ಗುರುವಾರ , ಮೇ 13, 2021
16 °C
ಒಡಲ ದನಿ

ಸ್ನೇಹದ ನಡುವೆ

-ವಾಣಿ ಎನ್. Updated:

ಅಕ್ಷರ ಗಾತ್ರ : | |

ಸ್ನೇಹದ ನಡುವೆ

`ಸ್ನೇಹದ ಕಡಲಲ್ಲಿ ತೇಲಾಡುವವರು ಎಂದಿಗೂ ಸ್ನೇಹಿತರನ್ನು ಅನುಮಾನಿಸುವುದಿಲ್ಲ' ಎಂಬ ಮಾತಿದೆ. ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಸ್ನೇಹದ ನಡುವೆಯೂ ಹೊಟ್ಟೆಕಿಚ್ಚು, ಅಸೂಯೆ ಇರುತ್ತದೆ ಎಂಬುದು ಮಾತ್ರ ನಿಜ.ಕಾಲೇಜು ವಿದ್ಯಾರ್ಥಿಗಳಲ್ಲಿ ಇದು ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ. ತಮ್ಮ ಸಹಪಾಠಿಗಳ ನಡುವೆ ಬೆಟ್ಟದಷ್ಟು ಪ್ರೀತಿಯಿದ್ದರೂ ಹೊಟ್ಟೆಕಿಚ್ಚು ಎನ್ನುವುದೂ ಅದರ ಜೊತೆಯಲ್ಲೇ ಮಿಳಿತಗೊಂಡಿರುತ್ತದೆ. ಬಹಳಷ್ಟು ವಿದ್ಯಾರ್ಥಿಗಳಲ್ಲಿ ಸ್ನೇಹ ಗಾಢವಾಗಿ ಒಡಮೂಡಿರುತ್ತದೆ. ವೈಯಕ್ತಿಕ ವಿಚಾರಗಳು ಪರಸ್ಪರರ ನಡುವೆ ವಿನಿಮಯವಾಗುತ್ತವೆ.ಇದರ ಜೊತೆ ಜೊತೆಗೆ ಸ್ವಾರ್ಥವೂ ಬೆಳೆಯುತ್ತಾ ಹೋಗುತ್ತದೆ. ನನಗಿಂತ ನನ್ನ ಸ್ನೇಹಿತ/ ಸ್ನೇಹಿತೆ ಮುಂದಿರಬಾರದು, ಎಲ್ಲದರಲ್ಲೂ ನಾವಿಬ್ಬರೂ ಸಮಾನವಾಗಿರಬೇಕು ಎಂದೇ ಬಹುತೇಕರ ಮನಸ್ಸು ಹಂಬಲಿಸುತ್ತದೆ.ಶಾಲೆಯಿಂದ ಕಾಲೇಜು ಮಟ್ಟದವರೆಗೂ ಈ ನಡವಳಿಕೆಯನ್ನು ನಾವು ಗಮನಿಸಬಹುದು. ಪರೀಕ್ಷೆಗಳು ನಡೆಯುವ ವೇಳೆ, ಫಲಿತಾಂಶ ಹೊರಬಿದ್ದಾಗ ಇದು ಇನ್ನೂ ಹೆಚ್ಚುತ್ತದೆ. ತನ್ನ ಸಹಪಾಠಿಗಳು ತನಗಿಂತ ಹೆಚ್ಚಿನ ಅಂಕಗಳನ್ನು ತೆಗೆದಿದ್ದರೆ ಮನದಲ್ಲೇ ಕೊರಗುವುದು, ಕೆಲವೊಮ್ಮೆ ಇದೇ ಕಾರಣಕ್ಕೆ ಸ್ನೇಹಿತರ ಜೊತೆ ಮಾತನಾಡುವುದನ್ನೇ ಬಿಡುವ ಉದಾಹರಣೆಗಳೂ ಇವೆ. ಇನ್ನು ಕೆಲವು ಬಾರಿ ಅವರು ಮಾತನಾಡುವ ಧಾಟಿಯೇ ಬದಲಾಗಿಬಿಟ್ಟಿರುತ್ತದೆ.ಸುಮಾರು ವರ್ಷಗಳ ಸ್ನೇಹ ಕೂಡಾ ಇಂಥ ಸಂದರ್ಭಗಳಲ್ಲಿ `ಹೊಳೆಯಲ್ಲಿ ಹುಣಿಸೆ ಹಣ್ಣು ಕಿವುಚಿದಂತೆ' ಆಗುತ್ತದೆ. ನೀನೇ ನನಗೆ ಸರ್ವಸ್ವ, ನಿನ್ನನ್ನು ಬಿಟ್ಟು ನಾನು ಏನನ್ನೂ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗಿನ ಸ್ನೇಹ ಸಹ ಇಂತಹ ಸಂದರ್ಭಗಳಲ್ಲಿ ನಾಪತ್ತೆ ಆಗಿಬಿಡುತ್ತದೆ.

ವಿನಾಕರಣ ಸ್ನೇಹ ಕಳೆದುಕೊಂಡ ಸ್ನೇಹಿತೆ/ ಸ್ನೇಹಿತನಿಗೆ ತನ್ನ ಸಹಪಾಠಿಯ ವರ್ತನೆ ಬೇಸರ ತರಿಸುತ್ತದೆ. ಜೊತೆಗೆ ಹಲವು ವರ್ಷಗಳ ಸ್ನೇಹವನ್ನು ಒಂದೇ ಒಂದು ಸಾಧನೆ ನಾಶ ಮಾಡಿಬಿಡುತ್ತದಲ್ಲ ಎಂಬ ಕೋಪವೂ ಬರುತ್ತದೆ. ಆದರೆ ಸ್ನೇಹ ಉಳಿಸಿಕೊಳ್ಳುವ ಸಲುವಾಗಿ ಅಸಾಧ್ಯವಾದುದನ್ನು ಮಾಡಲು ಸಾಧ್ಯವಿಲ್ಲ.ಎಲ್ಲ ಸ್ನೇಹಿತರ ವಿಷಯದಲ್ಲೂ ಹೀಗೇ ಆಗುತ್ತದೆಂದು ಹೇಳಲಾಗದು. ಕೆಲವರಲ್ಲಿ ಇಂತಹ ಭಾವನೆಗಳು ಬರುವುದಿಲ್ಲ. ಸ್ನೇಹಿತರು ಪರಸ್ಪರ ಒಳ್ಳೆಯದನ್ನೇ ಬಯಸುತ್ತಾರೆ. ಆದರೆ ಇಂತಹವರಿಗಿಂತ ಅಸೂಯೆ ಪಡುವ ಸ್ನೇಹಿತರ ಸಂಖ್ಯೆಯೇ ಹೆಚ್ಚು. ಸ್ನೇಹದ ನಡುವೆ ಬಂದು ಹೋಗುವ  ಅಸೂಯೆ ಕೆಲವೊಮ್ಮೆ ಸ್ನೇಹವನ್ನೇ ಹಾಳು ಮಾಡಿಬಿಡುವಷ್ಟು ಮಟ್ಟಕ್ಕೆ ಬೆಳೆದು ಬಿಡುತ್ತದೆ. ಹೀಗಾಗಿ ಸ್ನೇಹದ ನಡುವೆ ಅತಿರೇಕದ ಅಸೂಯೆ ಎಂದಿಗೂ ಒಳ್ಳೆಯದಲ್ಲ.

-ವಾಣಿ ಎನ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.