ಮಂಗಳವಾರ, ಆಗಸ್ಟ್ 11, 2020
26 °C

ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ತೀವ್ರ ವಿರೋಧ

ಭಟ್ಕಳ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೂಡ್ಲ ಪ್ರದೇಶದಲ್ಲಿ 3ಮೆಗಾವ್ಯಾಟ್ ಜಲವಿದ್ಯುತ್ ಸ್ಥಾವರವನ್ನು ರೂ 19 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಸ್ಥಾವರ ನಿರ್ಮಾಣಕ್ಕೆ ಉ.ಕ. ಜಿಲ್ಲಾ ಬಚಾವೋ ಆಂದೋಲನದ ಅಧ್ಯಕ್ಷ ಶಿವರಾಮ ಗಾಂವಕರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಪ್ರವಾಸಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಯೋಜನೆಯಿಂದ ವೆಂಕಟಾಪುರದ ನದಿ ತಟದ ಗ್ರಾಮಗಳಾದ ಕಟಗಾರಕೊಪ್ಪ, ಮಾರುಕೇರಿ, ಹಾಡುವಳ್ಳಿ ಹಾಗೂ ಶಿರಾಲಿಯ ಕೆಲವು ಗ್ರಾಮಗಳು ಮುಳುಗಡೆಯಾಗುವ ಭೀತಿ ಇದೆ. ಜೊತೆಗೆ ನೂರಾರು ಎಕರೆ ಕೃಷಿ ಜಮೀನು, ತೋಟಗಳು ಹಾಗೂ ಅರಣ್ಯ ಪ್ರದೇಶಗಳು ನಾಶವಾಗಲಿವೆ. ಸಾವಿರಾರು ಸಣ್ಣ, ಬಡರೈತ ಕುಟುಂಬಗಳು ಬೀದಿಪಾಲಾಗಲಿವೆ~ ಎಂದು ಆತಂಕ ವ್ಯಕ್ತಪಡಿಸಿದರು.`ಜಲವಿದ್ಯುತ್ ಯೋಜನೆಗೆ 75 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, 36 ಕಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿದೆ. 25 ಕಂಪೆನಿಗಳಿಗೆ ಸರ್ಕಾರ ಅನುಮತಿ ನೀಡಿದ್ದು, ಏಳು ಸ್ಥಳಗಳಲ್ಲಿ ಈ ಯೋಜನೆಯನ್ನು ಹಿಂತೆಗೆದುಕೊಂಡಿದೆ~ ಎಂದು ಗಾಂವಕರ್ ಮಾಹಿತಿ ನೀಡಿದರು.`ಭಟ್ಕಳ ತಾಲ್ಲೂಕಿನ ಹಾಡುವಳ್ಳಿ, ಕೊಪ್ಪ, ಮಾರುಕೇರಿ ಗ್ರಾಮಗಳಲ್ಲಿ ದಟ್ಟಅರಣ್ಯವಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಸಾಗವಾನಿ, ನಂದಿ, ಬೀಟೆ ಮತ್ತು ಔಷಧೀಯ ಗುಣಗಳುಳ್ಳ ಹಲವು ಸಸ್ಯಪ್ರಬೇಧಗಳು ಈ ಅರಣ್ಯ ಸಂಕುಲದಲ್ಲಿದೆ. ಜಲವಿದ್ಯುತ್ ಯೋಜನೆಯಿಂದ ಇವೆಲ್ಲವೂ ನಾಶವಾಗಲಿವೆ. ಈ ಭಾಗದ ಸಣ್ಣ ಹಿಡುವಳಿದಾರರು, ಕೃಷಿಕರು ಮುಳುಗಡೆ ಭೀತಿಯಿಂದ ಉಳಿಯುವಂತಾಗುತ್ತದೆ~ ಎಂದು ಅವರು ಹೇಳಿದರು.`ಈ ಪ್ರದೇಶಗಳಲ್ಲಿ ಹಿಂದುಳಿದ, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, ಜಲವಿದ್ಯುತ್ ಯೋಜನೆಗೆ ಸರ್ಕಾರ ಅನುಮತಿ ನೀಡಿದಲ್ಲಿ ಈ ಎಲ್ಲಾ ಕುಟುಂಬಗಳು ನಿರಾಶ್ರಿತರಾಗಬೇಕಾಗುತ್ತದೆ~ ಎಂದು ಗಾಂವಕರ್ ಆತಂಕ ವ್ಯಕ್ತಪಡಿಸಿದರು.`ಉತ್ತರ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ರೈತರು ಭೂಮಿಯನ್ನು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಯೋಜನೆಗಳಿಗೆ ಒಂದು ಇಂಚು ಭೂಮಿಯನ್ನೂ ನಾವು ನೀಡುವುದಿಲ್ಲ. ಸರ್ಕಾರವು ರೈತರಿಗೆ ನೀರಾವರಿ ಯೋಜನೆ ತರುವುದನ್ನು ಬಿಟ್ಟು, ಜಿಲ್ಲೆಯ ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಯೋಜನೆಗಳನ್ನು ಜಾರಿಗೆ ತರಲು ಹೊರಟಿದೆ~ ಎಂದು ಆರೋಪಿಸಿದ ಅವರು, ಯೋಜನೆ ಅನುಷ್ಠಾನಗೊಳಿಸಲು ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ವೆಂಕಟಾಪುರ ನದಿ ಜಲವಿದ್ಯುತ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಜಿ.ಹೆಗಡೆ, ಕಾರ್ಯದರ್ಶಿ ಮಾಸ್ತಿಗೊಂಡ, ಕೊಪ್ಪ ಗ್ರಾ.ಪಂ. ಸದಸ್ಯ ಶೇಖರ ನಾಯ್ಕ, ಧನ್ಯಕುಮಾರ್ ಜೈನ್, ತಾ.ಪಂ. ಸದಸ್ಯ ನಾಗರಾಜ ಹೆಗಡೆ, ಟೆಂಪೋ ಯೂನಿಯನ್ ಅಧ್ಯಕ್ಷ ಗಣೇಶ ನಾಯ್ಕ, ಪ್ರಮೋದ್ ಜೋಷಿ, ಈಶ್ವರ ದೊಡ್ಮನೆ, ದುರ್ಗಯ್ಯ ಗೊಂಡ, ನಾರಾಯಣ ಗೌಡ  ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.