ಭಾನುವಾರ, ಮೇ 9, 2021
18 °C

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವ ತತ್ವ ಹೇಳುವುದು ಸುಲಭ, ಆಚರಣೆ ಕಷ್ಟ. ಭಾರತೀಯರಿಗೆ ದೇವರು, ಧರ್ಮದಲ್ಲಿ ಅಪಾರ ನಂಬಿಕೆ, ವಿಶ್ವಾಸ. ಅದು ತಪ್ಪಲ್ಲ. ಆದರೆ ದೇವರನ್ನು ಒಲಿಸಿಕೊಳ್ಳಲು ವಿವಿಧ ಕರ್ಮಾಚರಣೆಗಳನ್ನು ಮಾಡುವ ಅಗತ್ಯ ಇಲ್ಲ. ಅದಕ್ಕೆ ಬೇಕಾದುದು `ಅಂತರಂಗಶುದ್ಧಿ, ಬಹಿರಂಗ ಶುದ್ಧಿ~ ಎನ್ನುತ್ತಾರೆ ಬಸವಣ್ಣ.ಅಂತರಂಗ, ಬಹಿರಂಗ ಶುದ್ಧಿಗೆ ಅವರು ಧ್ಯಾನ, ಸ್ನಾನ ಮಾಡಲು ಹೇಳಲಿಲ್ಲ. ಬದಲಾಗಿ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ~ ಎನ್ನುವ ಸಪ್ತಶೀಲಗಳನ್ನು ಜಾರಿಯಲ್ಲಿ ತಂದರು.ಬಸವ ಭಕ್ತರು ಈ ಸಪ್ತಶೀಲಗಳನ್ನು ಹೇಳುತ್ತ ಆಚರಣೆಯಿಂದ ಬಹುದೂರ ಸರಿದಿರುವುದು ಹಗಲಿನಷ್ಟೇ ಸತ್ಯ. ಶರಣರು ಯಾವುದನ್ನು ಬೇಡವೆಂದು ಹೇಳಿದ್ದರೋ ಅದನ್ನೇ ಬಲವಾಗಿ ಅಪ್ಪಿಕೊಳ್ಳುವ ಗುಣ ಹೆಚ್ಚಾಗುತ್ತಿದೆ.ಇವತ್ತು ಅಂತರಂಗ ಬಹಿರಂಗ ಶುದ್ಧಿಗೆ ಬದಲಾಗಿ ಲಿಂಗ ಪ್ರತಿಷ್ಠಾಪನೆ ಮಾಡುವ, ಗುಡಿಗಳಿಗೆ ಹೋಗುವ, ತೀರ್ಥ ಕ್ಷೇತ್ರಗಳನ್ನು ಸುತ್ತುವ, ಹೋಮ, ಹವನ, ರುದ್ರಾಭಿಷೇಕ, ಮಹಾಮಸ್ತಕಾಭಿಷೇಕ ಮಾಡುವ ಜನರು ಹೆಚ್ಚಾಗುತ್ತಿದ್ದಾರೆ.ಯಾವ ಶರಣರೂ ಇಂಥವುಗಳನ್ನು ಮಾಡಲು ಹೇಳಿಲ್ಲ. ಎಲ್ಲ ಶರಣರೂ ಸ್ಥಾವರ ಪೂಜೆಯನ್ನು ನಿರಾಕರಿಸಿದ್ದಾರೆ. ದೇಹವನ್ನೇ ದೇವಾಲಯವನ್ನಾಗಿ, ಜೀವನವನ್ನೇ ಶಿವನನ್ನಾಗಿ ಮಾಡಿಕೊಳ್ಳಬೇಕು, ಅದರ ಸಂಕೇತವಾಗಿ ಅಂಗದ ಮೇಲೆ ಲಿಂಗ ಧರಿಸಿ ಪೂಜಿಸಬೇಕು ಎನ್ನುವುದು ಎಲ್ಲ ಶರಣರ ಸಂದೇಶ. ನಿಜಕ್ಕೂ ಶರಣರ ವಿಚಾರಗಳನ್ನು ಮೆಚ್ಚುವವರು, ಅವುಗಳನ್ನು ಬೋಧಿಸುವವರು ಆ ತತ್ವಗಳಂತೆ ಬದುಕನ್ನು ಕಟ್ಟಿಕೊಳ್ಳಬೇಕಾದುದು ಅಪೇಕ್ಷಣೀಯ.`ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ, ಬಡವನಯ್ಯ~ ಎನ್ನುವ ಬಸವಣ್ಣನವರು ದೇವಾಲಯ ಕಟ್ಟಿಸುವ ಶ್ರೀಮಂತರನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಹೇಳುವುದು `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ~ ಎಂದು. ಮತ್ತೊಂದೆಡೆ `ಸ್ಥಾವರ ಪೂಜೆ, ಜಂಗಮದ ಉದಾಸೀನ- ಕೂಡಲಸಂಗಯ್ಯನೊಲ್ಲ ನೋಡಾ~ ಎಂದಿದ್ದಾರೆ.`ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು~ ಎನ್ನುವುದು ಬಸವಣ್ಣನವರ ಸಿದ್ಧಾಂತ. ಇಲ್ಲಿ ಜಂಗಮ ಎಂದರೆ ಚಲನೆಯುಳ್ಳದ್ದು, ಜೀವಪರವಾದುದು, ಅರಿವುಳ್ಳದ್ದು. ಒಂದರ್ಥದಲ್ಲಿ ಜನತೆಯೇ ಜಂಗಮ. ಜನರ ನೋವು ನಲಿವುಗಳಿಗೆ ಸ್ಪಂದಿಸಿದರೆ, ಅದು ಶಿವ ಪೂಜೆಗಿಂತ ಶ್ರೇಷ್ಠ. ನಿಜವಾದ ಬಸವ ಭಕ್ತರು ಎಂದೆಂದಿಗೂ ಬಾಹ್ಯ ಗುಡಿ ಗುಂಡಾರಗಳಿಗೆ ಹೋಗುವಂತಿಲ್ಲ. ಅವರು ಅಂಗದ ಮೇಲೆ ಲಿಂಗ ಧರಿಸಿ ಅದನ್ನೇ ಶ್ರದ್ಧೆ, ನಿಷ್ಠೆಯಿಂದ ಪೂಜಿಸಬೇಕು. ಅದೇ ಅವರಿಗೆ ಕಾಮಧೇನು, ಕಲ್ಪವೃಕ್ಷ. ಆದರೂ ಬಾಹ್ಯಪೂಜೆ, ಲಿಂಗ ಪ್ರತಿಷ್ಠೆಯ ಚಟುವಟಿಕೆಗಳು ಬಸವ ಭಕ್ತರಿಂದಲೇ ಹೆಚ್ಚು ಹೆಚ್ಚು ನಡೆಯುತ್ತಿರುವುದು ನೋವಿನ ಸಂಗತಿ.

 

ಪ್ರಭುದೇವರಂತೂ `ಲಿಂಗ ಪ್ರತಿಷ್ಠೆಯ ಮಾಡುವವಂಗೆ ನಾಯಕ ನರಕ ತಪ್ಪದು~ ಎಂದು ಕಟುವಾಗಿ ನುಡಿದಿದ್ದಾರೆ. ಅಂಗದ ಮೇಲೆ ಲಿಂಗ ಧರಿಸಿಯೂ ಸ್ಥಾವರ ದೇವರಿಗೆ ಪೂಜೆ ಸಲ್ಲಿಸುವುದೆಂದರೆ `ತನ್ನ ಪುರುಷನ ಬಿಟ್ಟು ಅನ್ಯ ಪುರುಷನ ಸಂಗ ಮಾಡಿದಂತೆ~ ಎಂದು ಬಸವಣ್ಣನವರು ನಿಷ್ಠುರವಾಗಿ ಹೇಳಿದ್ದಾರೆ.

 

`ಕರಸ್ಥಲದ ದೇವರಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ ನರಕದಲ್ಲಿಕ್ಕುವ ಕೂಡಲ ಸಂಗಮದೇವ~ ಎನ್ನುವುದು ಅವರ ಸಿದ್ಧಾಂತ.ಶರಣರ ವಿಚಾರಗಳನ್ನು ಪ್ರತಿಪಾದಿಸುವ ಎಷ್ಟೋ ಗುರು-ಜಗದ್ಗುರುಗಳೇ ಲಿಂಗ ಪ್ರತಿಷ್ಠೆಗೆ ಒತ್ತು ಕೊಡುವರು. ಹೊಸ ಹೊಸ ದೇವಾಲಯಗಳನ್ನು ಕಟ್ಟಿಸುವರು.ದೇವಾಲಯದ ಭೂಮಿ ಪೂಜೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ರುದ್ರಾಭಿಷೇಕ, ಯಜ್ಞ-ಯಾಗ ಎಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಇಂಥ ಆಚರಣೆಗಳು ನಿಜಕ್ಕೂ ಶರಣರ ತತ್ವಾದರ್ಶಗಳಿಗೆ ಒಪ್ಪುವಂಥವಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲವೆಂದಲ್ಲ.ಆದರೆ ಪರಂಪರಾನುಗತವಾಗಿ ಬಂದಿರುವ ವೈದಿಕ ಆಚರಣೆಗಳಿಂದ ಹೊರ ಬರಲು ಅವರಿಂದ ಆಗುತ್ತಿಲ್ಲ. ಹಾಗಾಗಿಯೇ ಈಗಲೂ ಎಷ್ಟೋ ಮಠಗಳಲ್ಲಿ ಅಂಥ ಆಚರಣೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಬಸವಣ್ಣನವರ ಶಿಲಾ ಪ್ರತಿಮೆಯನ್ನು ಬಹು ದೊಡ್ಡದಾಗಿ ಪ್ರತಿಷ್ಠಾಪಿಸುವ ಕಾರ್ಯದಲ್ಲೂ ಮುಂದಾಗಿದ್ದಾರೆ.

 

ಅಂಥ ಕಾರ್ಯಗಳಿಗೆ ಸರ್ಕಾರ ಹಣ ಕೊಡಲು ಮುಂದಾಗಿದೆ. ಇತ್ತೀಚೆಗೆ ಸಿದ್ಧಗಂಗಾ ಮಠದ ಆವರಣದಲ್ಲಿ ಕೋಟಿಲಿಂಗ ಪ್ರತಿಷ್ಠಾಪನೆ ಕಾರ್ಯಕ್ಕೆ ಮುಖ್ಯಮಂತ್ರಿಯವರೇ ಶಂಕುಸ್ಥಾಪನೆ ಮಾಡಿದ್ದರು. ಕೊನೆಗೆ ಸಿದ್ಧಗಂಗಾ ಸ್ವಾಮೀಜಿಯವರು `ಕೋಟಿಲಿಂಗ ಪ್ರತಿಷ್ಠಾಪಿಸುವ ಬಗ್ಗೆ ತಮಗೆ ಮಾಹಿತಿಯೇ ಇರಲಿಲ್ಲ.

 

ಅದರ ಅಗತ್ಯ ಇಲ್ಲ~ ಎಂದು ಹೇಳಿದ್ದು ಸಮಾಧಾನ ತರುವ ಸಂಗತಿ. ಆದರೂ `ಈ ಯೋಜನೆಯನ್ನು ಬೇರೊಂದು ಸ್ಥಳದಲ್ಲಿ ಮಾಡುತ್ತೇವೆ~ ಎಂಬ ಮಾತು ಕೇಳಿ ಬರುತ್ತಿವೆ. ಇದು ವಿಷಾದನೀಯ.`ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ~ ಎಂದ ಬಸವಣ್ಣನವರನ್ನೇ ಸ್ಥಾವರವಾಗಿಸಿ ಅವರ ತತ್ವಗಳಿಗೆ ಅಪಚಾರ ಮಾಡುವುದು ಸರಿಯೇ ಎಂದು ಎಲ್ಲರೂ ಯೋಚಿಸಬೇಕು. ಇವತ್ತು ಆಗಬೇಕಾಗಿರುವುದು ಕೋಟಿ ಲಿಂಗ ಅಥವಾ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗಿಂತ ಅವರ ತತ್ವಗಳ ಅನುಷ್ಠಾನ.

 

ಎಲ್ಲೆಡೆ ಅನುಭವ ಮಂಟಪದ ಕೆಲಸ ತುರ್ತಾಗಿ ನಡೆಯಬೇಕು. ಪ್ರತಿ ಊರುಗಳಲ್ಲೂ ಬಸವಾದಿ ಶರಣರ ವಚನ ಸಾಹಿತ್ಯ ಗ್ರಂಥ ಭಂಡಾರವಿರಬೇಕು.ವಾರಕ್ಕೊಮ್ಮೆಯಾದರೂ ಅನುಭಾವ ಗೋಷ್ಠಿಗಳು ನಡೆಯಬೇಕು. ಮಕ್ಕಳಿಗೆ ಶರಣರ ವಚನಗಳನ್ನು ಕಲಿಸಬೇಕು.

 

ಶರಣರ ವಿಚಾರಗಳನ್ನು ಸುಲಭವಾಗಿ ಎಲ್ಲರಿಗೂ ಮನವರಿಕೆ ಮಾಡಿ ಕೊಡಲು ವಚನ ಸಂಗೀತ, ವಚನ ನೃತ್ಯ, ಶರಣರ ಬದುಕಿನ ಸಾರವನ್ನು ಬಿಂಬಿಸುವ ನಾಟಕಗಳು, ಉಪನ್ಯಾಸಗಳು, ಕೀರ್ತನೆಗಳು ನಿರಂತರವಾಗಿ ನಡೆಯಬೇಕು.ಸರ್ಕಾರ ದೇವಾಲಯ, ಮೂರ್ತಿ ಪ್ರತಿಷ್ಠಾಪನೆ, ಹೋಮ ಹವನಗಳಿಗೆ ಬೊಕ್ಕಸದ ಹಣವನ್ನು ಅಪವ್ಯಯ ಮಾಡುವ ಹುಂಬತನಕ್ಕೆ ಮುಂದಾಗಬಾರದು.

ಸರ್ಕಾರದ ಹಣ ಸಾರ್ವಜನಿಕರ ಬದುಕನ್ನು ಎತ್ತರಿಸಲು ಬಳಕೆ ಆಗಬೇಕು.ಅಂದರೆ ನೀರಾವರಿ, ವಿದ್ಯುತ್, ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯ, ಬಡವರಿಗೆ ಮನೆ, ರಂಗಮಂದಿರ ಇತ್ಯಾದಿಗಳಿಗೆ ಸರ್ಕಾರದ ಹಣ ಬಳಕೆ ಆಗಬೇಕು. ಇದರ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ಹಾಗೂ ಮಠಾಧೀಶರು ಮರುಚಿಂತನೆ ಮಾಡಬೇಕು.ಸಾಣೇಹಳ್ಳಿ, ಹೊಸದುರ್ಗ (ತಾ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.