ಸ್ಥಾಯಿ ಸಮಿತಿ ರಚನೆ ಮುಂದೂಡಿಕೆ

7
ನಗರಸಭೆ ಸಾಮಾನ್ಯ ಸಭೆ: ವಿರೋಧ ಪಕ್ಷಗಳ ಸಭಾತ್ಯಾಗ

ಸ್ಥಾಯಿ ಸಮಿತಿ ರಚನೆ ಮುಂದೂಡಿಕೆ

Published:
Updated:

ಯಾದಗಿರಿ: ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗದ ಮಧ್ಯೆಯೂ ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವಾರು ಮಹತ್ವದ ವಿಷಯಗಳಿಗೆ ಅನುಮೋದನೆ ನೀಡಲಾಯಿತು.ಮಂಗಳವಾರ ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಸಭೆ ಆರಂಭ­ವಾಗು­ತ್ತಿದ್ದಂತೆಯೇ, ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು ಸಭಾ­ತ್ಯಾಗಕ್ಕೆ ಮುಂದಾದರು.ಕಾಂಗ್ರೆಸ್‌ನ ಬಸವರಾಜ ಜೈನ್‌ ಮಾತನಾಡಿ, ನಗರಸಭೆಯ ಕಾಮಗಾರಿ­ಗಳ ಬಗ್ಗೆಯಾಗಲಿ, ಹಣಕಾಸಿನ ಪರಿ­ಸ್ಥಿತಿಯ ಬಗ್ಗೆಯಾಗಲಿ ನೂತನ ಸದಸ್ಯರ ಗಮನಕ್ಕೆ ತರಲಾಗಿಲ್ಲ. ಹಿಂದಿನ ಆಡಳಿತ ಅವಧಿಯಲ್ಲಿ ನಡೆದ ಕಾಮಗಾರಿಗಳಿಗೆ ಒಪ್ಪಿಗೆ ನೀಡಲು ಕಾರ್ಯಸೂಚಿಯಲ್ಲಿ ವಿಷಯ ಮಂಡಿಸಲಾಗಿದೆ. ಇದು ಹೇಗೆ ಸಾಧ್ಯ? ಮೊದಲು ನಗರಸಭೆಯ ಆರ್ಥಿಕ ಪರಿಸ್ಥಿತಿ ಮತ್ತು ಕೈಗೊಳ್ಳ­ಬೇಕಾದ ತುರ್ತು ಕಾಮಗಾರಿಗಳ ಬಗ್ಗೆ ಸದಸ್ಯರ ಗಮನಕ್ಕೆ ತನ್ನಿ. ಅದಕ್ಕಾಗಿ ಸಭೆಯನ್ನು ಒಂದು ವಾರ ಮುಂದೂಡಿ ಎಂದು ಮನವಿ ಮಾಡಿದರು.ಆದರೆ, ಇದಕ್ಕೆ ಒಪ್ಪದ ಆಡಳಿತ ಪಕ್ಷದ ಸದಸ್ಯರು, ಈಗಾಗಲೇ ಜನರು ನಗರಸಭೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ಮೊದಲು ಸಭೆಯನ್ನು ನಡೆಸಿ. ಲೋಪದೋಷಗಳ ಬಗ್ಗೆ ನಂತರದಲ್ಲಿ ಚರ್ಚಿಸೋಣ. ಅದಕ್ಕಾಗಿ ಸಹಕರಿಸಿ ಎಂದು ಮನವಿ ಮಾಡಿದರು.ಪಟ್ಟು ಸಡಿಲಿಸದ ಕಾಂಗ್ರೆಸ್ ಸದ­ಸ್ಯರು, ನಮ್ಮ ಮಾತಿಗೆ ಗೌರವ ಇಲ್ಲದ ಮೇಲೆ ಸಭೆಯಲ್ಲಿ ಭಾಗವಹಿಸುವುದು ಏಕೆ ಆಕ್ರೋಶ ವ್ಯಕ್ತಪಡಿಸಿದರು. ಬಸವ­ರಾಜ ಜೈನ್, ಶಂಕರ ರಾಠೋಡ, ಶಿವಕುಮಾರ ದೊಡ್ಡಮನಿ ಮತ್ತು ಸ್ಯಾಮಸನ್ ಮಾಳಿಕೇರಿ ನೇತೃತ್ವದಲ್ಲಿ ಸದಸ್ಯರೆಲ್ಲರೂ ಹೊರನಡೆದರು. ಇವರ ಜೊತೆಗೆ ಬಿಜೆಪಿ ಏಕೈಕ ಸದಸ್ಯ ಹಣಮಂತ ಇಟಗಿ ಕೂಡ ಸಭಾತ್ಯಾಗ ಮಾಡಿದರು.ಮುಂದುವರಿದ ಸಭೆ: ವಿರೋಧ ಪಕ್ಷದ ಸಭಾತ್ಯಾಗದ ನಂತರ ಸಭೆ ಮುಂದು­ವರಿಸುವ ಬಗ್ಗೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಚರ್ಚೆ ನಡೆಸಿದರು. ಅಂತಿಮ­ವಾಗಿ ಸಭೆ ಮುಂದುವರಿಸಲು ತೀರ್ಮಾ­ನಿ­ಸಲಾಯಿತು. ನಂತರ ಸಭೆಯಲ್ಲಿ ಯಾವುದೇ ವಿರೋಧವಿಲ್ಲದೇ ಹಲ­ವಾರು ವಿಷಯಗಳಿಗೆ ಅನುಮೋದನೆ ನೀಡಲಾಯಿತು.₨1.20 ಕೋಟಿ ವೆಚ್ಚದಲ್ಲಿ ಜೈನ್ ಕಾಲೋನಿಯಲ್ಲಿ ಉದ್ಯಾನ ನಿರ್ಮಿಸಲು ಮಂಜೂರಾತಿ ನೀಡುವಂತೆ ಅಧಿಕಾರಿ­ಗಳು ಕೋರಿದರು. ಇದಕ್ಕೆ ವಿರೋಧಿಸಿದ ಕೆಲ ಸದಸ್ಯರು, ಈಗಾಗಲೇ ನಿರ್ಮಿಸಿದ ಅನೇಕ ಉದ್ಯಾನಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ಅದಕ್ಕಾಗಿ ಹೊಸದಾಗಿ ಉದ್ಯಾನ ನಿರ್ಮಾಣ ಬೇಡ ಎಂದರು.ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜಯ ಕುಲಕರ್ಣಿ, ನಿರ್ವಹಣೆಗೆ ನಗರಸಭೆಯಲ್ಲಿ ಯಾವುದೇ ಅನುದಾನ­ವಿಲ್ಲ. ಅದಕ್ಕಾಗಿ ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಒಪ್ಪದ ಸದಸ್ಯರು, ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚಿಸೋಣ ಎಂದರು.ಸ್ಥಾಯಿ ಸಮಿತಿಯ ಅಧ್ಯಕ್ಷರ ರಚನೆಯನ್ನು ಮುಂದೂಡಲಾಯಿತು. ವಿಷಯ ಪ್ರಸ್ತಾಪಿಸಿದ ಕೆಜೆಪಿ ಸದಸ್ಯ ನಾರಾಯಣರಾವ ಚವ್ಹಾಣ, ಸ್ಥಾಯಿ ಸಮಿತಿ ರಚನೆಯ ಕುರಿತು ಮಾಜಿ ಅಧ್ಯಕ್ಷೆ ನಾಗರತ್ನಾ ಅನಪುರ ಅಭಿ­ಪ್ರಾಯ ವ್ಯಕ್ತಪಡಿಸಬೇಕು ಎಂದು ಕೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ನಾಗರತ್ನಾ ಅನಪುರ, ಸ್ಥಾಯಿ ಸಮಿತಿಯಲ್ಲಿ ಎಲ್ಲ ಪಕ್ಷದವರಿಗೆ ಸ್ಥಾನ ನೀಡಬೇಕಾಗಿದ್ದು, ಪ್ರತಿಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿ ರಚನೆ ಬೇಡ. ಮುಂದಿನ ಸಭೆಯಲ್ಲಿ ಮಾಡೋಣ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಸದಸ್ಯರು, ಸ್ಥಾಯಿ ಸಮಿತಿ ರಚನೆಯನ್ನು ಮುಂದೂಡಿದರು.ಅಧ್ಯಕ್ಷರ ಆಕ್ರೋಶ: ಮಾಹಿತಿಗಳನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಕ್ಕೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ್‌ ಇಸಾಕ್‌, ಅಧಿಕಾರಿ­ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯರು ಕೇಳುವ ಮಾಹಿತಿಗಳನ್ನು ನೀಡಿ ಅಭಿವೃದ್ಧಿಗೆ ಸಹಕರಿಸಿ. ಇಲ್ಲ­ವಾದಲ್ಲಿ ನಿಮ್ಮ ವಿರುದ್ಧ ಶಿಸ್ತಿನ ಕ್ರಮಕ್ಕೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಅಧ್ಯಕ್ಷ ಮಹ್ಮದ್‌ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಚಮ್ಮ ಮೌಲಾಲಿ ಅನಪುರ, ಪ್ರಭಾರಿ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಹಿರೇ­ಹನುಮೇಗೌಡ, ವ್ಯವಸ್ಥಾಪಕ ನೀಲಕಂಠರಾಯ, ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry