ಸ್ನೊಡೆನ್ ಆಶ್ರಯ ಅರ್ಜಿ ತಿರಸ್ಕರಿಸಿದ ಭಾರತ

ಬುಧವಾರ, ಜೂಲೈ 17, 2019
30 °C

ಸ್ನೊಡೆನ್ ಆಶ್ರಯ ಅರ್ಜಿ ತಿರಸ್ಕರಿಸಿದ ಭಾರತ

Published:
Updated:

ಬಂದಾರ ಸೆರಿ ಬೆಗವಾನ್ (ಬ್ರೂನೆ): ರಷ್ಯಾದಲ್ಲಿ ತಲೆ ಮರೆಸಿಕೊಂಡಿರುವ ಅಮೆರಿಕದ ಬೇಹುಗಾರಿಕಾ ತಾಂತ್ರಿಕ ವಿಶ್ಲೇಷಕ ಎಡ್ವರ್ಡ್ ಸ್ನೊಡೆನ್ ಅವರು ಆಶ್ರಯ ಕೋರಿ ಸಲ್ಲಿಸಿರುವ ಅರ್ಜಿಯನ್ನು ಭಾರತ ತಳ್ಳಿ ಹಾಕಿದೆ.ರಾಜಾಶ್ರಯಕ್ಕೆ ಸಂಬಂಧಿಸಿದಂತೆ ಭಾರತ ಅತ್ಯಂತ ಕಠಿಣ ನಿಲುವು ಮತ್ತು ನಿರ್ಬಂಧಿತ ಕಟ್ಟಪಾಡು ಹಾಗೂ ನಿರ್ದಿಷ್ಟ ನಿಯಮಾವಳಿಗಳನ್ನು ಹೊಂದಿದೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸ್ಪಷ್ಟಪಡಿಸಿದ್ದಾರೆ.ಬ್ರೂನೆಯ ದರುಸ್ಸಲಾಮ್‌ನಲ್ಲಿ ನಡೆಯುತ್ತಿರುವ ಆಸಿಯಾನ್ ಪ್ರಾದೇಶಿಕ ವೇದಿಕೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವ ಅವರು, ಆಶ್ರಯ ಕೋರಿ ಬಂದವರಿಗೆಲ್ಲ ಮುಕ್ತವಾಗಿ ಆಶ್ರಯ ನೀಡಲು ನಮ್ಮ ದೇಶವೇನೂ ಆಶ್ರಯತಾಣವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ರಷ್ಯಾದಲ್ಲಿರುವ ಭಾರತದ ದೂತಾವಾಸದ ಕಚೇರಿಗೆ ಮೂರು ದಿನಗಳ ಹಿಂದೆ ಆಶ್ರಯ ಕೋರಿ ಸ್ನೊಡೆನ್ ಸಲ್ಲಿಸಿರುವ ಅರ್ಜಿ ಮಂಗಳವಾರ ತಲುಪಿದೆ. ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅವರ ಮನವಿಯನ್ನು ಪುರಸ್ಕರಿಸುವ ಯಾವ ಅಂಶಗಳು ಗೋಚರಿಸಲಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.20 ರಾಷ್ಟ್ರಗಳಿಗೆ ಮನವಿ

ವಾಷಿಂಗ್ಟನ್ (ಪಿಟಿಐ): ಅಂತರ್ಜಾಲ ತಾಣಗಳಿಗೆ ಕನ್ನ ಹಾಕಿ ಅಮೆರಿಕ ಸಂಗ್ರಹಿಸಿರುವ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆಪಾದನೆಗೆ ಗುರಿಯಾಗಿರುವ ಎಡ್ವರ್ಡ್ ಜೆ ಸ್ನೊಡೆನ್ ಭಾರತ ಸೇರಿ ಇನ್ನಿತರ 20 ರಾಷ್ಟ್ರಗಳ ಆಶ್ರಯ ಕೋರಿದ್ದಾರೆ.

ಸ್ನೊಡೆನ್ ಸದ್ಯ ರಷ್ಯಾ ರಾಜಧಾನಿ ಮಾಸ್ಕೊ ಶೆರ್ಮೆಟ್ಯೆವೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದಾರೆ. ಅವರ ಪರವಾಗಿ ರಹಸ್ಯ ಮಾಹಿತಿಗಳನ್ನು ಬಯಲಿಗೆ ಎಳೆಯುವ ಅಂತರ್ಜಾಲ ತಾಣ ವಿಕಿಲೀಕ್ಸ್‌ನ ಕಾನೂನು ಸಲಹೆಗಾರರಾದ ಸಾರಾ ಹ್ಯಾರಿಸನ್ ಅವರು ಆಶ್ರಯದ ಕೋರಿಕೆಯನ್ನು ಸಲ್ಲಿಸಿದ್ದಾರೆ.ಆದರೆ, ಪೊಲೆಂಡ್ ಸೇರಿದಂತೆ ಹಲವು ದೇಶಗಳು ಅವರ ಮನವಿಯನ್ನು ತಳ್ಳಿಹಾಕಿವೆ.ಒಬಾಮ ವಿರುದ್ಧ ಕಿಡಿ: ಬರಾಕ್ ಒಬಾಮ ಅವರ ಆಡಳಿತದ ವಿರುದ್ಧ ಕೆಂಡಮಂಡಲವಾಗಿರುವ ಸ್ನೊಡೆನ್, `ನನ್ನ ಪೌರತ್ವ ಕಿತ್ತುಕೊಂಡು ಅತಂತ್ರನನ್ನಾಗಿ ಮಾಡಲಾಗಿದೆ. ದೇಶರಹಿತನನ್ನಾಗಿ ಮಾಡುವುದಕ್ಕೆ ನಾನು ಮಾಡಿರುವ ಅಪರಾಧವಾದರೂ ಏನು' ಎಂದಿದ್ದಾರೆ.`ನ್ಯಾಯಾಲಯದ ಯಾವುದೇ ಆದೇಶವಿಲ್ಲದೆ ನನ್ನ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ' ಎಂದು ಸ್ನೊಡೆನ್ ವಿಕಿಲೀಕ್ಸ್ ಅಂತರ್ಜಾಲ ತಾಣಕ್ಕೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.`ಒನ್ ಎಂಟ್ರಿ' ದಾಖಲೆ- ಅಮೆರಿಕ ಸಿದ್ಧತೆ: ಸ್ನೊಡೆನ್ ಪಾಸ್‌ಪೋರ್ಟ್ ರದ್ದುಮಾಡಿರುವ ಅಮೆರಿಕ,  ಅವರಿಗೆ ದೇಶಕ್ಕೆ ಹಿಂದಿರುಗಲು ಅಗತ್ಯವಿರುವ ದಾಖಲೆಯನ್ನು (ಒನ್ ಎಂಟ್ರಿ) ಒದಗಿಸುವುದಾಗಿ ಮತ್ತು ನ್ಯಾಯ ಸಮ್ಮತ ವಿಚಾರಣೆ ನಡೆಸುವುದಾಗಿ ಹೇಳಿದೆ.`ಮಾಹಿತಿ ಸೋರಿಕೆ ಇಲ್ಲ'

ನವದೆಹಲಿ (ಐಎಎನ್‌ಎಸ್):
ವಾಷಿಂಗ್ಟನ್‌ನಲ್ಲಿರುವ ಭಾರತದ ದೂತಾವಾಸ ಕಚೇರಿಯ  ಅಂತರ್ಜಾಲ ಮತ್ತು ದೂರವಾಣಿಯ ಮೂಲಕ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಮಾಹಿತಿಗೆ ಕನ್ನ ಹಾಕಿರುವ ವರದಿಗಳನ್ನು ಭಾರತ ಮಂಗಳವಾರ ತಳ್ಳಿಹಾಕಿದೆ.`ಇದು ಕೇವಲ ಕಂಪ್ಯೂಟರ್ ಆಧಾರಿತ ವರದಿಯಾಗಿದ್ದು, ಬೇಹುಗಾರಿಕೆ ಅಲ್ಲ. ನಮ್ಮಿಂದ ಯಾವುದೇ ರಹಸ್ಯ ಮಾಹಿತಿ ಸೋರಿಕೆಯಾಗಿಲ್ಲ. ಹೀಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಈ ಕುರಿತು ಉನ್ನತ ಮಟ್ಟದಲ್ಲಿ ಧ್ವನಿ ಎತ್ತುವ ಅಗತ್ಯವೂ ಕಾಣುತ್ತಿಲ್ಲ' ಎಂದು ಭಾರತ ಅಭಿಪ್ರಾಯಪಟ್ಟಿದೆ.ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಸ್ಪಷ್ಟಪಡಿಸಿದ್ದಾರೆ.ದೂರವಾಣಿ ಕರೆಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆಯೇ ಹೊರತು ಕದ್ದಾಲಿಸಿಲ್ಲ. ಯಾವುದೇ ಮಾಹಿತಿಗೂ ಕನ್ನ ಹಾಕಿಲ್ಲ. ಸೈಬರ್ ಸುರಕ್ಷತಾ ಕ್ರಮಗಳ ಕುರಿತು ಅಮೆರಿಕ ಮತ್ತು ಭಾರತ ನಡುವಿನ ಮಾತುಕತೆ ವೇಳೆ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಅವರು ತಿಳಿಸಿದರು.ಅಮೆರಿಕ ಯಾವ ರೀತಿಯ ಮಾಹಿತಿಗಳನ್ನು ಕಲೆ ಹಾಕಿದೆ ಎಂಬ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ವಿದೇಶಾಂಗ ವ್ಯವಹಾರಗಳ ಇಲಾಖೆಯ ಕ್ರಮದ ನಂತರ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.ಈ ಮಧ್ಯೆ ಪ್ರಕರಣದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಪಿಎಂ, ಅಮೆರಿಕ ಬೇಹುಗಾರಿಕೆ ವಿರುದ್ಧ ಪ್ರತಿಭಟನೆ ದಾಖಲಿಸಬೇಕು ಮತ್ತು ತಕ್ಷಣ ಈ ಕೃತ್ಯವನ್ನು ನಿಲ್ಲಿಸುವಂತೆ ಹೇಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.ಬೇಹುಗಾರಿಕೆ ನಡೆದಿಲ್ಲ ಎನ್ನುವ ಮೂಲಕ ಅಮೆರಿಕ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಎಂದು ವಿದೇಶಾಂಗ ಸಚಿವ ಖುರ್ಷಿದ್ ಅವರ ನಿಲುವನ್ನು ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತದ ರಹಸ್ಯ ಮಾಹಿತಿಗೆ ಕನ್ನ ಹಾಕಿರುವ ಬಗ್ಗೆ ಭಾರತದ ವಿದೇಶಾಂಗ ಸಚಿವರಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ಫ್ರಾನ್ಸ್, ಜರ್ಮನ್‌ನಂತಹ ಅಮೆರಿಕದ ಆಪ್ತ ರಾಷ್ಟ್ರಗಳು ಈ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವರು ವರದಿಯನ್ನು ತಳ್ಳಿ ಹಾಕಿರುವುದು ನಾಚಿಕೆಗೇಡು ಎಂದು ಸಿಪಿಎಂ ವ್ಯಂಗ್ಯವಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry