ಶುಕ್ರವಾರ, ಅಕ್ಟೋಬರ್ 18, 2019
23 °C

ಎಲ್ಲಕ್ಕೂ ಮಿಗಿಲು ಸ್ನೇಹ | ಗೆಳೆಯರ ದಿನದ ಶುಭಾಶಯಗಳು

Published:
Updated:

ಇಂದು ವಿಶ್ವ ಸ್ನೇಹಿತರ ದಿನ. ವಿಶ್ವದೆಲ್ಲೆಡೆ, ದೇಶ -ಭಾಷೆ, ಲಿಂಗ ಭೇದ ಮರೆತು ಗೆಳೆತನದ ಶುಭಾಶಯಗಳು ವಿನಿಮಯವಾದವು. ಎಲ್ಲ ಭರವಸೆಗಳು ನೆಲಕ್ಕಚ್ಚಿದಾಗ, ಕೊನೆಗೆ ಜತೆಯಾಗಿ ನಿಲ್ಲುವುದು  ಸ್ನೇಹವೊಂದೇ ಎನ್ನುವ ಮಾತಿದೆ. ಮಾನವ  ಸಂಬಂಧಗಳು ಶಿಥಿಲವಾಗುತ್ತಿರುವ  ಈ ಹೊತ್ತಿನಲ್ಲಿ `ಸೇಹ  ಹೊಸ ಭಾವ ಸೇತುವೆ ಕಟ್ಟುತ್ತಿದೆ...

ಗೆಳೆತನವೆಂದರೆ ಹಾಗೆ. ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಕೊನೆಯವರೆಗೂ ಜೊತೆಯಲ್ಲಿರುವ ಸಂಬಂಧ. ಆ ಕಾರಣಕ್ಕೆ ಪ್ರೀತಿಗಿಂತ ಹೆಚ್ಚು ಶಾಶ್ವತ ಸ್ನೇಹ. ಯಾವುದೇ ಸಂಬಂಧವಿರದೇ ಎಲ್ಲೋ ಹುಟ್ಟಿದ  ನಮಗೆ ಯಾವುದೋ ಕ್ಷಣಗಳಲ್ಲಿ ಸ್ನೇಹಿತರಾಗಿ ಕೊನೆಯವರೆಗೂ ನಮ್ಮ  ಸುಖ ದುಃಖದ ಕ್ಷಣಗಳಲ್ಲಿ ಜೊತೆಯಾಗಿರುವೆ ಎಂಬ ಭರವಸೆ ನೀಡುವರು.

ಈ ಕಾರಣದಿಂದಲೇ ಪೋಷಕರಲ್ಲೂ ಹೇಳಿಕೊಳ್ಳದ ಅನೇಕ ವಿಷಯಗಳನ್ನು ಸ್ನೇಹಿತರ ಬಳಿ ಹೇಳಲು ಮೊದಲಾಗುತ್ತೇವೆ. ಪ್ರತಿಯೊಂದು ಸಂಬಂಧಗಳಿಗೂ ಒಂದು ದಿನವನ್ನಾಗಿ ಆಚರಿಸುವ ನಾವು ಈ ನಿರ್ಮಲ ಸ್ನೇಹವನ್ನು ಸಹ ಒಂದು ದಿನವನ್ನಾಗಿ ಆಚರಿಸುತ್ತೇವೆ. ಅದೇ `ಫ್ರೆಂಡ್‌ಶಿಪ್‌ಡೇ’. ಆಗಸ್ಟ್ ಬಂತೆಂದರೇ ಸಾಕು.

ಎಲ್ಲ ಕಡೆಯಲ್ಲೂ ಕೇಳುವ ಈ ಫ್ರೆಂಡ್‌ಶಿಪ್‌ಡೇ ಆಚರಣೆಯ ಹುಟ್ಟಿನ ಕಥೆ ರೋಚಕ. ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ರಾಷ್ಟ್ರಗಳ ನಡುವೆ ಉಂಟಾಗಿದ್ದ ಅಪನಂಬಿಕೆ ದ್ವೇಷವನ್ನು ಹೋಗಲಾಡಿಸಿ ಸ್ನೇಹಭಾವದ ಮೈತ್ರಿ ಮೂಡಿಸುವ ಸಲುವಾಗಿ ಅಮೆರಿಕದ ಕಾಂಗ್ರೆಸ್ 1935ರಂದು ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನವನ್ನಾಗಿ ಘೋಷಿಸಿತು.

