ಮಂಗಳವಾರ, ಸೆಪ್ಟೆಂಬರ್ 17, 2019
27 °C

ಸ್ಥಿರ ಪ್ರದರ್ಶನ ನಮ್ಮ ಗುರಿ

Published:
Updated:
ಸ್ಥಿರ ಪ್ರದರ್ಶನ ನಮ್ಮ ಗುರಿ

ಬೆಂಗಳೂರು: `ಕಳೆದ ಎರಡು ರಣಜಿ ಋತುವಿನಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ತೋರಿದೆ. ಈಗ ಆಟಗಾರರು ಮತ್ತಷ್ಟು ಪಕ್ವವಾಗಿದ್ದಾರೆ. ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗುವುದು ಈಗ ನಮ್ಮ ಗುರಿ~ ಎಂದು ಕರ್ನಾಟಕ ರಣಜಿ ತಂಡದ ಕೋಚ್ ಕೆ.ಜಸ್ವಂತ್ ನುಡಿದರು.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, `ಆಟಗಾರರು ಈಗ ಸವಾಲಿಗೆ ಸನ್ನದ್ಧರಾಗಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಇರುವ ಆಟಗಾರರು ತಂಡದಲ್ಲಿದ್ದಾರೆ. ಅದು ನಮ್ಮ ನೆರವಿಗೆ ಬರಲಿದೆ~ ಎಂದರು.ಈ ಬಾರಿ ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ರಾಜಸ್ತಾನ ಎದುರು ಉದಯಪುರದ ಫೀಲ್ಡ್ ಕ್ಲಬ್ ಕ್ರೀಡಾಂಗಣದಲ್ಲಿ ನವೆಂಬರ್ ಮೂರರಿಂದ ಆರರವರೆಗೆ ಆಡಲಿದೆ. ಅದಕ್ಕಾಗಿ ಆರ್.ವಿನಯ್ ಕುಮಾರ್ ಸಾರಥ್ಯದ ತಂಡ ಮಂಗಳವಾರ ಬೆಳಿಗ್ಗೆ ತೆರಳಲಿದೆ. ಸನತ್ ಕುಮಾರ್ ಬದಲಿಗೆ ಈ ಬಾರಿ ಜಸ್ವಂತ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.ಚಾಂಪಿಯನ್ ಆಗುವ ಭರವಸೆ ಇದೆ: `ಕಳೆದ ಎರಡು ಬಾರಿ ನಾವು ಪ್ರಶಸ್ತಿಯ ಸನಿಹ ಬಂದು ಎಡವಿದ್ದೆವು. ಆದರೆ ಈ ಬಾರಿ ಆ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ. ನಮ್ಮದು ಯುವ ಆಟಗಾರರನ್ನೊಳಗೊಂಡ ತಂಡ. ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸವಿದೆ~ ಎಂದು ನಾಯಕ ಆರ್.ವಿನಯ್ ಕುಮಾರ್ ನುಡಿದರು.`ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ನೆರವಿಗೆ ಬರಲಿದೆ. ಎಲ್ಲಾ ಆಟಗಾರರು ಈ ಬಾರಿಯ ರಣಜಿ ಋತುವಿನ ಮೊದಲ ಪಂದ್ಯವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ~ ಎಂದು ಅವರು ಹೇಳಿದರು.ಕರ್ನಾಟಕ ತಂಡ ಈ ಬಾರಿ ಎಲೈಟ್ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ರಾಜಸ್ತಾನ, ಮುಂಬೈ, ರೈಲ್ವೇಸ್, ಉತ್ತರ ಪ್ರದೇಶ, ಪಂಜಾಬ್, ಸೌರಾಷ್ಟ್ರ ಹಾಗೂ ಒಡಿಸ್ಸಾ ತಂಡಗಳಿವೆ. ಪ್ರತಿ ತಂಡಗಳು ತಲಾ ಏಳು ಲೀಗ್ ಪಂದ್ಯ ಆಡಲಿವೆ. ಕರ್ನಾಟಕ ಈ ಬಾರಿ ತವರಿನಲ್ಲಿ ಮೂರು ಹಾಗೂ ಹೊರರಾಜ್ಯದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.ಶಿವಮೊಗ್ಗದಲ್ಲಿ ಪಂದ್ಯ: ಉತ್ತರ ಪ್ರದೇಶ ವಿರುದ್ಧದ ಲೀಗ್ ಪಂದ್ಯವೊಂದು ಶಿವಮೊಗ್ಗದಲ್ಲಿ ನಡೆಯಲಿದೆ. ಇಲ್ಲಿನ ಜವಾಹರ ಲಾಲ್ ನೆಹರೂ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಡಿಸೆಂಬರ್ 21ರಿಂದ 24ರವರೆಗೆ ಈ ಪಂದ್ಯ ನಡೆಯಲಿದೆ. 2010-11ರಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ವಡೋದರದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬರೋಡಾ ತಂಡದ ಎದುರು ಆಘಾತ ಅನುಭವಿಸಿತ್ತು. 2009-10ರಲ್ಲಿ ಫೈನಲ್ ತಲುಪಿದ್ದ ಕರ್ನಾಟಕ ಮುಂಬೈ ಎದುರು ಸೋಲು ಕಂಡಿತ್ತು.ಕರ್ನಾಟಕ  ತಂಡ ಇಂತಿದೆ:  ಆರ್.ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಬಿ.ಪವನ್, ಮನೀಷ್ ಪಾಂಡೆ, ಗಣೇಶ್ ಸತೀಶ್ (ಉಪನಾಯಕ), ಅಮಿತ್ ವರ್ಮ, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್ (ವಿಕೆಟ್ ಕೀಪರ್), ಕೆ.ಪಿ.ಅಪ್ಪಣ್ಣ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಭರತ್ ಚಿಪ್ಲಿ, ಎಸ್.ಕೆ.ಮೊಯಿನುದ್ದೀನ್, ಸುನಿಲ್ ಎನ್.ರಾಜು, ಎಸ್.ಎಲ್.ಅಕ್ಷಯ್ ಹಾಗೂ ಕೆ.ಜೆ.ಗೌತಮ್.ಕೋಚ್: ಕೆ.ಜಸ್ವಂತ್. ಸಹಾಯಕ ಕೋಚ್: ಸೋಮಶೇಖರ ಶಿರಗುಪ್ಪಿ. ಮ್ಯಾನೇಜರ್: ಸುಧಾಕರ್ ರಾವ್.

Post Comments (+)