ಬುಧವಾರ, ಮೇ 12, 2021
25 °C

ಸ್ನ್ಯಾಕ್- ಕಾಫಿಗೆ ಮೀಟಿಂಗ್ ಮಾಡಬೇಕೇ?:ಗುರಿ ಸಾಧನೆ ವಿಫಲ: ಡಿಸಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಿಗದಿತ ಗುರಿ ಸಾಧನೆ ಮಾಡದೇ ಬರೀ ಅಂಕಿ- ಅಂಶಗಳ ಆಟವಾಡುವ ವಾರ್ಷಿಕ ಸಾಲ ಯೋಜನೆಯಿಂದ ಪ್ರಯೋಜನವೇನೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಕಟುವಾಗಿ ಟೀಕಿಸಿದರು.

“ಪ್ರತಿ ವರ್ಷ ಬಿಡುಗಡೆ ಮಾಡುವ ವಾರ್ಷಿಕ ಸಾಲ ಯೋಜನೆಯಲ್ಲಿ ಆ ವರ್ಷದ ಗುರಿ ನಿಗದಿಪಡಿಸಲಾಗಿರುತ್ತದೆ. ಆದರೆ ಎರಡು- ಮೂರು ವರ್ಷಗಳಿಂದಲೂ ನಿರೀಕ್ಷಿತ ಗುರಿ ಸಾಧನೆ ಮಾಡಿಲ್ಲ. ಹಾಗಿದ್ದರೆ ಸಾಲ ಬಿಡುಗಡೆ ಸಭೆ ಮಾಡುವುದೇಕೆ?” ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.ಜಿಲ್ಲಾ ಲೀಡ್‌ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತಯಾರಿಸಿದ 2012-13ನೇ ಸಾಲಿನ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬುಧವಾರ ಇಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 2011-12ನೇ ಸಾಲಿನ ವಾರ್ಷಿಕ ಸಾಲ ಯೋಜನೆಯ ಆದ್ಯತಾ ವಲಯದಲ್ಲಿ 2011ರ ಡಿಸೆಂಬರ್ ಅಂತ್ಯದವರೆಗೆ ಕೇವಲ ಶೇ. 45ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಡಾ. ವಿಶಾಲ್ ತೀವ್ರ ಅತೃಪ್ತಿ ವ್ಯಕ್ತಪಡಿಸಿ, “ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು ನಿಗದಿತ ಗುರಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ.ಹಿಂದಿನ ವರ್ಷದಲ್ಲಿ ನಿಗದಿತ ಗುರಿ ಸಾಧಿಸದೆ ಮುಂದಿನ ವರ್ಷದ ವಾರ್ಷಿಕ ಸಾಲ ಯೋಜನೆಯಲ್ಲಿ ಗುರಿ ಹೆಚ್ಚಳ ಮಾಡುವುದರಿಂದ ಉಪಯೋಗವಿಲ್ಲ” ಎಂದು ಹೇಳಿದರು.ಕಳೆದ ಮೂರು ವರ್ಷಗಳಿಂದಲೂ ಗುರಿ ಸಾಧನೆಯಲ್ಲಿ ಇಳಿಮುಖವಾಗುತ್ತಲೇ ಇದೆ. 2009-10ರಲ್ಲಿ ಶೇ. 94ರಷ್ಟು ಗುರಿ ಸಾಧಿಸಿದ್ದರೆ, 2010-11ರಲ್ಲಿ ಶೇ. 70 ಹಾಗೂ 2011-12ರಲ್ಲಿ ಡಿಸೆಂಬರ್ ಅಂತ್ಯದವರೆಗೆ ಶೇ. 45ರಷ್ಟು ಸಾಧನೆ ಮಾಡಲಾಗಿದೆ. ಕಳೆದ ವರ್ಷದ ಅಂಕಿ-ಅಂಶ ಗಮನದಲ್ಲಿ ಇಟ್ಟುಕೊಳ್ಳದೇ ಈ ವರ್ಷ ಯೋಜನಾ ಪ್ರಮಾಣವನ್ನು ಏರಿಸಿದರೆ ಅದರಿಂದ ಏನು ಲಾಭವಿದೆ?ಎಂದು ಬ್ಯಾಂಕಿನ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. “ಬರೀ ಅಂಕಿ-ಅಂಶ ಇಟ್ಟುಕೊಂಡು ತಯಾರಿಸಿದ ಯೋಜನಾ ವರದಿ ಬಿಡುಗಡೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಿಗದಿತ ಗುರಿ ಸಾಧಿಸದೇ ಬರೀ ಸ್ನ್ಯಾಕ್- ಕಾಫಿಯೊಂದಿಗೆ ಮೀಟಿಂಗ್ ಮಾಡಲು ನಮ್ಮನ್ನು ಕರೆಯುವುದಾದರೂ ಯಾಕೆ?” ಎಂದು ಡಾ. ವಿಶಾಲ್ ತರಾಟೆಗೆ ತೆಗೆದುಕೊಂಡರು.ತಬ್ಬಿಬ್ಬು: ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಬ್ಯಾಂಕಿನ ಅಧಿಕಾರಿಗಳು ತಮ್ಮ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ, ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತ ಸಮಯ ವ್ಯಯಿಸಿದ್ದು ಜಿಲ್ಲಾಧಿಕಾರಿಗಳನ್ನು ಇನ್ನಷ್ಟು ಕೆರಳಿಸಿತು. “ಕೇಳಿದ ಮಾಹಿತಿ ಅವರಲ್ಲಿ ಇಲ್ಲ; ಅದರಿಂದ ಗುರಿ ಸಾಧನೆ ಆಗುತ್ತಿಲ್ಲ; ಆದ್ದರಿಂದ ಪ್ರಗತಿ ಸಾಧ್ಯವಾಗುತ್ತಿಲ್ಲ; ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೂಡ ಜರುಗಿಸುತ್ತಿಲ್ಲ.