ಇದು ಕೇವಲ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿರದೇ ವೈಯಕ್ತಿಕ ಆಚರಣೆಯೂ ಆಯಿತು. ಇದು  ಸಾಂಪ್ರದಾಯಿಕವಾದ  ಸ್ನೇಹಿತರ ದಿನದ  ಇತಿಹಾಸ.ಇನ್ನು ಕೆಲವರ ಪ್ರಕಾರ, ರೋಮ್‌ನಲ್ಲಿ ಆಗಸ್ಟೆಸ್ ಮತ್ತು ಜುಲಿಯೋ ಎಂಬ ಇಬ್ಬರು ಮಹಾನ್ ಸ್ನೇಹಿತರು ಇದ್ದರು. ಯಾವುದೋ ಸಂದರ್ಭದ ಕಾರಣಕ್ಕೆ ಆಗಸ್ಟೆಸ್‌ನನ್ನು ನೇಣಿಗೆ ಹಾಕಲಾಯಿತು

ಇದನ್ನು ತಿಳಿದ ಆತನ ಸ್ನೇಹಿತ ಜುಲಿಯೋ ಕೂಡ ಸಾವನ್ನಪ್ಪಿದ. ಇವರ ಗಾಢ ಸ್ನೇಹ ತಿಳಿದ ರೋಮ್‌ನ ದೊರೆ,  ಅವರು ಸಾವಿಗೀಡಾದ ದಿನ ಅಂದರೆ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಘೋಷಿಸಿದ.

ಈ ಎರಡು ತಿಂಗಳುಗಳಿಗೂ  ಅವರ ಹೆಸರುಗಳನ್ನೇ ಆಗಸ್ಟೆಸ್ (ಆಗಸ್ಟ್) ಮತ್ತು ಜುಲಿಯೋ (ಜುಲೈ) ಎಂದು ನಾಮಕರಣ ಮಾಡಿದ ಎಂದು  ಫ್ರೆಂಡ್‌ಶಿಪ್‌ನ ಸೂಚಕವಾಗಿ ಹೇಳುವ ಕಥೆಯೂ ಚಾಲ್ತಿಯಲ್ಲಿದೆ.

ಈ ಎಲ್ಲಾ ಕಥೆಗಳ ನಡುವೆ ಇದು ನಾವು ಆಚರಿಸುವ ಸ್ನೇಹಿತರ ದಿನ  ವಿಶಿಷ್ಟ. ಕೆಲವರು ತಮ್ಮ ಆತ್ಮೀಯ ಸ್ನೇಹಿತರಿಗೆ ಫ್ರೆಂಡ್‌ಶಿಫ್ ಬ್ಯಾಂಡ್‌ನ್ನು ಕೈಗೆ ಕಟ್ಟುವ ಮೂಲಕ ಆಚರಿಸಿದರೆ ಮತ್ತೆ ಕೆಲವರು ಗ್ರೀಟಿಂಗ್ ಕಾರ್ಡ್‌ಗಳ, ಎಸ್.ಎಂ.ಎಸ್, ಎಂ.ಎಂಎಸ್,  ಉಡುಗೊರೆಗಳನ್ನು ನೀಡುವ ಮೂಲಕ ಶುಭಾಶಯ ವಿನಿಮಯ ಮಾಡುತ್ತಾರೆ.

ಹೇಗಿದ್ದರೂ ರಜೆಯ ಮಜೆಯಲ್ಲಿರುವ ಭಾನುವಾರದ ದಿನಕ್ಕೆ ಈ ಸಂಭ್ರಮ ಹೊಸ ಮೆರುಗು ನೀಡಲು ಗೆಳೆಯರ ಜೊತೆ ಸುತ್ತಾಟ, ಪಾರ್ಟಿ, ಸಿನಿಮಾ, ಹೋಟೆಲ್‌ಗಳ ಭೇಟಿ ಹೀಗೆ  ತಮ್ಮ  ಆತ್ಮೀಯ ಸ್ನೇಹಿತರೊಂದಿಗೆ ದಿನಕಳೆಯುತ್ತ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ...ಎಲ್ಲ ಯುವ ಗೆಳೆಯ/ಗೆಳತಿಯರಿಗೂ ತಡವಾಗಿ ಶುಭಾಶಯಗಳು...

Post Comments (+)