ಗುರುವಾರ , ಮಾರ್ಚ್ 4, 2021
25 °C
ಸರ್ಕಾರಕ್ಕೆ ಪ್ರಸ್ತಾವ; ಜಂಟಿ ನಿರ್ದೇಶಕ ಪ್ರೊ.ಸಿ.ಎಂ.ವಿವೇಕಾನಂದ

ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕೇಂದ್ರ

ಚಿತ್ರದುರ್ಗ: ಚಿತ್ರದುರ್ಗವೂ ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು 75 ಸರ್ಕಾರಿ ಸ್ನಾತಕೋತ್ತರ ಕಾಲೇಜುಗಳಿದ್ದು, ಪ್ರತಿ ಕಾಲೇಜಿಗೆ ಒಂದೊಂದು ಪ್ರತ್ಯೇಕ ಸಂಶೋಧನಾ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಸಿ.ಎಂ.ವಿವೇಕಾನಂದ ತಿಳಿಸಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಶುಕ್ರವಾರ ಆಯೋಜಸಿದ್ದ ‘ವಿಜ್ಞಾನದ ಸಾಮಗ್ರಿಗಳಲ್ಲಿ ಇತ್ತೀಚೆಗಿನ ಪ್ರಗತಿ (ಆರ್ಎಎಂ – 2014) ಕುರಿತ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಚಿತ್ರದುರ್ಗ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಸಸ್ಯ ಶಾಸ್ತ್ರದ ಸ್ನಾತಕೋತ್ತರ ಕೇಂದ್ರಗಳಿವೆ. ಶೀಘ್ರದಲ್ಲೇ  ಪ್ರಾಣಿ ಶಾಸ್ತ್ರದ ಸ್ನಾತಕೋತ್ತರ ಕೇಂದ್ರ ತೆರೆಯುವ ಯೋಚನೆ ಇದೆ ಎಂದರು.ಚಿತ್ರದುರ್ಗದಲ್ಲಿನ ಪ್ರತಿ ಸ್ನಾತಕೋತ್ತರ ವಿಭಾಗದಲ್ಲಿ 3 ರಿಂದ 4 ಮಂದಿ ಪಿಎಚ್.ಡಿ ಪದವಿ ಪಡೆದ ಅಧ್ಯಾಪಕರಿದ್ದಾರೆ. ಇದೇ ರೀತಿ ರಾಜ್ಯದಲ್ಲಿರುವ ಪ್ರತಿ ಪಿ.ಜಿ ಕೇಂದ್ರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಪಿಎಚ್‌.ಡಿ ಪದವಿಧರರು ಇರುತ್ತಾರೆ. ಅವರಿಗೆ ಸಂಶೋಧನಾತ್ಮಕವಾಗಿ ಉನ್ನತ ಅಧ್ಯಯನಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಂಶೋಧನಾತ್ಮಕ ಕೇಂದ್ರಗಳನ್ನು ತೆರೆಯಲು ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎಂದರು.ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಉತ್ತಮ ಶಿಕ್ಷಕರಿದ್ದಾರೆ. ಆದರೆ, ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಈ ಕೊರತೆ ನೀಗಿಸಿ, ಕೇಂದ್ರವನ್ನು ಮೇಲ್ದರ್ಜೆಗೇರಿಸಲು ₨ ೧.೫ ಕೋಟಿ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಜಾಗತಿಕಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾದರೆ ಅಧ್ಯಾಪಕರು ತಮ್ಮ ಬೌದ್ಧಿಕಮಟ್ಟವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ಅದಕ್ಕಾಗಿ ಇಂಥ ವಿಚಾರ ಸಂಕಿರಣಗಳನ್ನು ತಿಂಗಳಿಗೆ ಒಮ್ಮೆಯಾದರೂ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಚಾಲಕ ಪ್ರೊ.ಕೆ.ಕೆ.ಕಮಾನಿ ಮಾತನಾಡಿ, ‘ಸಂಶೋಧನೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿವೆ. ಅವುಗಳನ್ನು ಬಳಸಲಾಗುತ್ತಿದೆ. ಭಾರತದಲ್ಲೂ ಅಂಥ ಸಂಶೋಧನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಗೋವಿಂದರಾಜು ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ ಉತ್ತಮ ಬೋಧನಾ ವರ್ಗ ಹೊಂದಿರುವುದ ಹೆಮ್ಮೆಯ ವಿಷಯ. ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಇದೆ. ಆದರೆ ನಮ್ಮ ಕಾಲೇಜು ಆ ವಿಷಯದಲ್ಲಿ ಶ್ರೀಮಂತವಾಗಿದೆ. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಣ್ಣಮ್ಮ ಅವರು ಈ ವಿಚಾರ ಸಂಕಿರಣಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಮಾತ್ರವಲ್ಲ, ಎಲ್ಲ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಅಂಥ ಒಗ್ಗಟ್ಟಿನಿಂದ ಇಂದು ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯುತ್ತಿದೆ. ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲು ಅವರಲ್ಲಿ ವಿನಂತಿಸುತ್ತಿದ್ದೇನೆ ಎಂದರು‘ಶೇಕಡಾ ನೂರಕ್ಕೆ ನೂರು ಅಂಕ ಪಡೆಯುವುದು ಅಭಿವೃದ್ಧಿ ಹಾಗೂ ಪ್ರಗತಿಯ ಮಾನದಂಡ ಅಲ್ಲ. ಅದು ನಿತ್ಯ ಪ್ರಕ್ರಿಯೆ. ಆದರೆ ಅದನ್ನು ಬಿಟ್ಟು, ಅಧ್ಯಾಪಕರು ತಮ್ಮ ಕೌಶಲ ಹಾಗೂ ಸಾಮರ್ಥ್ಯದ ಮೂಲಕ ಏನು ಹೊಸತನ್ನು ಕಲಿತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ವಿಶ್ಲೇಷಿಸಿದರು.ಸರ್ಕಾರಿ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಟಿ.ವಿ.ಸಣ್ಣಮ್ಮ ಪ್ರಾಸ್ತಾವಿಕ ಮಾತನಾಡಿದರು. ಹೈದರಾಬಾದ್‌ನ ಉಸ್ಮಾನಿಯಾ ವಿವಿಯ ಭೌತಶಾಸ್ತ್ರ ವಿಭಾಗದ ಪ್ರೊ.ಎ.ವರದರಾಜುಲು ಇದ್ದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳಾದ ಹರೀಶ್, ಹೇಮಲತಾ, ಶಾಂಭವಿ ಹಾಗೂ ಅಬ್ಜ ತರನಂ ಹಚ್ಚೇವು ಕನ್ನಡದ ದೀಪ ಪ್ರಾರ್ಥನೆ ಗೀತೆ ಹಾಡಿದರು.ಒಂದು ಮೆಸೇಜ್, 8 ವಸ್ತುಗಳ ಪ್ರಕ್ರಿಯೆಗೆ ಚಾಲನೆ !

