ಮಂಗಳವಾರ, ನವೆಂಬರ್ 19, 2019
27 °C

ಸ್ನೇಹಿತರ ಕಾದಾಟಕ್ಕೆ ವೇದಿಕೆ ಸಜ್ಜು!

Published:
Updated:

ಬೆಳಗಾವಿ: ನಾಮಪತ್ರ ಸಲ್ಲಿಸುವ ಭರಾಟೆ ಒಂದೆಡೆಯಾದರೆ, ಪಕ್ಷಾಂತರ ಪರ್ವ ಮತ್ತೊಂದೆಡೆ ಮಂಗಳವಾರ ನಡೆಯಿತು.ಘಟಾನುಘಟಿಗಳು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡ ರಂಗೇರಿತು. ಜಿಲ್ಲೆಯ 18 ಕ್ಷೇತ್ರಗಳಲ್ಲಿ 51 ಅಭ್ಯರ್ಥಿಗಳು 60 ನಾಮಪತ್ರಗಳನ್ನು ಮಂಗಳವಾರ ಸಲ್ಲಿಸುವ ಮೂಲಕ ಅಖಾಡಕ್ಕೆ ಧುಮುಕಿದರು. ಈವರೆಗೆ ಜಿಲ್ಲೆಯಲ್ಲಿ 119 ಅಭ್ಯರ್ಥಿಗಳು 154 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಶಾಸಕ ಫಿರೋಜ್ ಸೇಠ್ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಉತ್ತರ ಕ್ಷೇತ್ರದಲ್ಲಿ ಸ್ನೇಹಿತರ ನಡುವೆ ಕಾದಾಟ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಫಿರೋಜ್ ಸೇಠ್ ಕಣಕ್ಕಿಳಿದಿದ್ದರೆ, ಕೆಜೆಪಿಯಿಂದ ಎಸ್.ಸಿ.ಮಾಳಗಿ ಬುಧವಾರ ಅಖಾಡಕ್ಕೆ ಇಳಿಯಲಿದ್ದಾರೆ. ಮಾಳಗಿ ಸಹ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು, ಟಿಕೆಟ್ ಸಿಗದಿದ್ದರಿಂದ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ.ಯಮಕನಮರಡಿ (ಎಸ್‌ಟಿ) ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಸತೀಶ ಜಾರಕಿಹೊಳಿ ಮಂಗಳವಾರ ನಾಮಪತ್ರ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ `ಕೈ'ಬಲಪಡಿಸಲು ಮುಂದಾಗಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಇನ್ನೊಂದು ಗುಂಪಿನ ಬೆಂಬಲಿತ ಅಭ್ಯರ್ಥಿ ಶಿವಾಜಿ ಸುಂಟಕರ ನಾಮಪತ್ರ ಸಲ್ಲಿಸುವ ಮೂಲಕ ಸಮಿತಿಯ ಮತ್ತೊಬ್ಬ ಅಭ್ಯರ್ಥಿಗೆ ಸೆಡ್ಡು ಹೊಡೆದಿದ್ದಾರೆ.ಉತ್ತರ ಕ್ಷೇತ್ರದಲ್ಲಿ ಪುನಃ `ಕೈ' ಬಲಪಡಿಸುವ ಹುಮ್ಮಸ್ಸಿನಲ್ಲಿ ಫಿರೋಜ್ ಸೇಠ್ ಇದ್ದರೆ, ಮೊದಲ ಬಾರಿಗೆ ಕೆಜೆಪಿಯನ್ನು ಕಂಗೊಳಿಸುವ ನಿಟ್ಟಿನಲ್ಲಿ ಮಾಳಗಿ ಸಜ್ಜಾಗಿದ್ದಾರೆ. ಇವರಿಬ್ಬರೂ ಕಣಕ್ಕಿಳಿದಿರುವುದರಿಂದ ಚುನಾವಣಾ ಅಖಾಡ ರಂಗೇರಿದಂತಾಗಿದೆ.ಎಂಇಎಸ್ ಬೆಂಬಲಿತ ಅಭ್ಯರ್ಥಿ ಎಂದು ಹೇಳಿಕೊಂಡಿರುವ ಮನೋಹರ ಕಿಣೇಕರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಗುಂಪುಗಾರಿಕೆಯಿಂದ ಕೂಡಿರುವ ಎಂಇಎಸ್‌ನಲ್ಲಿ ಇನ್ನೊಂದು ಗುಂಪಿನ ಬೆಂಬಲಿತ ಅಭ್ಯರ್ಥಿ ಶಿವಾಜಿ ಸುಂಟಕರ ಮಂಗಳವಾರ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.ಶಾಸಕ ಫಿರೋಜ್ ಸೇಠ್ ಅವರು ಚನ್ನಮ್ಮ ವೃತ್ತದಲ್ಲಿ ವೀರರಾಣಿ ಚನ್ನಮ್ಮನ ಪ್ರತಿಮೆಗೆ ಹಾಗೂ ಡಾ. ಅಂಬೇಡ್ಕರ್ ಉದ್ಯಾನದಲ್ಲಿ ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಆರಂಭಿಸಿದರು. ಮಹಾನಗರ ಪಾಲಿಕೆಗೆ ಆಗಮಿಸಿದ ಸೇಠ್, ಸೂಚಕರೊಂದಿಗೆ ತೆರಳಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.`ಕಳೆದ 5 ವರ್ಷಗಳ ಕಾಲ ಸರ್ಕಾರದ ಹಲವು ಯೋಜನೆಗಳನ್ನು ಕ್ಷೇತ್ರದ ಜನರಿಗೆ ಶಾಸಕನಾಗಿ ಪ್ರಾಮಾಣಿಕವಾಗಿ ತಲುಪಿಸಿದ್ದೇನೆ. ಹೀಗಾಗಿ ಜನರು ಪುನಃ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ' ಎಂದು ಫಿರೋಜ್ ಸೇಠ್ ನಾಮಪತ್ರ ಸಲ್ಲಿಸಿದ ನಂತರ ತಿಳಿಸಿದರು.`ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಜನರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಬಿಜೆಪಿ ಸಚಿವರು ಜೈಲಿಗೆ ಹೋಗಿಬಂದಿದ್ದೇ ಅವರ ಸಾಧನೆಯಾಗಿದೆ. ನನ್ನ ಕ್ಷೇತ್ರದಲ್ಲಿ ಧರ್ಮ ಹಾಗೂ ಅಧರ್ಮ ರಾಜಕಾರಣದ ನಡುವೆ ಸ್ಪರ್ಧೆ ಇದೆ. ಬಿಜೆಪಿಯವರು ಅಧರ್ಮ ರಾಜಕಾರಣ ನಡೆಸಿದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಜಾತ್ಯತೀತ ಮನೋಭಾವ ಹೊಂದಿರುವ ನನ್ನ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ' ಎಂದರು.`ಟಿಕೆಟ್ ಸಿಗಲಿಲ್ಲ ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷ ಬಿಟ್ಟು ಕೆಜೆಪಿ ಸೇರಿರುವ ಎಸ್.ಸಿ.ಮಾಳಗಿ ಅವರ ಸ್ಪರ್ಧೆಯಿಂದ ನನಗೆ ಯಾವುದೇ ತೊಂದರೆ ಇಲ್ಲ. ಮಾಳಗಿ ಅವರು ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದರೂ, ಜನರ ವಿಶ್ವಾಸ ಕಳೆದುಕೊಂಡಿದ್ದಾರೆ' ಎಂದು ಪ್ರತಿಕ್ರಿಯೆ ನೀಡಿದರು.`ಎಂಇಎಸ್‌ನ ಒಳಜಗಳ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಉತ್ತರ ಕ್ಷೇತ್ರದಲ್ಲಿ ಎಂಇಎಸ್ ಅಸ್ತಿತ್ವ ಕಳೆದುಕೊಂಡಿದೆ. ಎಂಇಎಸ್ ನಾಯಕರಿಗೆ ಮರಾಠಿಗರ ಹಿತರಕ್ಷಣೆಗಿಂತ ಶಾಸಕರಾಗಿ ಅಧಿಕಾರ ಅನುಭವಿಸುವುದೇ ಮುಖ್ಯವಾಗಿದೆ ಎಂಬುದು ಕ್ಷೇತ್ರದ ಮರಾಠಿಗರಿಗೆ ಅರ್ಥವಾಗಿದೆ' ಎಂದು ಹೇಳಿದರು.`ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಬಡಜನರ ಶಿಕ್ಷಣಕ್ಕೆ ಒತ್ತು ನೀಡುತ್ತೇನೆ. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ನೈರ್ಮಲ್ಯ ಕೆಲಸಗಳಿಗೆ ಮಹತ್ವ ನೀಡುತ್ತೇನೆ' ಎಂದು ಸೇಠ್ ತಿಳಿಸಿದರು.ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಮಾಜಿ ಸಚಿವ, ಜೆಡಿಎಸ್ ಮುಖಂಡ ಎ.ಬಿ.ಪಾಟೀಲ, ಮಾಜಿ ಶಾಸಕ ಮೋಹನ ಶಹಾ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.`ಮಾಜಿ ಸಚಿವ ಎ.ಬಿ.ಪಾಟೀಲ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‌ಗೆ ಬಲ ಬಂದಂತಾಗಿದೆ. ಸರಳ, ಸಜ್ಜನ ರಾಜಕಾರಣಿಯಾಗಿರುವ ಎ.ಬಿ.ಪಾಟೀಲರು ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ನನ್ನ ಗೆಲುವಿಗೆ ಸಹಕಾರಿಯಾಗಲಿದೆ' ಎಂದು ಸೇಠ್ ಅಭಿಪ್ರಾಯಪಟ್ಟರು.ಎಂಇಎಸ್‌ನಿಂದ ಬಂಡಾಯದ ಬಾವುಟ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್‌ನ ಇನ್ನೊಂದು ಗುಂಪಿನ ಬೆಂಬಲಿತ ಅಭ್ಯರ್ಥಿ ಶಿವಾಜಿ ಸುಂಟಕರ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದರು.ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಸಲು ಯತ್ನಿಸಿದ ಶಿವಾಜಿ ಸುಂಟಕರ ಅವರಿಗೆ ಪೊಲೀಸರು ತಡೆಯೊಡ್ಡಿದರು. ಅನುಮತಿ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ನಂತರ ದ್ವಿಚಕ್ರ ವಾಹನದ ಮೇಲೆ ರಿಸಾಲ್ದಾರ ಗಲ್ಲಿಯಲ್ಲಿರುವ ತಹಸೀಲ್ದಾರ ಕಚೇರಿಗೆ ತೆರಳಿ ಸೂಚಕರೊಂದಿಗೆ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)