 

ಹೀಗಾದರೆ ಹೇಗೆ?” ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್‌ಬಿಐನ ಸಹಾಯಕ ಜನರಲ್ ಮ್ಯಾನೇಜರ್ ವಿ. ಶ್ರೀನಿವಾಸ್ ಅವರನ್ನು ಡಿಸಿ ಪ್ರಶ್ನಿಸಿದರು.ಪರಿಷ್ಕರಣೆಗೆ ಸಲಹೆ: ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಣಿ ಶಂಕ್ರೆಪ್ಪ ಅವರು, 2012-13ನೇ ಸಾಲಿನಲ್ಲಿ ಒಟ್ಟು 2,088 ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಆದ್ಯತಾ ವಲಯಕ್ಕೆ 1,699 ಕೋಟಿ ರೂಪಾಯಿ ಮತ್ತು ಆದ್ಯತಾ ರಹಿತ ವಲಯಕ್ಕೆ 389 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಆದರೆ ಜಿಲ್ಲಾಧಿಕಾರಿ ಡಾ. ವಿಶಾಲ್, ಈ ಯೋಜನೆಯು ವಾಸ್ತವಿಕ ಅಂಶಗಳಿಂದ ದೂರವಾಗಿದೆ. 2011-12ನೇ ವಾರ್ಷಿಕ ಸಾಲ ಯೋಜನೆಯ ಆದ್ಯತಾ ವಲಯದಲ್ಲಿ 2012ರ ಮಾರ್ಚ್ ಅಂತ್ಯದವರೆಗೆ ಸಾಧಿಸಲಾದ ವಾಸ್ತವಿಕ ಪ್ರಗತಿಯನ್ನು ಆಧಾರವಾಗಿ ಇಟ್ಟುಕೊಂಡು ಇದಕ್ಕೆ ಶೇ. 20ರಷ್ಟು ಸೇರಿಸಿ 2012-13ನೇ ಸಾಲಿನ ಜಿಲ್ಲಾ ವಾರ್ಷಿಕ ಸಾಲ ಯೋಜನೆಯ ಗುರಿಯನ್ನು ಮರುನಿಗದಿಪಡಿಸಬೇಕು ಎಂದು ಸಲಹೆ ಮಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿಜಯಕುಮಾರ ಮಾತನಾಡಿ, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಧ ಮಾಡಿಕೊಂಡು ಬ್ಯಾಂಕ್ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದರು.ಕೆನರಾ ಬ್ಯಾಂಕಿನ ಡಿಜಿಎಂ ವಿ.ಜಿ.ಲಿಂಗರಾಜಪ್ಪ ಹಾಜರಿದ್ದರು. ಜ್ಯೋತಿ ಪ್ರಾರ್ಥಿಸಿದರು. ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಪಿ.ಪಿ.ಜಿ. ಮುನಿಸುಬ್ಬಾರೆಡ್ಡಿ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.