ಚಿತ್ರದುರ್ಗ
: ವೇದಿಕೆ ಮೇಲಿದ್ದ ಗಣ್ಯರು ತಮ್ಮ ಮೊಬೈಲ್ ನಿಂದ ಒಂದು ಎಸ್‌ಎಂಎಸ್ ಕಳಿಸಿದರು. ವೇದಿಕೆ ಪಕ್ಕದಲ್ಲಿಟ್ಟಿದ್ದ ಸಾಯಿಬಾಬ ವಿಗ್ರಹದ ಮೇಲೆ ನೀರು, ಹಾಲು ಅಭಿಷೇಕವಾಯಿತು. ಸುತ್ತಲೂ ಇಟ್ಟಿದ್ದ ದೀಪಗಳು ಏಕಕಾಲಕ್ಕೆ ಬೆಳಗಿದವು...!

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಶುಕ್ರವಾರ ನಡೆದ ರಾಜ್ಯಮಟ್ಟದ ‘ಆರ್‌ಎಎಂ – 2014’ ವಿಚಾರ ಸಂಕಿರಣದಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ.ಚಂದ್ರಶೇಖರ್ ಆವಿಷ್ಕರಿಸಿದ್ದ ಸ್ಟಾರ್ ಡೆಲ್ಟಾ (ಜಿಎಸ್‌ಎಂ ಬೇಸ್ಡ್ ಕಂಟ್ರೋಲ್ ಸ್ವಿಚ್)ಮೋಟಾರ್ ಉಪಕರಣ ದಿಂದ ನಡೆದ ಚಮತ್ಕಾರ ಇದು.ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ವಸ್ತುವೊಂದನ್ನು ನಿಯಂತ್ರಿಸಲು ಮೋಟಾರ್ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆದರೆ, ಚಂದ್ರಶೇಖರ್ ಅವರು ಸಂಶೋಧಿಸಿರುವ ಸ್ಟಾರ್ ಡೆಲ್ಟಾ ಮೋಟಾರ್‌ನಿಂದ  ಏಕಕಾಲದಲ್ಲಿ ಎಂಟು ವಸ್ತುಗಳ ಪ್ರಕ್ರಿಯೆ ನಿಯಂತ್ರಿಸಬಹುದಾಗಿದೆ. ಈ ಮೋಟಾರ್ ಅನ್ನು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಸಿ.ಎಂ.ವಿವೇಕಾನಂದ ತಮ್ಮ ಮೋಬೈಲ್‌ನಿಂದ ಎಸ್‌ಎಂಎಸ್ ಕಳುಹಿಸುವ ಮೂಲಕ ಮೋಟಾರ್‌ಗೆ ಚಾಲನೆ ನೀಡಿದರು. ಎಸ್‌ಎಂಎಸ್ ಕಳುಹಿಸುತ್ತಿದ್ದಂತೆ ವೇದಿಕೆಯ ಪಕ್ಕದ ಟ್ರೇನಲ್ಲಿ ಇಟ್ಟಿದ್ದ ಸಾಯಿಬಾಬ ವಿಗ್ರಹಕ್ಕೆ ನೀರಿನ ಅಭಿಷೇಕ, ಹಾಲಿನ ಅಭಿಷೇಕ ಮತ್ತು ವಿಗ್ರಹದ ಮುಂಭಾಗ ಇಟ್ಟಿದ್ದ ವಿದ್ಯುತ್ ದೀಪಗಳು ಬೆಳಗಿದವು. ವೇದಿಕೆಯ ಎದುರಿಗಿದ್ದವರು, ಇದನ್ನು ಕಂಡು ಚಪ್ಪಾಳೆ ಹೊಡೆದರು.ರೈತರು ಮನೆಗಳಲ್ಲಿಯೇ ಕುಳಿತು ಹೊಲದಲ್ಲಿರುವ ಮೋಟಾರ್‌ ಅನ್ನು ಚಾಲನೆ ಮಾಡಲು ಅಥವಾ ನಿಲ್ಲಿಸಲು ಹಾಗೂ ಮನೆಯಲ್ಲಿರುವ ಟಿ.ವಿ, ರೆಫ್ರಿಜರೇಟರ್, ಫ್ಯಾನ್ ಸೇರಿದಂತೆ ವಿದ್ಯುತ್‌ನಿಂದ ಬಳಕೆಯಾಗುವ ಎಲ್ಲ ವಸ್ತುಗಳನ್ನು ನಿಯಂತ್ರಿಸಲು ಇದನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಚಂದ್ರಶೇಖರ್ ತಿಳಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.