ಬುಧವಾರ, ಮೇ 25, 2022
31 °C

ಸ್ಥಾನ ಹೊಂದಾಣಿಕೆ ಮಾತುಕತೆ ವಿಫಲ ಎಐಎಡಿಎಂಕೆ ಮೈತ್ರಿಕೂಟ ತ್ಯಜಿಸಿದ ಎಂಡಿಎಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚೆನ್ನೈ : ಎಂಡಿಎಂಕೆ ಪಕ್ಷವು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದಿದ್ದು ಮುಂಬರುವ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳನ್ನು ‘ಬಹಿಷ್ಕರಿಸಲು’ ನಿರ್ಧರಿಸಿದೆ.ಸ್ಥಾನ ಹೊಂದಾಣಿಕೆ ಬಗ್ಗೆ ಉಭಯ ಪಕ್ಷಗಳ ನಡುವೆ ಶನಿವಾರ ದೀರ್ಘ ಅವಧಿವರೆಗೆ ನಡೆದ ಮಾತುಕತೆ ಮುರಿದು ಬಿದ್ದ ಬಳಿಕ ವೈಕೊ ನೇತೃತ್ವದ ಎಂಡಿಎಂಕೆ ಈ ತೀರ್ಮಾನ ಕೈಗೊಂಡಿದೆ.ಭಾನುವಾರ ನಸುಕಿನಲ್ಲಿ ಪಕ್ಷದ ಸಭೆ ನಡೆಸಿದ ವೈಕೊ ಅವರು, ತಮ್ಮ ಪಕ್ಷಕ್ಕೆ 21 ಸ್ಥಾನಗಳನ್ನು ನೀಡಬೇಕೆಂದು ಕೋರಿದ್ದರೂ ಎಐಡಿಎಂಕೆಯು ಕೇವಲ 13 ಸ್ಥಾನಗಳನ್ನು ಮಾತ್ರ ನೀಡುವುದಾಗಿ ಪಟ್ಟು ಹಿಡಿಯಿತು ಎಂದು ದೂರಿದ್ದಾರೆ.‘ಬಹುಕಾಲದಿಂದಲೂ ನಿಷ್ಠ ಮಿತ್ರ ಪಕ್ಷವಾಗಿರುವ ಎಂಡಿಎಂಕೆ ಬಗ್ಗೆ ಎಐಎಡಿಎಂಕೆ ಪಕ್ಷದ ದುರಹಂಕಾರದ ನಡವಳಿಕೆ ಮತ್ತು ಕೇವಲ 12 ಸ್ಥಾನಗಳಲ್ಲಿ ಸ್ಪರ್ಧಿಸಲು ನೀಡಿದ ಅವಕಾಶದಿಂದ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ನೋವಾಗಿದೆ.ಕೆಲವು ಸ್ಥಾನಗಳಿಗಾಗಿ ನಾವು ನಮ್ಮ ಆತ್ಮಗೌರವವನ್ನು ಮಾರಿಕೊಳ್ಳಲು ಬಯಸುವುದಿಲ್ಲ.  ಈ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇವೆ’ ಎಂದು ಎಂಡಿಎಂಕೆ ಪಕ್ಷದ ಸಭೆಯ ಬಳಿಕ ಬಿಡುಗಡೆ ಮಾಡಿರುವ ನಿರ್ಣಯದ ಐದು ಪುಟಗಳ ಹೇಳಿಕೆ ತಿಳಿಸಿದೆ.‘ಜಯಲಲಿತಾ ಅವರು ಕಳೆದ ಚುನಾವಣೆಗಳಿಂದ ಪಾಠ ಕಲಿತಿಲ್ಲ’ ಎಂದು ಎಂಡಿಎಂಕೆ ದೂರಿದೆ. ಅಲ್ಲದೆ ‘ಮೊಂಡುತನದಿಂದ ಮತ್ತು ಏಕಪಕ್ಷೀಯವಾಗಿ’ ಕಾರ್ಯ ನಿರ್ವಹಿಸುವುದನ್ನು ‘ಅಮ್ಮ’ ಮುಂದುವರಿಸಿದ್ದಾರೆ ಎಂದು ವಿಷಾದಿಸಿದೆ.

 

‘ಜಯಲಲಿತಾ ನೇತೃತ್ವದ ಮೈತ್ರಿಕೂಟದಲ್ಲಿ ಮುಂದುವರಿಯುವುದಿಲ್ಲ ಮತ್ತು ಪ್ರಚಾರ ಮಾಡುವುದಿಲ್ಲ’ ಎಂದು ವೈಕೊ ಪಕ್ಷ ಹೇಳಿದೆ.ಎಂಡಿಎಂಕೆ ನೇತೃತ್ವದಲ್ಲಿ ತೃತೀಯ ರಂಗ ರಚನೆಯನ್ನು ವೈಕೊ ಅಲ್ಲಗಳೆದಿದ್ದಾರೆ.ಎಐಎಡಿಎಂಕೆಯೊಂದಿಗೆ ಪಕ್ಷವು ಮೈತ್ರಿ ಮಾಡಿಕೊಂಡಿದ್ದಾಗ 2006ರ ಚುನಾವಣೆಯಲ್ಲಿ ತಮಿಳುನಾಡಿನ ಒಟ್ಟು 234 ಸ್ಥಾನಗಳಲ್ಲಿ 35 ಸ್ಥಾನಗಳಲ್ಲಿ ಮತ್ತು ಪುದುಚೇರಿಯ 30 ಸ್ಥಾನಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.ಬದಲಾದ ಸನ್ನಿವೇಶಗಳಲ್ಲಿ ಈಗ- ನಟ ವಿಜಯಕಾಂತ್ ಅವರ ಡಿಎಂಡಿಕೆಯೂ ಎಐಎಡಿಎಂಕೆ ಮೈತ್ರಿಕೂಟದಲ್ಲಿ ಇರುವಾಗ ಎಂಡಿಎಂಕೆಗೆ ಸರಿಯಾದ ಪಾಲು ಸಿಗಲೇಬೇಕು ಎಂದು ವೈಕೊ ಹೇಳಿದ್ದಾರೆ.ವೈಕೊ ಅವರು ಕಳೆದ ಐದು ವರ್ಷಗಳಲ್ಲಿ ‘ಅಮ್ಮ’ ಅವರ ಅತಿ ನಂಬಿಕಸ್ಥ ಮಿತ್ರಪಕ್ಷವಾಗಿದ್ದಷ್ಟೇ ಅಲ್ಲದೆ ತಮ್ಮ  ಉತ್ತಮ ಭಾಷಣ ಕಲೆಯಿಂದಾಗಿ ಮೈತ್ರಿಕೂಟದ ತಾರಾ ಪ್ರಚಾರಕ ಕೂಡ ಆಗಿದ್ದರು.

 

 ಭ್ರಷ್ಟಾಚಾರ ಮತ್ತು ಕುಟುಂಬದ ಆಳ್ವಿಕೆಯು ತಮಿಳುನಾಡನ್ನು ‘ನಾಶಗೊಳಿಸುತ್ತಿರುವ’ ಬಗ್ಗೆ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದ ವೈಕೊ ಅವರ ದಿಟ್ಟತನದ ಬಗ್ಗೆ 2009ನೇ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಜಯಲಲಿತಾ ಅವರೇ ಮೆಚ್ಚುಗೆ ಸೂಚಿಸಿದ್ದರು.‘ಪ್ರತಿಪಕ್ಷಗಳಿಗೆ ವೈಕೊ ಅವರು ತಾರಾ ಪ್ರಚಾರಕರಾಗಿಯೇ ಮುಂದುವರಿಯುತ್ತಾರೆ ಎಂಬ ಸತ್ಯಾಂಶ ಸೇರಿದಂತೆ ಈ ಎಲ್ಲದರ ಬಗ್ಗೆ ಎಐಎಡಿಎಂಕೆಗೆ ಅರಿವು ಇದೆ’ ಎಂದು ಎಂಡಿಎಂಕೆಯ ವಕ್ತಾರ ನನ್ಮಾರನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವೈಕೊ ಅವರು ವರ್ಷದ ಹಿಂದೆಯೇ ಡಿಎಂಕೆ ವಿರುದ್ಧ ಪ್ರಚಾರ ಆರಂಭಿಸಿದ್ದಾರೆ. ಸ್ಥಾನ ಹಂಚಿಕೆ ಮಾತುಕತೆ ವೇಳೆ ಎಐಎಡಿಎಂಕೆ ನಮ್ಮನ್ನು ನಡೆಸಿಕೊಂಡ ರೀತಿಯು ಈ ಚುನಾವಣೆಗೆ ನಾವು ಅವರಿಗೆ ಬೇಕಾಗಿಲ್ಲ ಎಂಬುದನ್ನು ತೋರಿಸಿತು’ ಎಂದು ಹೇಳಿದ್ದಾರೆ.

 

ಪಕ್ಷವು ತನ್ನ ನಿರ್ಣಯವನ್ನು ಮರುಪರಿಶೀಲಿಸುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ.ಶ್ರೀಲಂಕಾ ತಮಿಳರು ಮತ್ತು ಇತರ ಕೆಲವು ವಿಷಯಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಇದ್ದರೂ ಎಂಡಿಎಂಕೆಯು ಡಿಎಂಕೆಯ ಜನವಿರೋಧಿ ನೀತಿಗಳನ್ನು ವಿರೋಧಿಸುವಲ್ಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ಎಐಎಡಿಎಂಕೆಗೆ ದೃಢ ಮಿತ್ರಪಕ್ಷವಾಗಿ ಉಳಿದಿತ್ತು ಎಂಬುದನ್ನು ಕೂಡ ಪಕ್ಷದ ನಿರ್ಣಯ ಒತ್ತಿ ಹೇಳಿದೆ.

 

ಜೊತೆಗೆ 2006ರ ಚುನಾವಣೆಯಲ್ಲಿ ವೈಕೊ ಅವರು ಮಾಡಿದ ವ್ಯಾಪಕ ಪ್ರಚಾರವು ಎಐಎಡಿಎಂಕೆಗೆ ಕನಿಷ್ಠ 31 ಸ್ಥಾನಗಳನ್ನು ಗೆಲ್ಲಲು ಅನುಕೂಲ ಮಾಡಿಕೊಟ್ಟಿತ್ತು ಎಂದು ಎಂಡಿಎಂಕೆ ಹೇಳಿದೆ. ಆಗ ಎಂಡಿಎಂಕೆಯ ಮತ- ಹಂಚಿಕೆ ಪ್ರಮಾಣ ಶೇಕಡಾ 5.98 ಇತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ಶೇಕಡ 4ಕ್ಕೆ ಇಳಿಯಿತು.

 

ತಮ್ಮ ಮೈತ್ರಿಕೂಟದಿಂದ ಆಯ್ಕೆಯಾದ ಆರು ಶಾಸಕರಲ್ಲಿ ಅರ್ಧದಷ್ಟು ಮಂದಿ ಡಿಎಂಕೆಗೆ ಪಕ್ಷಾಂತರಗೊಂಡಿದ್ದು ‘ಅಮ್ಮ’ ಅವರಿಗೆ ಭಾರಿ ನಿರಾಶೆ ತಂದಿತ್ತು ಎಂದು ಎಐಎಡಿಎಂಕೆ ಆಪ್ತ ಮೂಲಗಳು ಹೇಳಿವೆ.‘ನಾವು ವೈಕೊ ಅವರ ವಾಕ್ಚಾತುರ್ಯವನ್ನು ಗೌರವಿಸುತ್ತೇವೆ. ಆದರೆ ಅವರು ಈ ಸಲ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿ ತಮ್ಮ ಪಕ್ಷವನ್ನು ಪುನರ್‌ನಿರ್ಮಿಸಬೇಕಿತ್ತು’ ಎಂದು ಮೂಲಗಳು ಹೇಳಿವೆ.

 

41 ಕ್ಷೇತ್ರಗಳಲ್ಲಿ ಡಿಎಂಡಿಕೆ ಸ್ಪರ್ಧೆ

ಚೆನೈ (ಪಿಟಿಐ): ಏಪ್ರಿಲ್ 13ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಡಿಕೆ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.  ಇದರೊಂದಿಗೆ ಈ ಪಕ್ಷ ಮತ್ತು ಎಐಎಡಿಎಂಕೆ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಬಗೆಹರಿದಿದೆ.ಎಐಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳು ಸ್ಥಾನ ಹಂಚಿಕೆ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ತಮ್ಮ ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯಕಾಂತ್ ಅವರು ಅಭ್ಯರ್ಥಿಗಳ ಹೊಸ ಪಟ್ಟಿಗೆ ಅಂಗೀಕಾರ ನೀಡುವರು ಎಂದು ಡಿಎಂಡಿಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪನ್‌ರುಟ್ಟಿ ರಾಮಚಂದ್ರನ್ ಹೇಳಿದ್ದಾರೆ.ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ವರದಿಗಾರರ ಜತೆ ಮಾತನಾಡಿದ ಅವರು ಚರ್ಚೆಗಳು ‘ಅಂತಿಮ ಹಂತ ತಲುಪಿವೆ. ಪಕ್ಷ ಸ್ಪರ್ಧಿಸಲಿರುವ 41 ಕ್ಷೇತ್ರಗಳನ್ನು ಗುರುತಿಸಲಾಗಿದೆ’ ಎಂದಿದ್ದಾರೆ.

ಎಐಡಿಎಂಕೆಯ ಮತ್ತೊಂದು ಮಿತ್ರ ಪಕ್ಷ ವೈಕೊ ನೇತೃತ್ವದ ಎಂಡಿಎಂಕೆಯು ತಮಿಳುನಾಡು ಮತ್ತು ಪುದುಚೇರಿಯ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.