`ಸ್ಥಾನಕ್ಕೆ ರಾಜೀನಾಮೆ ನೀಡಿ'

7

`ಸ್ಥಾನಕ್ಕೆ ರಾಜೀನಾಮೆ ನೀಡಿ'

Published:
Updated:

ಹಾವೇರಿ: `ಬಿಜೆಪಿ ಚಿಹ್ನೆಯಡಿ ಗೆದ್ದು ಈಗ ಆ ಪಕ್ಷಕ್ಕೆ ದ್ರೋಹ ಬಗೆದು ಇನ್ನೊಂದು ಪಕ್ಷಕ್ಕೆ ಹೋಗುವ ಮುನ್ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದೇ ಬೇರೆ ಪಕ್ಷಕ್ಕೆ ಹೋಗುವುದಾದರೆ, ಅಂತಹ ಜನಪ್ರತಿನಿಧಿಗಳ ಮನೆ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ' ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗೇಂದ್ರ ಕಟಕೋಳ ಎಚ್ಚರಿಕೆ ನೀಡಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಚಿಹ್ನೆ ಹಾಗೂ ನಾಯಕರ ಭಾವಚಿತ್ರ ಬಳಸಿ ಆಯ್ಕೆಯಾದ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಅನ್ನ ನೀಡಿದ ಮನೆಗೆ ದ್ರೋಹ ಬಗೆದು ಕೆಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದರು.ಪಕ್ಷದ ಏಣಿಯಿಂದಲೇ ಮೇಲೆ ಏರಿದ ನಂತರ ಅದೇ ಏಣಿಯನ್ನು ಒದೆಯಲು ಮುಂದಾಗಿರುವ ಜನಪ್ರತಿನಿಧಿಗಳು, ಮೊದಲು ತಮ್ಮ ಅಧಿಕಾರಯುತ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರದಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಕ್ಷಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರು ಹೇಳಿಕೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ರಾಜೀನಾಮೆ ಕೊಡಿಸುವ ಸಜ್ಜನರ ಅವರು ಮೊದಲು ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಬೇರೆಯವರ ರಾಜೀನಾಮೆ ಕೇಳಲು ಅವರಿಗೆ ನೈತಿಕತೆ ಬರುತ್ತದೆ ಎಂದ ಅವರು, ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ರಾಜೀನಾಮೆ ನೀಡುತ್ತಿಲ್ಲ. ಅವರೆಲ್ಲರೂ ಬಿಜೆಪಿಯಲ್ಲಿಯೇ ಇರುತ್ತಾರೆ ಎಂದರು.ಪಕ್ಷದ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿ ಅಧಿಕಾರ ಅನುಭವಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಇದೇ ಪ್ರವೃತ್ತಿ ಮುಂದುವರೆದರೆ, ಅಂತಹ ಜನಪ್ರತಿನಿಧಿಗಳ ಮನೆಯ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.ಜಿಲ್ಲೆಯಲ್ಲಿ ಬಿಜೆಪಿಯ ಯಾವುದೇ ಒಬ್ಬ ಮುಖಂಡ ಹಾಗೂ ಪದಾಧಿಕಾರಿ ರಾಜೀನಾಮೆ ನೀಡಿಲ್ಲ. ಈಗ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಸೇರುತ್ತಿದ್ದೇವೆ ಎಂದು ಹೇಳಿದವರು ಯಾರೂ ಬಿಜೆಪಿ ಜಿಲ್ಲಾ ಅಧ್ಯಕ್ಷರು ನೇಮಕ ಮಾಡಿದ ಪದಾಧಿಕಾರಿಗಳಲ್ಲ. ಅವರೆಲ್ಲರೂ ಸ್ವಯಂ ಘೋಷಿತ ಪದಾಧಿಕಾರಿಗಳಾಗಿದ್ದಾರೆ. ಹೀಗಾಗಿ ಅವರು ಕೆಜೆಪಿ ಸೇರಿದರೂ ಪಕ್ಷಕ್ಕೆ ಮಾತ್ರ ಯಾವುದೇ ಹಾನಿಯಿಲ್ಲ ಎಂದು ತಿಳಿಸಿದರು.ಜಿಲೆಯ್ಲ ಸ್ಥಳೀಯ ಸಂಸ್ಥೆಗಳ 3000 ಜನ ಬಿಜೆಪಿ ಜನಪ್ರತಿನಿಧಿಗಳು ಡಿ. 4ರಂದು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯರು ಸುಳ್ಳು ಹೇಳಿ ಜಿಲ್ಲೆಯ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದ ಅವರು, ಬಿಜೆಪಿಯಿಂದ ಅಧಿಕಾರ ಪಡೆದು ಮತ್ತೊಂದು ಪಕ್ಷದ ಪರ ಕೆಲಸ ಮಾಡುವವರ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳುತ್ತದೆ. ಬಿಜೆಪಿ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳನ್ನು ಕೆಜೆಪಿಯತ್ತ ಸೆಳೆಯುತ್ತಿರುವ ನಾಯಕರ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಅನುಮತಿ ಪಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.ರಾಷ್ಟ್ರೀಯ ಪಕ್ಷಕ್ಕಿರುವ ಭವಿಷ್ಯ ಪ್ರಾದೇಶಿಕ ಪಕ್ಷಕ್ಕೆ ಇಲ್ಲ ಎಂಬುದು ಈ ಹಿಂದೆ ರಾಜ್ಯದಲ್ಲಿ ಬಂದು ಹೋದ ಎಲ್ಲ ಪ್ರಾದೇಶಿಕ ಪಕ್ಷಗಳಿಂದ ಎಲ್ಲರಿಗೂ ತಿಳಿದ ಸಂಗತಿ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಪಕ್ಷ ಬಿಟ್ಟು ಯಾರೂಬ್ಬರೂ ಕೆಜೆಪಿಯಂತಹ ಪ್ರಾದೇಶಿಕ ಪಕ್ಷಕ್ಕೆ ಹೋಗಲ್ಲ. ಬಿಜೆಪಿ ಕಾರ್ಯಕರ್ತರ ಶ್ರಮದ ಬೆವರಿನಿಂದ ಬೆಳೆದ ಪಕ್ಷ. ಈ ಕಾರ್ಯಕರ್ತರಿಗೆ ಬಿಜೆಪಿ ಶಾಸಕರು, ಮಂತ್ರಿಗಳು ಮುಖ್ಯವಲ್ಲ. ಪಕ್ಷ ಮುಖ್ಯ. ಹೀಗಾಗಿ ಯಾರೂ ಎಲ್ಲಿಗೆ ಬೇಕಾದರೂ ಹೋಗಲಿ ಪಕ್ಷ ಜಿಲ್ಲೆಯಲ್ಲಿ ಮತ್ತೆ ಸುಸ್ಥಿತಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಮಂಜುಳಾ ಕರಬಸಮ್ಮನವರ, ನಿರಂಜನ ಹೆರೂರು, ವೇದವ್ಯಾಸ ಕಟ್ಟಿ,  ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಬಸವರಾಜ ಪೇಲನವರ, ಪ್ರಭು ಹಿಟ್ನಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry