ಗುರುವಾರ , ಮೇ 13, 2021
16 °C
ಕೊನೆಯ ಗಳಿಗೆಯಲ್ಲಿ ಕ್ಯೂಬಾ ಪ್ರಯಾಣ ರದ್ದು: ರಷ್ಯಾದಿಂದಲೂ ನಾಪತ್ತೆ!

ಸ್ನೊಡೆನ್‌ಗೆ ಈಕ್ವೆಡಾರ್ ಆಶ್ರಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಎಪಿ): ಅಮೆರಿಕ ಬೇಹುಗಾರಿಕಾ ಸಂಸ್ಥೆಯ ರಹಸ್ಯ ಮಾಹಿತಿ ಸೋರಿಕೆಯ ನಂತರ ಗಡೀಪಾರು ಭೀತಿಯಿಂದ ಹಾಂಕಾಂಗ್‌ಗೆ ಪಲಾಯನ ಮಾಡಿದ್ದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಜಿ ಗುತ್ತಿಗೆದಾರ ಮತ್ತು ಬೇಹುಗಾರಿಕಾ ಸಂಸ್ಥೆ ಸಿಐಎ ತಂತ್ರಜ್ಞ ಎಡ್ವರ್ಡ್ ಸ್ನೊಡೆನ್ ಆಶ್ರಯ ಕೋರಿ ಈಕ್ವೆಡಾರ್‌ಗೆ ತೆರಳುತ್ತಿದ್ದಾರೆ.ಈಕ್ವೆಡಾರ್‌ಗೆ ಹೊರಡಲು ಭಾನುವಾರ ಹಾಂಕಾಂಗ್‌ನಿಂದ ಮಾಸ್ಕೊಗೆ ತೆರಳಿದ್ದ ಅವರು, ಕ್ಯೂಬಾ, ವೆನಿಜುವೆಲಾ ಮಾರ್ಗವಾಗಿ ಈಕ್ವೆಡಾರ್ ತಲುಪಬೇಕಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ  ಪ್ರಯಾಣ ರದ್ದು ಪಡಿಸಿಕಾಣೆಯಾಗಿರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.ಅಮೆರಿಕ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿರುವ ಅವರು ರಷ್ಯಾದಲ್ಲೂ ಇಲ್ಲ ಎನ್ನಲಾಗಿದೆ. ರಷ್ಯಾದಿಂದ ನಿಗೂಢವಾಗಿ ಕಣ್ತಪ್ಪಿಸಿಕೊಂಡಿರುವ ಅವರು ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.ಈ ನಡುವೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ ಈ ವಿಷಯವಾಗಿ ರಷ್ಯಾ ಮತ್ತು ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.ಕಳೆದ ಕೆಲವು ವಾರಗಳ ಹಿಂದೆ ಹಾಂಕಾಂಗ್‌ನಲ್ಲಿ ಆಶ್ರಯ ಪಡೆದಿದ್ದ ಅವರು ಅಲ್ಲಿಂದ ಮಾಸ್ಕೊಗೆ ತೆರಳಿದ್ದರು. ಅಲ್ಲಿಯ ವಿಮಾನ ನಿಲ್ದಾಣದಲ್ಲಿಯೇ ಇಡೀ ರಾತ್ರಿ ಕಳೆದ ಅವರು, ಸೋಮವಾರ ಕ್ಯೂಬಾ, ವೆನಿಜುವೆಲಾ ಮಾರ್ಗವಾಗಿ ಈಕ್ವೆಡಾರ್ ತಲುಪಲಿದ್ದಾರೆ ಎನ್ನಲಾಗಿದೆ.ಮಾಸ್ಕೊದಿಂದ ಹವಾನಾಕ್ಕೆ ಹೊರಡಲಿದ್ದ ವಿಮಾನದಲ್ಲಿ ಅಮೆರಿಕ ಪಾಸ್‌ಪೋರ್ಟ್ ಬಳಸಿ ಅವರ ಹೆಸರಿನಲ್ಲಿ ಟಿಕೆಟ್ ಕಾದಿರಿಸಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಅವರು ಆ ವಿಮಾನದಲ್ಲಿ ಪ್ರಯಾಣಿಸಲಿಲ್ಲ. ಅವರಿಗಾಗಿ ಕಾಯ್ದಿರಿಸಿದ್ದ ಸೀಟು ಖಾಲಿ ಉಳಿದಿತ್ತು.`ಆಶ್ರಯ ಕೋರಿ ಈಕ್ವೆಡಾರ್ ಸರ್ಕಾರಕ್ಕೆ ಸ್ನೊಡೆನ್ ಬರೆದ ಮನವಿ ಪತ್ರ ತಲುಪಿದ್ದು ಅದನ್ನು ಪರಿಗಣಿಸಿರುವುದಾಗಿ' ವಿದೇಶಾಂಗ ಸಚಿವ ರಿಕಾರ್ಡೊ ಪಟಿನೊ ದೃಢಪಡಿಸಿದ್ದಾರೆ.`ವಿಶ್ವದ ಯಾವುದೇ ನಾಗರಿಕನ ವ್ಯಕ್ತಿಗತ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಹಕ್ಕು ರಕ್ಷಣೆಗೆ ಬದ್ಧ' ಎಂಬ ನಿಲುವು ತಾಳಿರುವ ಆ ದೇಶ `ಆಶ್ರಯ' ನೀಡುವ ಸ್ಪಷ್ಟ ಸೂಚನೆ ನೀಡಿದೆ.ವಿಕಿಲೀಕ್ಸ್ ನೆರವು: ವಿಕಿಲೀಕ್ಸ್ ಕೂಡಾ ಅವರಿಗೆ ನೆರವಿನ ಹಸ್ತ ಚಾಚಿದೆ.   ಭಯೋತ್ಪಾದನೆ ನಿಗ್ರಹ ಮತ್ತು ರಾಷ್ಟ್ರೀಯ ಭದ್ರತೆ ನೆಪದಲ್ಲಿ ವಿದೇಶಗಳ ಅಂತರ್ಜಾಲ ಮತ್ತು ದೂರವಾಣಿ ಮಾಹಿತಿಗಳನ್ನು ರಹಸ್ಯವಾಗಿ ಪರಿಶೀಲನೆ ನಡೆಸಿದ ಅಮೆರಿಕದ ಬೇಹುಗಾರಿಕಾ ಸಂಸ್ಥೆಯ ಕೃತ್ಯಗಳನ್ನು ಸ್ನೊಡೆನ್ `ಗಾರ್ಡಿಯನ್', `ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಗಳಿಗೆ ಬಹಿರಂಗಗೊಳಿಸಿದ್ದರು.

ಹೆಚ್ಚಿದ ಒತ್ತಡ: ಕಳೆದ ಹಲವು ದಿನಗಳಿಂದ ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ತನಗೆ ಒಪ್ಪಿಸುವಂತೆ ಅಮೆರಿಕ ಪದೇ ಪದೇ ಮಾಡಿಕೊಂಡ ಮನವಿ ಮತ್ತು ರಾಜತಾಂತ್ರಿಕ ಒತ್ತಡಗಳಿಗೆ ಅಲ್ಲಿಯ ಸರ್ಕಾರ ಮಣಿದಿರಲಿಲ್ಲ.ರಾಜತಾಂತ್ರಿಕ ಒತ್ತಡಗಳಿಂದಾಗಿ ಹಾಂಕಾಂಗ್ ತೊರೆದಿರುವ ಸ್ನೊಡೆನ್ ಮುಂದಿನ ದಿನಗಳಲ್ಲಿ ತೆರಳಬಹುದಾದ ರಾಷ್ಟ್ರಗಳೊಂದಿಗೆ ಅಮೆರಿಕ ಈಗಾಗಲೇ ಸಮಾಲೋಚನೆ ನಡೆಸಿದೆ.ಯಾವುದೇ ಕಾರಣಕ್ಕೂ ಅವರಿಗೆ ಆಶ್ರಯ ನೀಡದಂತೆ ಮುನ್ಸೂಚನೆ ನೀಡಿದೆ. ಅಮೆರಿಕ, ಸ್ನೊಡೆನ್ ಅವರ ಪಾಸ್‌ಪೋರ್ಟ್  ರದ್ದು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.