಿತು ಪಾಠ, ಪ್ರವಚನ ಕೇಳುವ ಪರಿಸ್ಥಿತಿ ನಿಮಾರ್ಣವಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.ವಿದ್ಯಾರ್ಥಿ ಮೋಹನ್ ಮಾತನಾಡಿ, ‘ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿದ್ದು, ಭಾರಿ ಮಳೆ ಸುರಿದರೆ ಕಟ್ಟಡ ಕುಸಿದು ಬೀಳುವ ಅಪಾಯವಿದೆ. ಭಯದ ವಾತಾವರಣದಲ್ಲೇ ವಿದ್ಯಾಭ್ಯಾಸ ಮಾಡಬೇಕಿದೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಪಕ್ಕದಲ್ಲೇ ಪದವಿ ಪೂರ್ವ ಕಾಲೇಜು ಇರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ’ ಎಂದು ಹೇಳಿದರು.‘ಕಾಲೇಜಿನಲ್ಲಿ ಸಭಾಂಗಣದ ಕೊರತೆಯಿದೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯಿಲ್ಲ. ಸುಸಜ್ಜಿತವಾದ ಗ್ರಂಥಾಲಯವೂ ಇಲ್ಲ. ಕೂಡಲೇ ಈ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸಬೇಕು’ ಎಂದು ಪತ್ರಿಕೋದ್ಯಮ ವಿದ್ಯಾರ್ಥಿನಿ ರಶ್ಮಿ ಮನವಿ ಮಾಡಿದರು.‘ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಿಂದುಳಿದ ವರ್ಗದವರಿಗೆ ನೀಡಲಾಗುವ ವಿದ್ಯಾರ್ಥಿ ವೇತನ ವಿಳಂಬವಾಗಿ ತಲುಪುತ್ತಿದೆ. ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ತಾಲ್ಲೂಕು ಕಚೇರಿಗೆ ತಿಂಗಳುಗಟ್ಟಲೇ ಅಲೆಯುವಂತಾಗಿದೆ’ ಎಂದು ಬಿ.ಎ ವಿದ್ಯಾರ್ಥಿ ಸತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಬಳಿಕ ಪ್ರತಿಕ್ರಿಯಿಸಿದ ಶಾಸಕ ಎನ್.ಎಸ್.ನಂದೀಶ್‌ರೆಡ್ಡಿ, ‘ಬಿಬಿಎಂಪಿ ವತಿಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸಭಾಂಗಣ ಹಾಗೂ ಹೆಚ್ಚುವರಿಯಾಗಿ 6 ಕೊಠಡಿಗಳನ್ನು ನಿರ್ಮಿಸಲಾಗುವುದು. ಪದವಿ ಪೂರ್ವ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ’ ಎಂದರು.‘ವಿದ್ಯಾರ್ಥಿ ವೇತನ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆ ಹಾಗೂ ಉತ್ತಮ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಸದಸ್ಯ ಎನ್. ವೀರಣ್ಣ ಅವರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.ತಹಸೀಲ್ದಾರ್ ಸಿ.ಎಲ್.ಶಿವಕುಮಾರ್, ಪಾಲಿಕೆ ಸಹಾಯಕ ಎಂಜಿನಿಯರ್ ಸೋಮಯ್ಯ, ಆರೋಗ್ಯ ನಿರೀಕ್ಷಕ ಮುಕುಂದ, ಪಾಲಿಕೆ ಸದಸ್ಯರಾದ ಎನ್.ವೀರಣ್ಣ, ಸುಕುಮಾರ್, ಎಸ್.ಎಸ್. ಪ್ರಸಾದ್, ಸಿದ್ದಲಿಂಗಯ್ಯ, ಆರ್.ಮಂಜುಳಾದೇವಿ, ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ಪ, ಆಡಳಿತ ಮಂಡಳಿ ಸದಸ್ಯ ನಂಜುಂಡಪ್ಪ, ವೆಂಕಟೇಶ ಶೆಟ್ಟಿ, ಮುಖಂಡರಾದ ಚಿದಾನಂದ, ಬ್ರಹ್ಮಾನಂದರೆಡ್ಡಿ, ಬಾಕ್ಸರ್ ನಾಗರಾಜ್, ಗಣೇಶ ರೆಡ್ಡಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry