ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ

ಮಂಗಳವಾರ, ಜೂಲೈ 23, 2019
20 °C

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ

Published:
Updated:

ಬೆಂಗಳೂರು: ಆರು ಮಾನದಂಡಗಳ ಆಧಾರದಲ್ಲಿ ಸ್ಥಿರಾಸ್ತಿ `ಮಾರ್ಗಸೂಚಿ ದರ' (ಗೈಡನ್ಸ್ ವ್ಯಾಲ್ಯೂ) ಪರಿಷ್ಕರಿಸುವಂತೆ ಜೂನ್ 13ರಂದು ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಮೊದಲಿದ್ದ ಮಾದರಿಯನ್ನೇ ಅನುಸರಿಸಲು ಮುಂದಾಗಿದೆ. ಆದರೆ  ಈ ಆದೇಶಕ್ಕೆ ಮುನ್ನವೇ 20 ಜಿಲ್ಲೆಗಳಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿದೆ.ಭೂ ಪರಿವರ್ತನೆ ಆಗಿರುವ ಜಮೀನು ಮತ್ತು ಅದರ ಬಳಕೆಯ ಉದ್ದೇಶ, ಕೈಗಾರಿಕಾ ಉದ್ದೇಶಕ್ಕೆ ಭೂ ಪರಿವರ್ತನೆಯಾದ ಜಮೀನು ಇರುವ ಪ್ರದೇಶ, ವಾಸ ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿರುವ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಪರಭಾರೆ ಮಾಡುವುದು, ಜಮೀನಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ, ತಾಲ್ಲೂಕು ರಸ್ತೆ ಅಥವಾ ಗ್ರಾಮದ ಸಂಪರ್ಕ ರಸ್ತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಆಧಾರವಾಗಿ ಇಟ್ಟುಕೊಂಡು ಮಾರ್ಗಸೂಚಿ ದರ ಪರಿಷ್ಕರಣೆಗೆ ಜೂನ್ 13ರ ಆದೇಶದಲ್ಲಿ ನಿರ್ದೇಶನ ನೀಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಈ ಆದೇಶವನ್ನು ಹಿಂದಕ್ಕೆ ಪಡೆದಿದೆ.ಮುಂಚೆ ಏನಿತ್ತು?: ಇದಕ್ಕೆ ಬದಲಾಗಿ, ಹಿಂದೆ ಅನುಸರಿಸುತ್ತಿದ್ದ ಮಾನದಂಡಗಳ ಆಧಾರದಲ್ಲೇ ಈ ಬಾರಿಯೂ ದರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ. ಸ್ಥಿರಾಸ್ತಿಯ ಹಾಲಿ ಮಾರ್ಗಸೂಚಿ ದರ, ಮಾರುಕಟ್ಟೆ ದರ, ಸ್ಥಿರಾಸ್ತಿಯ ಸಂಪರ್ಕಕ್ಕೆ ಇರುವ ರಸ್ತೆಗಳು, ಆ ಪ್ರದೇಶದಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಬೆಳವಣಿಗೆ, ಅಭಿವೃದ್ಧಿಯ ಸಾಧ್ಯತೆ ಮತ್ತಿತರ ಅಂಶಗಳ ಆಧಾರದಲ್ಲಿ ಈ ಮೊದಲು ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ವಿವಿಧ ಪ್ರದೇಶಗಳಲ್ಲಿ ಮಾರಾಟವಾಗುವ ಸ್ಥಿರಾಸ್ತಿಗಳ ನೈಜ ಮಾರುಕಟ್ಟೆ ದರ ಕುರಿತು ಇಲಾಖೆಯ ಗುಪ್ತದಳ ವರದಿಯೊಂದನ್ನು ಸಲ್ಲಿಸಿದೆ. ಅದನ್ನು ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಾಗುತ್ತಿದೆ.ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 45ಬಿ ಅಡಿಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಿಸಲಾಗುತ್ತಿದೆ. ಈ ಮುನ್ನ ದರ ಪರಿಷ್ಕರಣೆ ನಡೆದದ್ದು 2011ರ ಸೆಪ್ಟೆಂಬರ್‌ನಲ್ಲಿ. ಇದರ ಬಳಿಕ ಈಗ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸ್ಥಿರಾಸ್ತಿ ಮಾರುಕಟ್ಟೆ ದರದಲ್ಲಿ ಆಗಿರುವ ಜಿಗಿತವನ್ನು ಆಧರಿಸಿ ಈ ಪ್ರಕ್ರಿಯೆ ಆರಂಭಿಸಲಾಗಿದೆ.ಮಾರ್ಗಸೂಚಿ ದರ ಪರಿಷ್ಕರಣೆಯ ಪೂರ್ಣ ಅಧಿಕಾರ ನೋಂದಣಿ ಮತ್ತು ಮುದ್ರಾಂಕ ಆಯುಕ್ತರ (ಐಜಿಆರ್) ಅಧ್ಯಕ್ಷತೆಯ ಕೇಂದ್ರ ಮೌಲ್ಯಮಾಪನ ಸಮಿತಿಗೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಪ್ರಸ್ತಾವವನ್ನು ಕೂಡ ಇದೇ ಸಮಿತಿ ಸಿದ್ಧಪಡಿಸಬೇಕು. ಉಳಿದ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಮೌಲ್ಯಮಾಪನ ಪರಿಷ್ಕರಣಾ ಸಮಿತಿಗಳು ಸಿದ್ಧಪಡಿಸುವ ಪ್ರಸ್ತಾವಗಳಿಗೆ ಕೇಂದ್ರ ಮೌಲ್ಯಮಾಪನ ಸಮಿತಿ ಒಪ್ಪಿಗೆ ನೀಡಬೇಕಾಗುತ್ತದೆ.ಕೇಂದ್ರ ಮೌಲ್ಯಮಾಪನ ಸಮಿತಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಅಧಿಕಾರಿಗಳು, ಕೆಲವು ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಕೀಲರು, ರಿಯಲ್ ಎಸ್ಟೇಟ್ ಉದ್ಯಮದ ಪ್ರತಿನಿಧಿಗಳು ಇದ್ದಾರೆ. ಮಾರ್ಗಸೂಚಿ ದರ ಹೆಚ್ಚಳದಿಂದ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ ವಹಿವಾಟಿನಲ್ಲಿ ಕುಸಿತ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದ ರಿಯಲ್ ಎಸ್ಟೇಟ್ ಉದ್ಯಮದ ಪ್ರತಿನಿಧಿಗಳು, ದರ ಏರಿಕೆಗೆ ವಿರೋಧಿಸಿದ್ದರು ಎಂದು ತಿಳಿದುಬಂದಿದೆ.ಆಗಸ್ಟ್ 1ರ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇಲಾಖೆಯ ಮುಂದಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಆಯುಕ್ತ ಅದೋನಿ ಸೈಯದ್ ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು. `20 ಜಿಲ್ಲೆಗಳಲ್ಲಿ ಈಗಾಗಲೇ ಪರಿಷ್ಕೃತ ದರ ಜಾರಿಗೊಂಡಿದೆ. ಏಳು ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಸ್ತಾವ ಸಮಿತಿಯ ಮುಂದೆ ಪರಿಶೀಲನೆಯಲ್ಲಿ ಇದೆ' ಎಂದರು.ಶೇ 10ರಿಂದ ಶೇ 100ರವರೆಗೆ: ರಾಜ್ಯದಲ್ಲಿ ಒಟ್ಟು 247 ಉಪ ನೋಂದಣಿ ಕಚೇರಿಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 43 ಉಪ ನೋಂದಣಿ ಕಚೇರಿಗಳಿವೆ. ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಬೆಂಗಳೂರಿನ ಪಾಲು ಶೇ 70.

ಬೆಂಗಳೂರು ನಗರ ಜಿಲ್ಲೆಯ ಕೆಲವು ಪ್ರದೇಶಗಳ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಶೇ 80ರಿಂದ 100ರಷ್ಟು ಹೆಚ್ಚಿಸಲು ಕೇಂದ್ರ ಮೌಲ್ಯಮಾಪನ ಸಮಿತಿ ತೀರ್ಮಾನಿಸಿದೆ. ರಾಜ್ಯದ ಒಟ್ಟು ಸ್ಥಿರಾಸ್ತಿಗಳ ಪೈಕಿ ಶೇ 8ರಷ್ಟು ಆಸ್ತಿಗಳ ಮಾರ್ಗಸೂಚಿ ದರದಲ್ಲಿ ಶೇ 100ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಶೇ 92ರಷ್ಟು ಸ್ಥಿರಾಸ್ತಿಗಳ ಮಾರ್ಗಸೂಚಿ ದರದಲ್ಲಿ ಶೇ 10ರಿಂದ ಶೇ 50ರವರೆಗೂ ಹೆಚ್ಚಳ ಆಗಲಿದೆ.

ಎಲ್ಲೆಲ್ಲಿ ಜಾರಿ

ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ, ವಿಜಾಪುರ, ಹಾವೇರಿ, ಉತ್ತರ ಕನ್ನಡ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಹಾಸನ,  ಮಂಡ್ಯ, ಮೈಸೂರು ಮತ್ತು ಉಡುಪಿ ಜಿಲ್ಲೆಗಳ ಮೌಲ್ಯಮಾಪನಾ ಪರಿಷ್ಕರಣ ಸಮಿತಿಗಳು ಹಳೆಯ ಮಾನದಂಡದಲ್ಲಿಯೇ ಸಲ್ಲಿಸಿದ ಪ್ರಸ್ತಾವಗಳಿಗೆ ಕೇಂದ್ರ ಮೌಲ್ಯಮಾಪನಾ ಸಮಿತಿ ಒಪ್ಪಿಗೆ ನೀಡಿತ್ತು. ಈ 20 ಜಿಲ್ಲೆಗಳಲ್ಲಿ ಜುಲೈ 1ರಿಂದಲೇ ಪರಿಷ್ಕೃತ ಮಾರ್ಗಸೂಚಿ ದರಗಳು ಜಾರಿಗೆ ಬಂದಿವೆ.ಇಲ್ಲಿ ಸಿದ್ಧ

ಗದಗ, ಕೋಲಾರ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಗಳ ಮೌಲ್ಯಮಾಪನ ಪರಿಷ್ಕರಣಾ ಸಮಿತಿಗಳು ಸಲ್ಲಿಸಿರುವ ಪ್ರಸ್ತಾವಗಳು ಕೇಂದ್ರ ಮೌಲ್ಯಮಾಪನ ಸಮಿತಿ ಮುಂದೆ ಇವೆ. ಈ ಎಲ್ಲಾ ಪ್ರಸ್ತಾವಗಳನ್ನೂ ಪರಿಶೀಲಿಸಿ ತಿಂಗಳಾಂತ್ಯದೊಳಗೆ ಒಪ್ಪಿಗೆ ನೀಡಲು ಸಮಿತಿ ಮುಂದಾಗಿದೆ.

ಬೆಂಗಳೂರು: ವಾರದಲ್ಲಿ ಕರಡು

`ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ವಾರದೊಳಗೆ ಪ್ರಕಟಿಸಲಾಗುವುದು. ಬಳಿಕ ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು' ಎಂದು ನೋಂದಣಿ  ಆಯುಕ್ತ ಅದೋನಿ ಸೈಯದ್ ಸಲೀಂ ತಿಳಿಸಿದರು.

ಆದೇಶದಲ್ಲಿ ಏನಿದೆ

ಹೊಸ ಮಾನದಂಡ ಬೇಡ

ಹಳೆಯ ಮಾನದಂಡ ಅನುಸರಿಸಿ

ಈ ಸೂಚನೆಗೆ ಮುನ್ನವೇ 20 ಜಿಲ್ಲೆಗಳಲ್ಲಿ ಹೊಸ ದರ ಜಾರಿ

ಶೇ 8ರಷ್ಟು ಆಸ್ತಿಗಳ ಮಾರ್ಗಸೂಚಿ ದರ ದುಪ್ಪಟ್ಟಾಗಲಿದೆ

ಶೇ 92ರಷ್ಟು ಆಸ್ತಿಗಳ ದರದಲ್ಲಿ ಶೇ 10 ರಿಂದ 50ರಷ್ಟು ಏರಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry