ಸ್ನೇಹಿತನಿಂದ ವಿದ್ಯಾರ್ಥಿನಿ ಮಾನಭಂಗ

7

ಸ್ನೇಹಿತನಿಂದ ವಿದ್ಯಾರ್ಥಿನಿ ಮಾನಭಂಗ

Published:
Updated:

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ನಡೆಸಿರುವ ಘಟನೆ ಕಗ್ಗದಾಸಪುರ ಸಮೀಪದ ನಾಗಪ್ಪರೆಡ್ಡಿ ಲೇಔಟ್‌ನಲ್ಲಿ ನಡೆದಿದೆ. ಅತ್ಯಾಚಾರ ನಡೆಸಿರುವ ಆರೋಪಿ ಚಂದ್ರು (21) ಎಂಬಾತನನ್ನು ಬಂಧಿಸಲಾಗಿದೆ ಎಂದು ಬಯ್ಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.ಮೂಲತಃ ಗುಲ್ಬರ್ಗದ ಚಂದ್ರು, ಕಗ್ಗದಾಸಪುರದ ಖಾಸಗಿ ಕಾಲೇಜು ಒಂದರಲ್ಲಿ ಡಿಪ್ಲೊಮಾ ಓದುತ್ತಿದ್ದ. ನಾಗಪ್ಪರೆಡ್ಡಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆತ, ಜೀವನ್‌ಬಿಮಾನಗರ ಸಮೀಪದ ಸುಧಾಮನಗರದಲ್ಲಿರುವ ಸಂಬಂಧಿಕರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದ. ಆತ, ಸಂಬಂಧಿಕರ ಮನೆಯ ಸಮೀಪವೇ ವಾಸವಿರುವ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಆ ಯುವತಿ ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.ಆ ಯುವತಿ ಅಧ್ಯಯನಕ್ಕೆ ನೆರವು ನೀಡುವಂತೆ ಆತನಿಗೆ ಕೇಳಿಕೊಂಡಿದ್ದಳು. ಆರೋಪಿ ಇದನ್ನೇ ನೆಪ ಮಾಡಿಕೊಂಡು ಅಧ್ಯಯನಕ್ಕೆ ನೆರವು ನೀಡುವ ಸೋಗಿನಲ್ಲಿ ಯುವತಿಯನ್ನು ಭಾನುವಾರ ತನ್ನ ಮನೆಗೆ ಕರೆಸಿಕೊಂಡಿದ್ದ. ರಾತ್ರಿ ಮನೆಯಲ್ಲಿ ಉಳಿದುಕೊಂಡಿದ್ದ ಯುವತಿಯ ಮೇಲೆ ಚಂದ್ರು ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಯುವತಿಯ ಪೋಷಕರು, ಭಾನುವಾರ ರಾತ್ರಿ ಮನೆಗೆ ಬಾರದೆ ಎಲ್ಲಿ ಹೋಗಿದ್ದೆ ಎಂದು ಪ್ರಶ್ನಿಸಿದಾಗ ಆಕೆ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಪೋಷಕರು ಯುವತಿಯನ್ನು ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದರು. ಈ ದೂರಿನ ಅನ್ವಯ ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಚಂದ್ರುನನ್ನು ಮಂಗಳವಾರ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ವ್ಯಕ್ತಿ ಆತ್ಮಹತ್ಯೆ

ಸಿದ್ದಾಪುರ ಸಮೀಪದ ಕೆ.ಎಂ.ಕಾಲೊನಿಯ ಮೂರನೇ ಅಡ್ಡರಸ್ತೆ ನಿವಾಸಿ ಪ್ರಕಾಶ್ (41) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಆಟೊ ಚಾಲಕರಾಗಿದ್ದರು. ಪ್ರಕಾಶ್ ವಾಸವಾಗಿದ್ದ ಮನೆಯ ಒಡೆತನದ ವಿಷಯವಾಗಿ ಅವರ ತಾಯಿ ಈರಮ್ಮ, ಅಕ್ಕ ಭಾಗ್ಯಮ್ಮ ಮತ್ತು ಭಾವ ಗಂಗಾಧರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೇ ವಿಷಯವಾಗಿ ಅವರು ತಾಯಿ, ಅಕ್ಕ ಮತ್ತು ಭಾವನ ಜತೆ ಜಗಳವಾಡಿದ್ದರು ಎಂದು ಸಿದ್ದಾಪುರ ಪೊಲೀಸರು ತಿಳಿಸಿದ್ದಾರೆ.ಜಗಳವಾಡಿದ್ದರಿಂದ ಮನನೊಂದಿದ್ದ ಪ್ರಕಾಶ್, ಅ.11ರಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ರಾತ್ರಿ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

 

ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈರಮ್ಮ, ಭಾಗ್ಯಮ್ಮ ಮತ್ತು ಗಂಗಾಧರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry