ಶನಿವಾರ, ಜುಲೈ 31, 2021
21 °C
ಅಮೆರಿಕದ ಎಚ್ಚರಿಕೆಗೆ ತೀವ್ರ ಆಕ್ರೋಶ

ಸ್ನೊಡೆನ್ ಹಸ್ತಾಂತರಕ್ಕೆ ರಷ್ಯಾ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಎಎಫ್‌ಪಿ): ಅಮೆರಿಕ ಬೇಹುಗಾರಿಕಾ ಸಂಸ್ಥೆಯ ರಹಸ್ಯ ಮಾಹಿತಿ ಸೋರಿಕೆ ಮಾಡಿರುವ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಜಿ ಗುತ್ತಿಗೆದಾರ ಮತ್ತು ಬೇಹುಗಾರಿಕಾ ಸಂಸ್ಥೆ ಸಿಐಎ ಮಾಜಿ ತಂತ್ರಜ್ಞ ಎಡ್ವರ್ಡ್ ಸ್ನೊಡೆನ್ ಅವರನ್ನು ಹಸ್ತಾಂತರ ಮಾಡಬೇಕೆಂಬ ಅಮೆರಿಕದ ಬೇಡಿಕೆಯನ್ನು ರಷ್ಯಾ ಮಂಗಳವಾರ ಖಡಾಖಂಡಿತವಾಗಿ ತಳ್ಳಿ ಹಾಕಿದೆ.`ಸ್ನೊಡೆನ್ ಅಥವಾ ಅವರ ಪ್ರವಾಸದ ಯೋಜನೆಯಿಂದ ನಮಗೇನೂ ಆಗಬೇಕಿಲ್ಲ. ಅವರ ಮಾರ್ಗವನ್ನು ಅವರೇ ಕಂಡುಕೊಳ್ಳುತ್ತಾರೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಬಳಿಕವಷ್ಟೇ ನಮ್ಮ ಅರಿವಿಗೆ ಬಂತು' ಎಂದಿರುವ ರಷ್ಯಾ ವಿದೇಶಾಂಗ ಸಚಿವ ಸರ್ಜೈ ಲಾವರೋವ್, ಸ್ನೊಡೆನ್ ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ.ಒಂದು ವೇಳೆ ರಷ್ಯಾ ಸ್ನೊಡೆನ್ ಅವರನ್ನು ಹಸ್ತಾಂತರ ಮಾಡದಿದ್ದರೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂಬ ಅಮೆರಿಕ ನೀಡಿರುವ ಎಚ್ಚರಿಕೆಗೆ ಸರ್ಜೈ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.`ಅಮೆರಿಕದ ಕಾನೂನು ಉಲ್ಲಂಘಿಸಲು ರಷ್ಯಾ ಪ್ರಯತ್ನಿಸುತ್ತಿದೆ ಮತ್ತು ಸಂಚು ನಡೆಸುತ್ತಿದೆ ಎಂಬ ಆರೋಪಕ್ಕೆ ಯಾವುದೇ ತಳಬುಡವಿಲ್ಲ ಮತ್ತು ಸ್ವೀಕಾರಾರ್ಹವಲ್ಲ' ಎಂದು ಅವರು ಹೇಳಿದರು.ಅಮೆರಿಕವು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹಲವು ದೇಶಗಳ ದೂರವಾಣಿ ಮತ್ತು ಅಂತರ್ಜಾಲ ಮಾಹಿತಿಗೆ ಕನ್ನ ಹಾಕಿದ ವಿಷಯವನ್ನು ಸ್ನೊಡೆನ್ ಬಹಿರಂಗಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಅಮೆರಿಕ ತೀವ್ರ ಮುಜುಗರಕ್ಕೆ ಒಳಗಾಗಿತ್ತು.ದೊಡ್ಡಣ್ಣನ ಕೆಂಗಣ್ಣಿಗೆ ಗುರಿಯಾಗಿದ್ದ ಸ್ನೊಡೆನ್ ಕೆಲವು ವಾರ ಹಾಂಕಾಂಗ್‌ನಲ್ಲಿ ಇದ್ದರು. ಸ್ನೊಡೆನ್ ಹಸ್ತಾಂತರಕ್ಕೆ ಸತತವಾಗಿ ಅಮೆರಿಕ ಚೀನಾದ ಮೇಲೆ ಒತ್ತಡ ಹೇರಿದ್ದರಿಂದ  ಬಳಿಕ ಸ್ನೊಡೆನ್ ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರಷ್ಯಾ ಇದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.ಸ್ನೊಡೆನ್‌ಗೆ ಈಕ್ವೆಡಾರ್ ಆಶ್ರಯ ಒದಗಿಸುವ ಸೂಚನೆ ಇದ್ದು, ಸೋಮವಾರ ಮಾಸ್ಕೊ ವಿಮಾನ ನಿಲ್ದಾಣದಿಂದ ಹವಾನಕ್ಕೆ ತೆರಳುವ ವಿಮಾನದಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ಆದರೆ, ವಿಮಾನದಲ್ಲಿ ಅವರು ಕಾಣಿಸಿಕೊಂಡಿಲ್ಲ. ಹೀಗಾಗಿ ಸ್ನೊಡೆನ್ ಎಲ್ಲಿದ್ದಾರೆ ಎನ್ನುವ ವಿಷಯ ಇನ್ನೂ ನಿಗೂಢವಾಗಿಯೇ ಇದೆ' ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.`ರಷ್ಯಾದ ಮೇಲೆ ವಿಶ್ವಾಸ'

ವಾಷಿಂಗ್ಟನ್ (ಐಎಎನ್‌ಎಸ್
): `ಸ್ನೊಡೆನ್ ರಷ್ಯಾದಲ್ಲಿಯೇ ಇದ್ದಾರೆ ಎನ್ನುವುದು ನಮ್ಮ ಊಹೆ. ಒಂದುವೇಳೆ ಅದು ನಿಜವಾದರೆ ಅವರು ನಮ್ಮ ವಶಕ್ಕೆ ಒಪ್ಪಿಸುತ್ತಾರೆ ಎಂಬ ಭರವಸೆ ಇದೆ' ಎಂದು ಶ್ವೇತ ಭವನದ ವಕ್ತಾರ ಜೇ ಕಾರ್ನಿ ಹೇಳಿದ್ದಾರೆ.`ಬಾಸ್ಟನ್ ಮ್ಯಾರಾಥಾನ್ ಬಾಂಬ್ ಸ್ಫೋಟದ ಸಂದರ್ಭದಲ್ಲಿ ರಷ್ಯಾ ಸಾಕಷ್ಟು ಸಹಕಾರ ನೀಡಿತು. ಈ ಹಿಂದೆ ಕೂಡ ಅನೇಕ ಅಪರಾಧಿಗಳನ್ನು ಅಮೆರಿಕಕ್ಕೆ ಹಸ್ತಾಂತರಿಸಿದೆ. ಈಗ ಸ್ನೊಡೆನ್ ಅವರನ್ನು ಹಸ್ತಾಂತರಿಸಲು ಎಲ್ಲ ಆಯ್ಕೆಗಳು ಮುಕ್ತವಾಗಿವೆ' ಎಂದು ಕಾರ್ನಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.